ಸಾರಾಂಶ
ಬಳ್ಳಾರಿ: ನಗರದ ಬ್ರೂಸ್‌ಪೇಟೆ, ಕೌಲ್‌ಬಜಾರ್, ಎಪಿಎಂಸಿ ಹಾಗೂ ಗಾಂಧಿನಗರ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ದಾಖಲಾಗಿದ್ದ 103 ಕಾರು ವಂಚನೆ ಪ್ರಕರಣಗಳ ಪೈಕಿ 44 ಕಾರುಗಳನ್ನು ಪೊಲೀಸರು ಪತ್ತೆ ಹಚ್ಚಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ಸೋಮವಾರ ಕಾರು ಮಾಲೀಕರಿಗೆ ವಾಹನಗಳನ್ನು ಹಿಂದಿರುಗಿಸಿದರು.ಇದೇ ವೇಳೆ ಮಾತನಾಡಿದ ಎಸ್ಪಿ ಶೋಭಾರಾಣಿ, ಕಾರುಗಳನ್ನು ಬಾಡಿಗೆ ನೆಪದಲ್ಲಿ ತೆಗೆದುಕೊಳ್ಳುತ್ತಿದ್ದ ನಗರದ ಮಹ್ಮದ್ ಜಾಹೀರ್ ಬಾಷಾ ಎಂಬ ಆರೋಪಿ ಬಳಿಕ ಬೇರೆಯವರಿಗೆ ಕಡಿಮೆ ದುಡ್ಡಿಗೆ ಮಾರಾಟ ಮಾಡಿದ್ದಾನೆ. ಈ ಸಂಬಂಧ ಬ್ರೂಸ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರೋಪಿ ಹಾಗೂ ಕಾರುಗಳ ಪತ್ತೆಗಾಗಿ ಹುಡುಕಾಟ ಆರಂಭಿಸಲಾಯಿತು. ನಾನಾ ಕಡೆ ವಿಚಾರಣೆಯ ಬಳಿಕ 44 ಕಾರುಗಳು ಪತ್ತೆಯಾಗಿವೆ. ಉಳಿದ ಕಾರುಗಳನ್ನು ಸಹ ಪತ್ತೆ ಮಾಡಲಾಗುವುದು. ಮಹ್ಮದ್ ಜಾಹೀರ್ ಬಾಷಾನಿಂದ ಕಾರುಗಳನ್ನು ಖರೀದಿಸಿದವರು ಕೂಡಲೇ ವಾಪಸ್ ಮಾಡಬೇಕು. ಕಳ್ಳತನದ ಮಾಲು ಖರೀದಿ ಮಾಡುವುದು ಸಹ ಅಪರಾಧವಾಗಲಿದೆ. ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು. ಅವರಾಗಿಯೇ ಬಂದು ಕಾರುಗಳನ್ನು ವಾಪಸ್ ನೀಡುವುದರಿಂದ ಯಾವ ಸಮಸ್ಯೆಯಿಲ್ಲ. ಆದರೆ, ವಾಪಸ್ ನೀಡದೇ ಹೋದಲ್ಲಿ ಸಮಸ್ಯೆ ಎದುರಾಗಲಿದೆ ಎಂದು ಎಚ್ಚರಿಸಿದರು.
ಆರೋಪಿ ಬಳ್ಳಾರಿ ಜಿಲ್ಲೆ ಸೇರಿದಂತೆ ನೆರೆಯ ರಾಯಚೂರು ಜಿಲ್ಲೆಯಲ್ಲಿ ಸಹ ಇದೇ ರೀತಿಯ ಕೃತ್ಯ ಎಸಗಿರಬಹುದು ಎಂಬ ಶಂಕೆಯಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಕಡೆ ಪರಿಶೀಲಿಸಲಾಗುತ್ತಿದೆ. ಆರೋಪಿ ಸುಳಿವು ಸಿಕ್ಕಿಲ್ಲ. ಪತ್ತೆಗಾಗಿ ತಂಡ ರಚನೆ ಮಾಡಲಾಗಿದೆ. ಆದಷ್ಟು ಬೇಗ ಆರೋಪಿಯನ್ನು ಪತ್ತೆ ಹಚ್ಚಲಾಗುವುದು ಎಂದು ಎಸ್ಪಿ ಶೋಭಾರಾಣಿ ತಿಳಿಸಿದರು.ವಂಚನೆಗೊಳಗಾದ ಕಾರು ಮಾಲೀಕರು ಮಾತನಾಡಿ, ಮಹ್ಮದ್ ಜಾಹೀರ್ ಬಾಷಾ ಎಂಬಾತ ಕಾರು ಬಾಡಿಗೆ ಎಂದು ಪಡೆದುಕೊಂಡು ಹೋಗಿದ್ದ. ಒಂದೆರೆಡು ತಿಂಗಳು ಸರಿಯಾಗಿ ಬಾಡಿಗೆ ನೀಡಿದ. ಬಳಿಕ ನಾಪತ್ತೆಯಾದ. ಬಾಡಿಗೆ ಇಲ್ಲ. ಕಾರು ಸಹ ಇರಲಿಲ್ಲ. ಇದರಿಂದ ಆತಂಕಗೊಂಡೆವು. ಬಳಿಕ ಆತ ನಮ್ಮಿಂದ ಬಾಡಿಗೆ ಪಡೆದ ಕಾರುಗಳನ್ನು ಮಾರಾಟ ಮಾಡಿದ್ದಾನೆ ಎಂದು ಗೊತ್ತಾಯಿತು. ಬಳಿಕ ಪೊಲೀಸರಿಗೆ ದೂರು ನೀಡಿದೆವು. ನೂರಾರು ಕಾರುಗಳನ್ನು ಬಾಡಿಗೆ ಪಡೆದು ವಂಚನೆ ಎಸಗಿರುವುದು ಬೆಳಕಿಗೆ ಬಂತು. 44 ಕಾರುಗಳು ಸಿಕ್ಕಿದ್ದು, ಇನ್ನು ಉಳಿದ ಕಾರುಗಳನ್ನು ಹುಡುಕಿ ಕೊಡುವುದಾಗಿ ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ನಮಗೆ ಒಂದಷ್ಟು ನಿರಾಳ ಎನಿಸಿದೆ ಎಂದು ತಿಳಿಸಿದರು. ಕಾರುಗಳನ್ನು ಪತ್ತೆ ಹಚ್ಚುವಲ್ಲಿ ಶ್ರಮಿಸಿದ ಬ್ರೂಸ್‌ಪೇಟೆ ಸೇರಿದಂತೆ ಉಳಿದ ಠಾಣೆಗಳ ಪೊಲೀಸರು ಹಾಗೂ ಅಧಿಕಾರಿಗಳ ಕಾರ್ಯವನ್ನು ಎಸ್ಪಿ ಶೋಭಾರಾಣಿ ಪ್ರಶಂಸಿಸಿದರು.