ವಂಚನೆ ಪ್ರಕರಣ: ಚಿಕ್ಕಬ್ಬಿಗೆರೆ ಆರೋಪಿ ಬಂಧನ

| Published : Aug 03 2025, 01:30 AM IST

ವಂಚನೆ ಪ್ರಕರಣ: ಚಿಕ್ಕಬ್ಬಿಗೆರೆ ಆರೋಪಿ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಮನೆ ಅಗೆಯುವಾಗ ಚಿನ್ನ ಸಿಕ್ಕಿದ್ದು, ಕಡಿಮೆ ಬೆಲೆಗೆ ಮಾರುವುದಾಗಿ ಹೇಳಿ ತುಮಕೂರು ಜಿಲ್ಲೆ ಮೂಲದ ವ್ಯಕ್ತಿಗೆ ಜು.29ರಂದು 5 ಲಕ್ಷ ರು. ಸುಲಿಗೆ ಮಾಡಿದ್ದ ಪ್ರಕರಣದ ಒಬ್ಬ ಆರೋಪಿಯನ್ನು ಬಂಧಿಸಿ, 5 ಲಕ್ಷ ವಶಪಡಿಸಿಕೊಳ್ಳಲಾಗಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಮನೆ ಅಗೆಯುವಾಗ ಚಿನ್ನ ಸಿಕ್ಕಿದ್ದು, ಕಡಿಮೆ ಬೆಲೆಗೆ ಮಾರುವುದಾಗಿ ಹೇಳಿ ತುಮಕೂರು ಜಿಲ್ಲೆ ಮೂಲದ ವ್ಯಕ್ತಿಗೆ ಜು.29ರಂದು 5 ಲಕ್ಷ ರು. ಸುಲಿಗೆ ಮಾಡಿದ್ದ ಪ್ರಕರಣದ ಒಬ್ಬ ಆರೋಪಿಯನ್ನು ಬಂಧಿಸಿ, 5 ಲಕ್ಷ ವಶಪಡಿಸಿಕೊಳ್ಳಲಾಗಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ಚನ್ನಗಿರಿ ತಾ. ಚಿಕ್ಕಬ್ಬಿಗೆರೆ ಗ್ರಾಮದ ಮಂಜುನಾಥ (48) ಬಂಧಿತ ಆರೋಪಿ. ಒಂದೂವರೆ ವರ್ಷದ ಹಿಂದೆ ತುಮಕೂರು ಜಿಲ್ಲೆ ಚಿಂಪುಗಾನಹಳ್ಳಿಯ ರಂಗನಾಥ ಎಂಬ ವ್ಯಕ್ತಿಗೆ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೋಗಿದ್ದ ವೇಳೆ ಆರೋಪಿ ಮಂಜುನಾಥ ತನ್ನನ್ನು ಹುಬ್ಬಳ್ಳಿಯವನೆಂದು, ತನ್ನ ಹೆಸರು ಸುರೇಶ ಎಂದು ಪರಿಚಯಿಸಿಕೊಂಡಿದ್ದ.

ವಾರದ ಹಿಂದಷ್ಟೇ ಚಿಂಪುಗಾನಹಳ್ಳಿ ರಂಗನಾಥಗೆ ಕರೆ ಮಾಡಿ, ತಮ್ಮ ಹಳೆ ಮನೆ ಕೆಡವಿ ಫೌಂಡೇಷನ್‌ಗೆ ನೆಲ ಅಗೆಯುವಾಗ ಚಿನ್ನದ ನಾಣ್ಯಗಳು ಸಿಕ್ಕಿವೆ. ತನಗೆ ಹಣದ ಅವಶ್ಯಕತೆ ಇದೆ ಎಂದು ಹೇಳಿ ಅಸಲಿ ಚಿನ್ನದ ನಾಣ್ಯವನ್ನು ಜು.23ರಂದು ರಂಗನಾಥನಿಗೆ ಕೊಟ್ಟಿದ್ದನು.

ನಂತರ ಸುರೇಶ (ಮಂಜುನಾಥ) ಮತ್ತೆ ಕರೆ ಮಾಡಿ, 1 ಕೆಜಿಗೆ 20 ಲಕ್ಷ ರು. ಎಂದು ತಿಳಿಸಿದ್ದ. ಬಳಿಕ ಜು.29ರಂದು ಕುರ್ಕಿ ಗ್ರಾಮದಲ್ಲಿ ಸುರೇಶ ಒಂದು ಬಿಳಿ ಬಟ್ಟೆಯಲ್ಲಿ ಕಟ್ಟಿದ್ದ ಗಂಟನ್ನು ತೋರಿಸಿ ಹಣ ಪಡೆದು, ರಸ್ತೆಯಲ್ಲಿ ಬೇಡ ಹೈವೇ ಪಕ್ಕದ ಜಮೀನಿಗೆ ಹೋಗುವ ಮಣ್ಣಿನ ರಸ್ತೆಯಲ್ಲಿ ಹೋಗುತ್ತಿರುವಾಗ ಸುರೇಶ ಜೋರಾಗಿ ಕೂಗಿಕೊಂಡಿದ್ದಾನೆ.

ಆಗ ಜಮೀನು ಪಕ್ಕದಲ್ಲಿದ್ದ ನಾಲ್ಕೈದು ಜನ ತಮ್ಮ ಕಡೆ ಕಲ್ಲು ಹಿಡಿದುಕೊಂಡು ಓಡಿ ಬಂದಿದ್ದು, ಪಿರ್ಯಾದಿ ರಂಗನಾಥ ಹೆದರಿಕೊಂಡು ಅಲ್ಲಿಂದ ಓಡಿ ಹೋಗಿ, ಕುರ್ಕಿ ಗ್ರಾಮಕ್ಕೆ ಬಂದಿದ್ದಾನೆ. ನಂತರ ಆರೋಪಿ ಸುರೇಶ ವಂಚನೆ ಮಾಡಿದ ಬಗ್ಗೆ ಹದಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಎಎಸ್ಪಿಗಳಾದ ಪರಮೇಶ್ವರ ಹೆಗಡೆ, ಜಿ.ಮಂಜುನಾಥ ಇತರರು ಕಾರ್ಯಾಚರಣೆ ನಡೆಸಿ, ಚಿಕ್ಕಬ್ಬಿಗೆರೆ ಗ್ರಾಮದ ಮಂಜುನಾಥನನ್ನು ಬಂಧಿಸಿ, ಆತನಿಂದ 5 ಲಕ್ಷ ಜಪ್ತು ಮಾಡಿದ್ದಾರೆ. ತಲೆ ಮರೆಸಿಕೊಂಡ ಉಳಿದ ಆರೋಪಿಗಳ ಪತ್ತೆ ಕಾರ್ಯ ನಡೆದಿದೆ.