ದಾಖಲೆಗಳ ಲೆಕ್ಕಾಚಾರದಲ್ಲಿ ಗ್ರಾಪಂ ಪಿಡಿಒ ಹಾಗೂ ಗ್ರಾಪಂ ಅಧ್ಯಕ್ಷರ ಖಾತೆಗೆ ಸೇರಿ ಬರೋಬ್ಬರಿ ₹8 ಲಕ್ಷಕ್ಕೂ ಅಧಿಕ ಹಣ ವರ್ಗಾಯಿಸಿಕೊಳ್ಳಲಾಗಿದೆ.

ಸೋಮರಡ್ಡಿ ಅಳವಂಡಿ ಕೊಪ್ಪಳ

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಹೆಸರಿನಲ್ಲಿ ಅಕ್ರಮ ಖಾತೆ ತೆರೆದು ₹ 8.42 ಕೋಟಿ ನುಂಗಿದ ಪ್ರಕರಣ ಬೆಳಕಿಗೆ ಬಂದ ಬೆನ್ನೆಲೆ ತಾಲೂಕಿನ ಕುಣಕೇರಿ ಗ್ರಾಪನಲ್ಲಿ ಪಂಚಾಯ್ತಿ ಖಾತೆಯಿಂದ ಸ್ವಂತ ಖಾತೆಗೆ ಲಕ್ಷ ಲಕ್ಷ ಹಣ ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಅಚ್ಚರಿ ಎಂದರೆ, ಇಲ್ಲಿ ನಕಲಿ ಖಾತೆ ತೆರೆದಿಲ್ಲ, ಗ್ರಾಪಂ ಅಧಿಕೃತ ಖಾತೆಯಿಂದ ಪಿಡಿಒ ಹಾಗೂ ಗ್ರಾಪಂ ಅಧ್ಯಕ್ಷರ ಖಾತೆಗೆ ಲಕ್ಷಾಂತರ ಹಣ ಕಾರಣವಿಲ್ಲದೆ ವರ್ಗಾಯಿಸಿಕೊಳ್ಳಲಾಗಿದೆ.

ಈ ಕುರಿತ ದಾಖಲೆಗಳು ಕನ್ನಡಪ್ರಭಕ್ಕೆ ಲಭ್ಯವಾಗಿದ್ದು, ದಾಖಲೆಗಳ ಲೆಕ್ಕಾಚಾರದಲ್ಲಿ ಗ್ರಾಪಂ ಪಿಡಿಒ ಹಾಗೂ ಗ್ರಾಪಂ ಅಧ್ಯಕ್ಷರ ಖಾತೆಗೆ ಸೇರಿ ಬರೋಬ್ಬರಿ ₹8 ಲಕ್ಷಕ್ಕೂ ಅಧಿಕ ಹಣ ವರ್ಗಾಯಿಸಿಕೊಳ್ಳಲಾಗಿದೆ.

2022 ರಿಂದ 2025 ಅವಧಿಯಲ್ಲಿ ಈ ಅಕ್ರಮ ನಡೆದಿದ್ದು, ₹856672 ಅಕ್ರಮವಾಗಿ ಸ್ವಂತ ಖಾತೆಗೆ ವರ್ಗಾಯಿಸಲಾಗಿದೆ. ಈ ಪೈಕಿ ಗ್ರಾಪಂ ಅಧ್ಯಕ್ಷರು ₹428336 ಹಾಗೂ ಪಿಡಿಒ ₹428336 ಮರಳಿ ಪಾವತಿಸಬೇಕಾಗಿದೆ.

ಈ ಕುರಿತು ಕುಣಿಕೇರಿ ಗ್ರಾಮದ ನಿವಾಸಿ ರಮೇಶ ಡಂಬ್ರಳ್ಳಿ ನೀಡಿದ ದೂರಿನ ಆಧಾರದ ಮೇಲೆ ತನಿಖೆ ಮಾಡಿದ್ದು, ತನಿಖೆಯಲ್ಲಿ ಅಕ್ರಮವಾಗಿ ಹಣ ವರ್ಗಾಯಿಸಿಕೊಂಡಿರುವುದು ಸಾಬೀತಾಗಿದೆ.

ನೋಟಿಸ್ ಜಾರಿ: ಈ ಕುರಿತು ಅಕ್ರಮ ವರ್ಗಾವಣೆ ಆಗಿರುವ ಅವಧಿಯಲ್ಲಿನ ಅಧ್ಯಕ್ಷರು ಮತ್ತು ಪಿಡಿಒಗೆ ನೋಟಿಸ್ ಜಾರಿ ಮಾಡಲಾಗಿದೆ. ನೋಟಿಸ್ ಜಾರಿ ಮಾಡಿ ಎಂಟು ತಿಂಗಳಾದರೂ ಇದುವರೆಗೂ ಅದನ್ನು ವಸೂಲಿ ಮಾಡಲು ಆಗಿಲ್ಲ.

ಬಹುತೇಕ ಗ್ರಾಪಂಗಳಲ್ಲಿ ಅಕ್ರಮ: ಕೇವಲ ಕುಣಿಕೇರಿ ಗ್ರಾಪಂನಲ್ಲಿ ಮಾತ್ರವಲ್ಲದೇ ಬಹುತೇಕ ಗ್ರಾಪಂಗಳಲ್ಲಿ ಈ ರೀತಿ ಸರ್ಕಾರಿ ದುಡ್ಡನ್ನು ಸ್ವಂತ ಖಾತೆಗೆ ವರ್ಗಾಯಿಸಿಕೊಂಡು ಲೂಟಿ ಹೊಡೆಯುತ್ತಿರುವ ಆರೋಪ ಕೇಳಿಬಂದಿವೆ. ಹೀಗಾಗಿ 2023 ರಿಂದ ಇಲ್ಲಿಯವರೆಗೂ ಗ್ರಾಪಂಗಳ ಬ್ಯಾಂಕ್ ವಹಿವಾಟು ಖಾತೆ ತನಿಖೆಗೆ ಒಳಪಡಿಸಿದರೆ ಅಕ್ರಮಗಳು ಬಯಲಿಗೆ ಬರಲಿವೆ ಎನ್ನುತ್ತಾರೆ ದೂರುದಾರರು.

ಅಕ್ರಮವಾಗಿ ಹಣ ವರ್ಗಾಯಿಸಿಕೊಂಡಿರುವುದು ಸಾಬೀತಾಗಿದ್ದರೂ ಇದುವರೆಗೂ ಮರಳಿ ಸರ್ಕಾರದ ಖಾತೆಗೆ ವರ್ಗಾಯಿಸದೇ ಇರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಕೂಡಲೇ ಸರ್ಕಾರದ ಖಾತೆಗೆ ವರ್ಗಾಯಿಸಬೇಕು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರುದಾರ ರಮೇಶ ಡಂಬ್ರಳ್ಳಿ ತಿಳಿಸಿದ್ದಾರೆ.

ಕುಣಿಕೇರಿ ಗ್ರಾಪಂನಲ್ಲಿ ನಡೆದಿರುವ ಅಕ್ರಮ ಹಣ ವರ್ಗಾವಣೆ ಕುರಿತು ಈಗಾಗಲೇ ತನಿಖೆ ನಡೆಸಿದ್ದು, ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ನೋಟಿಸ್‌ಗೆ ಉತ್ತರ ನೀಡಿದ ನಂತರ ಕಾನೂನು ರೀತಿ ಕ್ರಮ ವಹಿಸಲಾಗುವುದು ಎಂದು ಕೊಪ್ಪಳ ಜಿಪಂ ಸಿಇಓ ವರ್ಣೀತ ನೇಗಿ ತಿಳಿಸಿದ್ದಾರೆ.