ನರೇಗಾ ಕೂಲಿ ಕಾರ್ಮಿಕರಿಗೆ ವಂಚನೆ; ಪ್ರತಿಭಟನೆ

| Published : May 23 2024, 01:01 AM IST

ಸಾರಾಂಶ

ಕಳೆದ ಕೆಲ ತಿಂಗಳಿನಿಂದ ಗ್ರಾಮಗಳಲ್ಲಿ ಬರಗಾಲ ಆವರಿಸಿದೆ. ಖಾಸಗಿಯವರಲ್ಲಿ ಕೂಲಿ ಮಾಡಲು ಕೆಲಸವೇ ಇಲ್ಲ. ಅದೆಷ್ಟೋ ಜನರು ಕೂಲಿ ಕೆಲಸ ಮಾಡಿಯೇ ಜೀವನ ನಡೆಸಬೇಕಾದ ಪರಿಸ್ಥಿತಿ ಇದೆ. ಈಗಿರುವಾಗ ಗ್ರಾಮಾಡಳಿತ ಏಕಾಏಕಿ ನರೇಗಾ ಕೆಲಸ ಇಲ್ಲ ಎಂದು ಹೇಳಿದರೆ ಏನು ಮಾಡುವುದು ಎಂದು ಪ್ರತಿಭಟನಾಕಾರರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ನಿಯಮಿತವಾಗಿ ಕೆಲಸ ನೀಡದೆ, ಕೂಲಿ ಕಾರ್ಮಿಕರನ್ನು ವಂಚಿಸಲಾಗುತ್ತಿದೆ ಎಂದು ಆಗ್ರಹಿಸಿ ನರೇಗಾ ಕಾರ್ಮಿಕರು ಹನುಮಂತಾಪುರ ಗ್ರಾಮ ಪಂಚಾಯಿತಿ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿ ಸುಮಾರು 200ರಿಂದ 250 ಮಂದಿ ಕೂಲಿ ಕಾರ್ಮಿಕರಿದ್ದಾರೆ. ಕಳೆದ ಕೆಲ ತಿಂಗಳಿನಿಂದ ಗ್ರಾಮಗಳಲ್ಲಿ ಬರಗಾಲ ಆವರಿಸಿದೆ. ಖಾಸಗಿಯವರಲ್ಲಿ ಕೂಲಿ ಮಾಡಲು ಕೆಲಸವೇ ಇಲ್ಲ. ಅದೆಷ್ಟೋ ಜನರು ಕೂಲಿ ಕೆಲಸ ಮಾಡಿಯೇ ಜೀವನ ನಡೆಸಬೇಕಾದ ಪರಿಸ್ಥಿತಿ ಇದೆ. ಈಗಿರುವಾಗ ಗ್ರಾಮಾಡಳಿತ ಏಕಾಏಕಿ ನರೇಗಾ ಕೆಲಸ ಇಲ್ಲ ಎಂದು ಹೇಳಿದರೆ ಏನು ಮಾಡುವುದು ಎಂದು ಪ್ರತಿಭಟನಾಕಾರರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಪ್ರಶ್ನಿಸಿದರು. ಗ್ರಾಮದಲ್ಲಿ ಹಾಲಿ ನಡೆಯುತ್ತಿರುವ 5 ಲಕ್ಷ ಅಂದಾಜಿನ ಕೆಲಸ ಬುಧವಾರಕ್ಕೆ ಮುಕ್ತಾಯವಾಗಬೇಕು. ಆದರೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಬುಧವಾರ ಕೆಲಸಕ್ಕೆ ರಜೆ ನೀಡಿ ತನಗೆ ಬೇಕಾದವರಿಗೆ ಕೂಲಿ ಹಾಜರಾತಿ ನೀಡಿ ಹಣ ಮಾಡಿಕೊಳ್ಳುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.

ಗ್ರಾಪಂನಲ್ಲಿ ಆಡಳಿತ ಮಂಡಳಿ ಇಲ್ಲವಾದ್ದರಿಂದ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ವರ್ತಿಸುತ್ತಿದ್ದಾರೆ. ಹಣವಂತರ, ಮೇಲ್ವರ್ಗದ ಜನರ ಜಮೀನುಗಳಿಗೆ ಹೋಗುವ ರಸ್ತೆಗಳ ಮತ್ತು ಚರಂಡಿಗಳನ್ನು ನರೇಗಾ ಕೂಲಿ ಕಾರ್ಮಿಕರಿಂದ ಸ್ವಚ್ಛ ಮಾಡಲಾಗುತ್ತಿದೆ. ಆದರೆ ದಲಿತ, ಬಡವರ ಜಮೀನುಗಳಿಗೆ ಹೋಗುವ ರಸ್ತೆಯಲ್ಲಿ ಇದೇ ಕೆಲಸ ಮಾಡಿಕೊಡಿ ಎಂದರೆ ಪಂಚಾಯಿತಿಗೆ ಅರ್ಜಿ ನೀಡಿ, ಆಮೇಲೆ ಕೆಲಸ ಮಾಡುತ್ತೇವೆ ಎಂದು ಪಿಡಿಒ ಹೇಳುತ್ತಾರೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು. ಈ ಗ್ರಾಮದಲ್ಲಿ ನರೇಗಾ ಕೆಲಸ ಮಾಡಲೂ ಕೂಡ ಜಾತಿ, ಮತ ನೋಡಲಾಗುತ್ತಿದೆ. ದಲಿತ ಕೆಲಸಗಳಿಗೆ ಕಾನೂನು ನೋಡುವ ಅಧಿಕಾರಿಗಳು, ಮೇಲ್ವರ್ಗದರಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡಲು ಸ್ವತಃ ತಾವೇ ಹುಡುಕಿಕೊಂಡು ಮಾಡುತ್ತಾರೆ. ಇಂತಹ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಬೇಕು ಎಂದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ವಿನಯ್ ಕೊಠಡಿಗೆ ತೆರಳಿದ ಕೂಲಿ ಕಾರ್ಮಿಕರು ಅಧಿಕಾರಿಯೊಂದಿಗೆ ಮಾತಿನ ಚಕಮಕಿ ನಡೆಸಿ ಆಕ್ರೋಶ ವ್ಯಕ್ತ ಪಡಿಸಿದರು.

ಚುನಾವಣೆ ನೀತಿ ಸಂಹಿತೆಯಿಂದ ಸಮಸ್ಯೆ:

ಪ್ರತಿಭಟನಾಕಾರರ ಉದ್ದೇಶಿಸಿ ಮಾತನಾಡಿದ ವಿನಯ್, ಬುಧವಾರ ಕೂಲಿ ಕೆಲಸಕ್ಕೆ ರಜೆ ನೀಡಲಾಗಿದೆ. 200 ಜನ ಗುಂಪಾಗಿ ಬಂದರೆ ಕೆಲಸ ಮಾಡಿಸುವುದು ಕಷ್ಠ. ಆದ್ದರಿಂದ 40 ಜನ ಕೂಲಿಗಳಿಗೊಬ್ಬರಂತೆ ಮೇಟಿಯನ್ನು ನೇಮಿಸಿಕೊಂಡು ಬಂದರೆ ಸೋಮವಾರದಿಂದ ನಿಯಮಿತವಾಗಿ ಕೆಲಸ ನೀಡಲಾಗುವುದು. ಚುನಾವಣೆ ನೀತಿ ಸಂಹಿತೆ ಇರುವುದರಿಂದ ಹೊಸ ಕಾಮಗಾರಿಗಳ ಕೈಗೆತ್ತಿಕೊಳ್ಳಲು ಸಮಸ್ಯೆಯಾಗುತ್ತಿದೆ ಎಂದು ಸಮಜಾಯಿಷಿ ನೀಡಿದರು. ನಾವು ಯಾವುದೇ ಬೇಧ ಭಾವ ಮಾಡದೆ ಎಲ್ಲಾ ಕಡೆಯಲ್ಲಿ ನರೇಗಾ ಕೆಲಸ ಮಾಡುತ್ತಿದ್ದೇವೆ. ಹನುಮಂತಾಪುರ ಗ್ರಾಮದಲ್ಲಿ ಇರುವುದು ಒಂದೇ ಕೆರೆ. ಅದೂ ಕೂಡ ಈಗ ಮಳೆಯಿಂದಾಗಿ ತುಂಬಿದೆ. ಅಲ್ಲಿ ನರೇಗಾ ಕಾರ್ಮಿಕರಿಗೆ ಕೆಲಸ ನೀಡಲು ಸಾಧ್ಯವಿಲ್ಲ. ಆದ್ದರಿಂದ ನೀರಾವರಿಗೆ ಸಂಬಂಧಪಟ್ಟ ಕಾಲುವೆಗಳು, ಚರಂಡಿಗಳು ಮತ್ತು ಗ್ರಾಮದ ಸ್ವಚ್ಛತೆಗೆ ಆದ್ಯತೆ ನೀಡಿ ಕೆಲಸ ಮಾಡಲಾಗುತ್ತಿದೆ ಎಂದರು.

ಕೂಲಿ ಕಾರ್ಮೀಕರಾದ ಆರ್.ಮಂಜುನಾಥ್, ಸುರೇಶ್, ಎ.ಕೆ ಸತೀಶ್, ಹರೀಶ್‍ರಾವ್, ಅಶೋಕ್, ನಾಗರಾಜ್, ಸಾಕಮ್ಮ, ನೀಲಮ್ಮ ಇತರರಿದ್ದಾರೆ.

ಗ್ರಾಮ ಪಂಚಾಯಿತಿಯಲ್ಲಿ ಆಡಳಿತ ಮಂಡಳಿ ಇಲ್ಲ. ಇದರಿಂದ ಯಾವ ಭಾಗದಲ್ಲಿ ಸಮಸ್ಯೆ ಇದೆ ಎಂಬುದು ಗೊತ್ತಾಗುವುದಿಲ್ಲ. ಆದ್ದರಿಂದ ಗ್ರಾಮದ ಯಾವುದೇ ವ್ಯಕ್ತಿ ಸಮಸ್ಯೆಗಳನ್ನು ಗಮನಕ್ಕೆ ತಂದರೆ ಖಂಡಿತವಾಗಿಯೂ ಪರಿಗಣಿಸಲಾಗುವುದು.

ವಿನಯ್, ಗ್ರಾಪಂ ಅಭಿವೃದ್ಧಿ ಅಧಿಕಾರಿ