ನಕ್ಸಲ್‌ ಚಟುವಟಿಕೆ : ಬೆಳ್ತಂಗಡಿ ಕೋರ್ಟ್‌ಗೆ ಇಬ್ಬರು ನಕ್ಸಲರ ಹಾಜರು - ಪೊಲೀಸರ ವಶಕ್ಕೆ

| N/A | Published : Apr 08 2025, 01:47 AM IST / Updated: Apr 08 2025, 05:55 AM IST

ನಕ್ಸಲ್‌ ಚಟುವಟಿಕೆ : ಬೆಳ್ತಂಗಡಿ ಕೋರ್ಟ್‌ಗೆ ಇಬ್ಬರು ನಕ್ಸಲರ ಹಾಜರು - ಪೊಲೀಸರ ವಶಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

  ಬಿ.ಜಿ.ಕೃಷ್ಣಮೂರ್ತಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಳಸ ನಿವಾಸಿ ಸಾವಿತ್ರಿಯನ್ನು ಕೇರಳದ ವಯನಾಡ್‌ನಲ್ಲಿ ಬಂಧಿಸಿದ್ದರು. ಕೇರಳದ ಜೈಲಿನಲ್ಲಿದ್ದ ಇವರಿಬ್ಬರನ್ನು ಬಾಡಿ ವಾರಂಟ್ ಮೂಲಕ ಸೋಮವಾರ ಬೆಳ್ತಂಗಡಿ ನ್ಯಾಯಾಲಯದಿಂದ ವಶಕ್ಕೆ ಪಡೆದಿರುವ   ಬೆಳ್ತಂಗಡಿ ಪೊಲೀಸರು

 ಬೆಳ್ತಂಗಡಿ : ತಾಲೂಕಿನಲ್ಲಿ ನಡೆದ ಮೂರು ನಕ್ಸಲ್ ಚಟುವಟಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇರಳದ ಜೈಲಿನಲ್ಲಿದ್ದ ಇಬ್ಬರು ನಕ್ಸಲ್ ನಾಯಕರನ್ನು ಬೆಳ್ತಂಗಡಿ ಪೊಲೀಸರು ಬಾಡಿ ವಾರೆಂಟ್ ಮೂಲಕ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇಬ್ಬರು ನಕ್ಸಲರನ್ನು ಮೂರು ದಿನ ಪೊಲೀಸ್‌ ಕಸ್ಟಡಿಗೆ‌ ಒಪ್ಪಿಸಿ ಬೆಳ್ತಂಗಡಿ ನ್ಯಾಯಾಲಯ ಆದೇಶ ನೀಡಿದ್ದು, ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಮೂರು ಪ್ರಕರಣಗಳ ತನಿಖೆ ನಡೆಸಲಿದ್ದಾರೆ‌.

2021ರ ಆ.8ರಂದು ಕೇರಳ ಪೊಲೀಸರು ಮೋಸ್ಟ್ ವಾಟೆಂಡ್ ನಕ್ಸಲ್ ನಾಯಕರಾದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ನಿವಾಸಿ, ನಕ್ಸಲ್ ಪಶ್ಚಿಮ ಘಟ್ಟದ ವಿಶೇಷ ಸಮಿತಿಯ ಕಾರ್ಯದರ್ಶಿಯಾಗಿದ್ದ ಬಿ.ಜಿ.ಕೃಷ್ಣಮೂರ್ತಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಳಸ ನಿವಾಸಿ ಸಾವಿತ್ರಿಯನ್ನು ಕೇರಳದ ವಯನಾಡ್‌ನಲ್ಲಿ ಬಂಧಿಸಿದ್ದರು. ಕೇರಳದ ಜೈಲಿನಲ್ಲಿದ್ದ ಇವರಿಬ್ಬರನ್ನು ಬಾಡಿ ವಾರಂಟ್ ಮೂಲಕ ಸೋಮವಾರ ಬೆಳ್ತಂಗಡಿ ನ್ಯಾಯಾಲಯದಿಂದ ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಬಿ.ಜಿ.ಕೃಷ್ಣಮೂರ್ತಿ ವಿರುದ್ಧ 53 ಪ್ರಕರಣಗಳು ಹಾಗೂ ಸಾಮಿತ್ರಿ ವಿರುದ್ಧ 22 ಪ್ರಕರಣಗಳು ದಾಖಲಾಗಿದ್ದು, ಇವು ತನಿಖೆಯಲ್ಲಿದೆ.2012-2013ರಲ್ಲಿ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಮಚಂದ್ರ ಭಟ್ ಮನೆಯ ಅಂಗಳದಲ್ಲಿದ್ದ ಕಾರು ಹಾಗೂ ಬೈಕ್‌ಗೆ ಬೆಂಕಿ ಹಚ್ಚಿದ ಪ್ರಕರಣ, ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಕಾಯರ್ತಡ್ಕದಲ್ಲಿ ನಕ್ಸಲ್ ಪರವಾದ ಬ್ಯಾನರ್ ಹಾಕಿದ ಪ್ರಕರಣ ಹಾಗೂ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮಲವಂತಿಗೆ ಗ್ರಾಮದಲ್ಲಿ ಭಾರಿ ಸ್ಫೋಟಕಗಳು ಪತ್ತೆಯಾದ ಪ್ರಕರಣದಲ್ಲಿ ಇಬ್ಬರು ಆರೋಪಿಗಳಾಗಿದ್ದು, ಬೆಳ್ತಂಗಡಿ ಪೊಲೀಸರು ಬಾಡಿ ವಾರೆಂಟ್ ಮೂಲಕ ಕೇರಳ ಜೈಲಿನಿಂದ ಸೋಮವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ತರಿಸಿ ಇಲ್ಲಿಂದ ವಶಕ್ಕೆ ಪಡೆದುಕೊಂಡಿದ್ದಾರೆ.

ಕೇರಳದಿಂದ ಅಲ್ಲಿನ ಪೊಲೀಸರು ಬಿಗಿ ಭದ್ರತೆಯಲ್ಲಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಇಬ್ಬರು ನಕ್ಸಲ್ ನಾಯಕರನ್ನು ಹಾಜರುಪಡಿಸಿದ್ದು, ಬಳಿಕ ತನಿಖಾಧಿಕಾರಿ ಬಂಟ್ವಾಳ ಡಿವೈಎಸ್ಪಿ ವಿಜಯ ಪ್ರಸಾದ್ ಅವರ ತಂಡಕ್ಕೆ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಇಬ್ಬರು ನಕ್ಸಲರನ್ನು ನ್ಯಾಯಾಲಯ ಒಪ್ಪಿಸಿದೆ. ಬೆಳ್ತಂಗಡಿ, ವೇಣೂರು, ಧರ್ಮಸ್ಥಳ , ಪುಂಜಾಲಕಟ್ಟೆ ಪೊಲೀಸರು ಬೆಳ್ತಂಗಡಿ ನ್ಯಾಯಾಲಯದ ಪರಿಸರದಲ್ಲಿ ಭದ್ರತೆ ನೀಡಿದ್ದರು.

ಸಾವಿತ್ರಿ ಕುಟುಂಬಸ್ಥರ ಭೇಟಿ:

ನಕ್ಸಲ್ ನಾಯಕಿ ಸಾವಿತ್ರಿ ಅವರ ಕುಟುಂಬಸ್ಥರು ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿ ಅವರನ್ನು ಬೇಟಿಯಾಗಿ ಅವರೊಂದಿಗೆ ಮಾತುಕತೆ ನಡೆಸಿದರು. ಬಳಿಕ ಮಾಧ್ಯಮ ದವರೊಂದಿಗೆ ಮಾತನಾಡಿದ ಕುಟುಂಬದ ಸದಸ್ಯರು ಈ ಹಿಂದೆ ಶಿವಮೊಗ್ಗದಲ್ಲಿ ನ್ಯಾಯಾಲಯಕ್ಕೆ ಕರೆತಂದಾಗ ಭೇಟಿಯಾಗಿದ್ದೆವು. ಇದೀಗ ಮತ್ತೆ ಭೇಟಿಯಾಗಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.

 ಸುಮಾರು 12 ವರ್ಷಗಳ ಹಿಂದೆ ಸಾವಿತ್ರಿ ಮನೆ ಬಿಟ್ಟು ಹೋಗಿದ್ದರು. ಎಲ್ಲಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಬಳಿಕ ನಕ್ಸಲ್ ಚಳವಳಿಯಲ್ಲಿದ್ದಾರೆ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ತಿಳಿಯಿತು. ಇದೀಗ ಇಲ್ಲಿ ಬಂದು ಅವರನ್ನು ಭೇಟಿಯಾಗಿದ್ದೇವೆ ಅವರನ್ನು ನೋಡಿ ತುಂಬಾ ಸಂತಸವಾಗಿದೆ. ಅವರ ಮೇಲೆ ತುಂಬಾ ಕೇಸುಗಳಿವೆ ಎಂದು ತಿಳಿಯಿತು. ಎಲ್ಲ ಪ್ರಕರಣಗಳಿಂದ ಮುಕ್ತರಾಗಿ ಅವರು ಮನೆಗೆ ಬರುವುದನ್ನು ಕಾಯುತ್ತಿದ್ದೇವೆ 

-ಅನಿಲ್ ಕುಮಾರ್, ಸಾವಿತ್ರಿ ಸಂಬಂಧಿ 

ಬಿ.ಜಿ ಕೃಷ್ಣಮೂರ್ತಿ ಮತ್ತು ಸಾವಿತ್ರಿ ಯನ್ನು ಬೆಳ್ತಂಗಡಿ ಪೊಲೀಸರು ವಾರೆಂಟ್ ಮೇಲೆ ಇದೀಗ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಇದೀಗ ಮೂರು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ. ಬೆಳ್ತಂಗಡಿ ತಾಲೂಕಿನಲ್ಲಿವಿವರ ವಿರುದ್ದ ಮೂರು ಪ್ರಕರಣಗಳಿವೆ ಎ‌ 9 ರಂದು ಇವರನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

-ಶಿವಕುಮಾರ್, ನ್ಯಾಯವಾದಿಗಳು ಬೆಳ್ತಂಗಡಿ.