ಸಾರಾಂಶ
ಕಳೆದ ಒಂದು ವಾರದಿಂದ ಅರಕಲಗೂಡು ತಾಲೂಕಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಶಿಥಿಲಾವಸ್ಥೆ ತಲುಪಿದ್ದ ಮನೆಯ ಗೋಡೆಗಳು ಕುಸಿದು ಬಿದ್ದಿವೆ.ವಾಸದ ಮನೆಗಳ ಗೋಡೆ, ಮೇಲ್ಛಾವಣಿ ಕುಸಿತಗೊಂಡಿದ್ದು ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಮನೆಗಳಲ್ಲಿದ್ದ ದವಸ ಧಾನ್ಯಗಳು, ಬಟ್ಟೆ, ಇತರೆ ಪರಿಕರಗಳಿಗೆ ಹಾನಿ ಉಂಟಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ಜೂನ್ ತಿಂಗಳಿನಿಂದ ಈ ವರೆಗೆ ಮಳೆಯಿಂದ ಒಟ್ಟು 71 ಮನೆಗಳಿಗೆ ಹಾನಿಯಾಗಿದೆ.
ಕನ್ನಡಪ್ರಭ ವಾರ್ತೆ ಅರಕಲಗೂಡು
ತಾಲೂಕಿನಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ಕಳೆದ ಮೂರು ದಿನಗಳಲ್ಲಿ 49 ಮನೆಗಳ ಗೋಡೆ ಕುಸಿದು ಬಿದ್ದಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.ಕಳೆದ ಒಂದು ವಾರದಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಶಿಥಿಲಾವಸ್ಥೆ ತಲುಪಿದ್ದ ಮನೆಯ ಗೋಡೆಗಳು ಕುಸಿದು ಬಿದ್ದಿವೆ. ಹಲವು ಗ್ರಾಮಗಳಲ್ಲಿನ ಕೃಷಿ ಬೆಳೆಗಳು ಕೂಡ ಜಲಾವೃತಗೊಂಡಿದ್ದು ಅಪಾರ ಪ್ರಮಾಣದ ನಷ್ಟ ಉಂಟಾಗಿರುವ ಕುರಿತು ವರದಿಯಾಗಿದೆ.ಶುಕ್ರವಾರ ಶನಿವಾರ ಮಳೆ ಸುರಿಯಿತು. ಇದರಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ವಾಸದ ಮನೆಗಳ ಗೋಡೆ, ಮೇಲ್ಛಾವಣಿ ಕುಸಿತಗೊಂಡಿದ್ದು ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಮನೆಗಳಲ್ಲಿದ್ದ ದವಸ ಧಾನ್ಯಗಳು, ಬಟ್ಟೆ, ಇತರೆ ಪರಿಕರಗಳಿಗೆ ಹಾನಿ ಉಂಟಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ಜೂನ್ ತಿಂಗಳಿನಿಂದ ಈ ವರೆಗೆ ಮಳೆಯಿಂದ ಒಟ್ಟು 71 ಮನೆಗಳಿಗೆ ಹಾನಿಯಾಗಿದೆ.
ಮುಸುಕಿನ ಜೋಳ, ತಂಬಾಕು, ಆಲೂಗೆಡ್ಡೆ, ಶುಂಠಿ ಸೇರಿದಂತೆ ಪ್ರಮುಖ ವಾಣಿಜ್ಯ ಬೆಳೆಗಳು, ತೋಟಗಾರಿಕಾ ಬೆಳೆ ಪ್ರದೇಶಗಳಲ್ಲಿ ನೀರು ನಿಂತು ಬೆಳೆ ಹಾನಿಯಾಗುವ ಹಾಗೂ ರೋಗ ಬಾಧೆಗೆ ತುತ್ತಾಗುವ ಅಪಾಯ ಎದುರಾಗಿದೆ. ಕೃಷಿ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿದೆ. ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿರುವ ಕಾರಣ ಜಲಾನಯನ ಪ್ರದೇಶದ ಅಡಿಕೆ ತೋಟಗಳಿಗೆ ನೀರು ನುಗ್ಗಿದೆ. ಒಂದೆರಡು ದಿನದಲ್ಲಿ ಮಳೆ ಕಡಿಮೆಯಾಗಿ ನೀರು ಇಳಿಕೆಯಾದಲ್ಲಿ ಸಮಸ್ಯೆ ಇಲ್ಲ. ಮಳೆ ಮುಂದುವರಿದು ನೀರು ಇಳಿಕೆಯಾಗದಿದ್ದಲ್ಲಿ ಇಳುವರಿಯ ಮೇಲೆ ತೀವ್ರ ಹೊಡೆತ ಬೀಳುವ ಅಪಾಯವಿದೆ. ತಾಲೂಕಿನ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾಗಿರುವ ಮಳೆ ವಿವರ ಹೀಗಿದೆ. ಅರಕಲಗೂಡು 4. 6 ಸೆಂ.ಮೀ ಮಲ್ಲಿಪಟ್ಟಣ 5.2 ಸೆಂ. ಮೀ, ದೊಡ್ಡಮಗ್ಗೆ 4.4 ಸೆಂ. ಮೀ, ರಾಮನಾಥಪುರ 4.1 ಸೆಂ.ಮೀ, ಕೊಣನೂರು 4.2 ಸೆಂ. ಮೀ, ಬಸವಾಪಟ್ಟಣ 4.7 ಸೆಂ.ಮೀ, ದೊಡ್ಡಬೆಮ್ಮತ್ತಿ ಯಲ್ಲಿ 2.2 ಸೆಂ. ಮೀ ಮಳೆ ದಾಖಲಾಗಿದೆ.