ಸಾರಾಂಶ
ಬಾಳೆಹೊನ್ನೂರು, ಹಣ ದ್ವಿಗುಣಗೊಳಿಸುವುದಾಗಿ ನಂಬಿಸಿ ಪಟ್ಟಣಕ್ಕೆ ಕರೆಸಿಕೊಂಡ ನಾಲ್ವರು ಆರೋಪಿಗಳು ಬಾಗಲಕೋಟೆ ಹಾಗೂ ಬೆಂಗಳೂರು ಮೂಲದ ನಾಲ್ವರಿಂದ ಹಣ ಪಡೆದು ವಂಚನೆ ಮಾಡಿದ ಘಟನೆ ಬಾಳೆಹೊನ್ನೂರು ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದ್ದು, ಘಟನೆ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದು, ಓರ್ವ ಪರಾರಿಯಾಗಿದ್ದಾನೆ.
ಬಾಗಲಕೋಟೆ, ಬೆಂಗಳೂರು ಮೂಲದ ನಾಲ್ವರಿಗೆ ಮೋಸ । ₹ 4.50 ಲಕ್ಷ ಪಡೆದು ಪರಾರಿ । ಪೊಲೀಸರ ಮಿಂಚಿನ ಕಾರ್ಯಾಚರಣೆಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಹಣ ದ್ವಿಗುಣಗೊಳಿಸುವುದಾಗಿ ನಂಬಿಸಿ ಪಟ್ಟಣಕ್ಕೆ ಕರೆಸಿಕೊಂಡ ನಾಲ್ವರು ಆರೋಪಿಗಳು ಬಾಗಲಕೋಟೆ ಹಾಗೂ ಬೆಂಗಳೂರು ಮೂಲದ ನಾಲ್ವರಿಂದ ಹಣ ಪಡೆದು ವಂಚನೆ ಮಾಡಿದ ಘಟನೆ ಬಾಳೆಹೊನ್ನೂರು ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದ್ದು, ಘಟನೆ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದು, ಓರ್ವ ಪರಾರಿಯಾಗಿದ್ದಾನೆ.ಮಂಡ್ಯ ಮೂಲದ ರಾಜೇಂದ್ರ, ನಂದೀಶ್ ಹಾಗೂ ಮೂಡಿಗೆರೆ ಗಜೇಂದ್ರ ಬಂಧಿತ ಆರೋಪಿಗಳು. ಮೂಡಿಗೆರೆ ಮೂಲದ ಮತ್ತೋರ್ವ ಆರೋಪಿ ಚೇತನ್ ಸ್ಥಳದಿಂದ ಪರಾರಿಯಾಗಿದ್ದಾನೆ.ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ನವನಗರದ ಮಹಾಂತೇಶ್ ಎಸ್.ಹಳ್ಳೂರು, ಪ್ರಭುದೇವ್ ಹಾಗೂ ಬೆಂಗಳೂರು ವಾಸಿ ಮಂಜುನಾಥ, ಮುರುಳೀಧರ ವಂಚನೆಗೊಳಾದವರು.ಬಾಗಲಕೋಟೆ ಮಹಾಂತೇಶ್ ಅವರ ಸ್ನೇಹಿತ ಪ್ರಭುದೇವ್ ಗೆ ಕಳೆದ 3 ದಿನಗಳ ಹಿಂದೆ ಮಂಡ್ಯದ ರಾಜೇಂದ್ರ ಎಂಬಾತ ಫೋನ್ ಮೂಲಕ ಆಕಸ್ಮಿಕವಾಗಿ ಪರಿಚಯವಾಗಿದ್ದು, ರಾಜೇಂದ್ರ, ಪ್ರಭುದೇವ್‌ಗೆ ಮಠವೊಂದಕ್ಕೆ ಸೇರಿದ ₹100 ಮುಖಬೆಲೆಯ ಕೋಟಿಗಟ್ಟಲೇ ಹಣವಿದೆ. ನೀವುಗಳು ₹ 500 ಮುಖಬೆಲೆಯ ನೋಟುಗಳನ್ನು ₹1 ಲಕ್ಷ ನಮಗೆ ನೀಡಿದರೆ ನಾವು ₹100ರ ಮುಖಬೆಲೆಯ ₹2 ಲಕ್ಷ ಹಣ ನಿಮಗೆ ನೀಡುತ್ತೇವೆ ಎಂದು ತಿಳಿಸಿದ್ದಾರೆ.ಇದನ್ನು ನಂಬಿದ ಮಹಾಂತೇಶ್ ಮತ್ತು ಪ್ರಭುದೇವ ತಮಗಿರುವ ಸಾಲ ತೀರಿಸುವ ಸಲುವಾಗಿ ₹.4.50 ಲಕ್ಷ ಹಣ ಹೊಂದಿಸಿಕೊಂಡಿದ್ದಾರೆ. ಈ ವಿಚಾರವನ್ನು ಆರೋಪಿ ರಾಜೇಂದ್ರಗೆ ತಿಳಿಸಿದಾಗ ಆತ ಬಾಳೆಹೊನ್ನೂರು ಸಮೀಪದ ಸಿಆರ್‌ಎಸ್ ಬಳಿ ಇರುವ ಪ್ಲೋರಿಂಜಾ ಹೋಂ ಸ್ಟೇಗೆ ಶುಕ್ರವಾರ ರಾತ್ರಿ ಬರಲು ತಿಳಿಸಿದ್ದಾರೆ.ಮಹಾಂತೇಶ್, ಪ್ರಭುದೇವ ಹಣ ತೆಗೆದುಕೊಂಡು ಶುಕ್ರವಾರ ರಾತ್ರಿ ಹೋಂ ಸ್ಟೇಗೆ ಬಂದಿದ್ದು, ರಾತ್ರಿ 11 ಗಂಟೆ ವೇಳೆಗೆ ರಾಜೇಂದ್ರ ಮತ್ತು ಸಹಚರರನ್ನು ಇವರು ಭೇಟಿಯಾಗಿದ್ದಾರೆ. ಇದೇ ವೇಳೆ ಬೆಂಗಳೂರಿನ ಮಂಜುನಾಥ, ಮುರುಳೀಧರ ಸಹ ಇದೇ ಸ್ಥಳಕ್ಕೆ ಬಂದಿದ್ದು, ಅವರು ಸಹ ನಾವು ₹100 ಮುಖಬೆಲೆ ಹಣ ದ್ವಿಗುಣಗೊಳಿಸಿಕೊಳ್ಳಲು ಬಂದಿದ್ದೇವೆ ಎಂದು ತಿಳಿಸಿದ್ದಾರೆ.ಪರಸ್ಪರ ಎಲ್ಲರೂ ಭೇಟಿಯಾದಾಗ ರಾಜೇಂದ್ರ, ನಂದೀಶ್, ಚೇತನ್ ಅವರು ನಾಲ್ವರ ಬಳಿ ನೀವು ತಂದಿರುವ ಹಣ ತೋರಿಸಿ ಎಂದಾಗ ಎಲ್ಲರೂ ತಾವುಗಳು ಬ್ಯಾಗಿನಲ್ಲಿ ತಂದಿರುವ ₹500 ಮುಖಬೆಲೆಯ ಹಣ ತೋರಿಸಿದ್ದಾರೆ. ತಕ್ಷಣ ಆರೋಪಿಗಳಲ್ಲೊಬ್ಬನಾದ ಚೇತನ್ ಗಜೇಂದ್ರ ಎಂಬುವನಿಗೆ ಫೋನ್ ನಲ್ಲಿ ಮಠದ ಹಣವಾದ ₹100 ಮುಖಬೆಲೆಯ ನೋಟುಗಳನ್ನು ತರಲು ಸೂಚಿಸಿದ್ದು, ಸ್ವಲ್ಪ ಸಮಯದ ಬಳಿಕ ಗಜೇಂದ್ರ ಮರದ ಪೆಟ್ಟಿಗೆ ತೆಗೆದುಕೊಂಡು ಬಂದಿದ್ದಾರೆ.ಬಳಿಕ ಪರಸ್ಪರರು ಮರದ ಪೆಟ್ಟಿಗೆ ಹಾಗೂ ಹಣದ ಬ್ಯಾಗ್ ಬದಲಾಯಿಸಿಕೊಂಡಿದ್ದು, ಹಣದ ಬ್ಯಾಗ್ ದೊರೆಯುತ್ತಿದ್ದಂತೆ ನಾಲ್ವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ಅನುಮಾನಗೊಂಡ ನಾಲ್ವರು ಮರದ ಪೆಟ್ಟಿಗೆ ತೆರೆದು ನೋಡಿದಾಗ ₹100 ಮುಖಬೆಲೆಯ 15500 ಹಣ ಇಟ್ಟು ಅದರೊಳಗೆ ದಿನಪತ್ರಿಕೆ ಹಾಗೂ ಭತ್ತದ ಹೊಟ್ಟನ್ನು ತುಂಬಿ ಪ್ಯಾಕಿಂಗ್ ಮಾಡಿರುವುದು ಕಂಡಿದೆ. ಈ ವೇಳೆಗೆ ಈ ನಾಲ್ವರಿಗೆ ರಾಜೇಂದ್ರ ತಂಡದಿಂದ ಮೋಸ ಹೋಗಿರುವುದು ತಿಳಿದಿದೆ. ಈ ಕುರಿತು ತಕ್ಷಣ ಬಾಳೆಹೊನ್ನೂರು ಠಾಣೆಗೆ ದೂರು ನೀಡಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ಬಾಳೆ ಹೊನ್ನೂರು ಪಿಎಸ್‌ಐ ರವೀಶ್ ನೇತೃತ್ವದ ತಂಡ ಆರೋಪಿಗಳಾದ ರಾಜೇಂದ್ರ, ನಂದೀಶ್, ಗಜೇಂದ್ರನನ್ನು ವಶಕ್ಕೆ ಪಡೆದಿದ್ದಾರೆ. ಮತ್ತೋರ್ವ ಆರೋಪಿ ಚೇತನ್ ನಾಪತ್ತೆಯಾಗಿದ್ದಾನೆ.ಮಹಾಂತೇಶ್ ಹಾಗೂ ಪ್ರಭುದೇವ್ ಅವರಿಂದ ಆರೋಪಿಗಳು ₹ 4.50 ಲಕ್ಷ ಪಡೆದಿದ್ದು, ಮಂಜುನಾಥ್, ಮುರುಳೀಧರ ಅವರಿಂದ ಚೇತನ್ ಎಂಬ ಆರೋಪಿ ತೆಗೆದುಕೊಂಡು ಪರಾರಿಯಾದ ಬ್ಯಾಗ್‌ನಲ್ಲಿದ್ದ ಹಣದ ಮೌಲ್ಯ ಇನ್ನೂ ತಿಳಿದುಬಂದಿಲ್ಲ. ನಾಪತ್ತೆಯಾದ ಆರೋಪಿಗಾಗಿ ಪೊಲೀಸರು ಶೋಧ ಕೈಗೊಂಡಿದ್ದು, ಪ್ರಕರಣದಲ್ಲಿ ಇನ್ನೂ ಮೂರು ಜನ ಆರೋಪಿಗಳಿದ್ದು, ಅವರು ಪರಾರಿಯಾಗಿರುವ ಶಂಕೆಯಿದೆ. ಈ ಕುರಿತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಪಿಎಸ್‌ಐ ರವೀಶ್ ತಿಳಿಸಿದ್ದಾರೆ.ಘಟನೆ ಕುರಿತು ಮಹಾಂತೇಶ್ ಎಸ್.ಹಳ್ಳೂರು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಬಂಧಿತ ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.