ಸಾರಾಂಶ
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೊಳಗಾದವರಿಗೆ ಸರ್ಕಾರದಿಂದ ಹಣ ಬರುವುದೆಂಬ ನಿರೀಕ್ಷೆಯೊಂದಿಗೆ ಅರ್ಜಿ ಸಲ್ಲಿಕೆಗೆ ನೂರಾರು ಸಂಖ್ಯೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ದುಂಬಾಲು ಬಿದ್ದಿದ್ದಾರೆ.
ರಾಜ್ಯದ ಪ್ರತಿಷ್ಠಿತ ಖಾಸಗಿ ಹಣಕಾಸು ಸಂಸ್ಥೆ ಮತ್ತು ಕಂಪನಿಗಳಿಗೆ ಅನಿಯಂತ್ರಿತ ಠೇವಣಿ ಯೋಜನೆಗಳಡಿ ಹಣ ಹೂಡಿಕೆ ಮಾಡಿ ವಂಚನೆಗೊಳಗಾದವರು ಜಿಲ್ಲಾಧಿಕಾರಿ ಕಚೇರಿಯ ದೂರು ಕೇಂದ್ರದ ಬಳಿ ಜಮಾಯಿಸಿ ಅರ್ಜಿ ಸಲ್ಲಿಸುತ್ತಿದ್ದಾರೆ. ಅರ್ಜಿಗಳನ್ನು ತುಂಬಿ ಅದಕ್ಕೆ ವಂಚನೆಗೊಳಗಾದ ಸಂಸ್ಥೆಯ ಬಾಂಡ್, ಆಧಾರ್ ಕಾರ್ಡ್, ರಸೀದಿ, ಬ್ಯಾಂಕ್ ಪಾಸ್ ಪುಸ್ತಕಗಳ ಜೆರಾಕ್ಸ್‌ಗಳನ್ನು ಹಿಡಿದು ಕಳೆದುಕೊಂಡಿರುವ ಹಣ ಮರಳಿ ಸಿಗಬಹುದೆಂಬ ಆಸೆಯೊಂದಿಗೆ ಬೆಳಗ್ಗೆಯೇ ದೂರು ಕೇಂದ್ರದ ಬಳಿ ಬಂದು ಸಾಲುಗಟ್ಟಿ ನಿಲ್ಲುತ್ತಿದ್ದಾರೆ.ಈ ವಿಷಯವಾಗಿ ಜಿಲ್ಲಾಡಳಿತವನ್ನು ಕೇಳಿದರೆ, ಬಡ್ಸ್ ಕಾಯಿದೆಯಡಿ ಅರ್ಜಿ ಸ್ವೀಕರಿಸುವುದಕ್ಕೆ ಸರ್ಕಾರದಿಂದ ಸಕ್ಷಮ ಪ್ರಾಧಿಕಾರವೇ ರಚನೆಯಾಗಿಲ್ಲ. ಹಣ ಹೂಡಿಕೆ ಮಾಡಿ ವಂಚನೆಗೊಳಗಾದವರು ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವಂತೆ ನಾವು ಯಾವುದೇ ಅಧಿಸೂಚನೆಯನ್ನೂ ಹೊರಡಿಸಿಲ್ಲ. ಯಾರೋ ಮಧ್ಯವರ್ತಿಗಳ ಮಾತು ಕೇಳಿಕೊಂಡು ಅರ್ಜಿ ಸಲ್ಲಿಸುತ್ತಿದ್ದಾರೆ. ಜನರಿಂದ ಬರುವ ಅರ್ಜಿಗಳನ್ನು ಸ್ವೀಕರಿಸಿಟ್ಟುಕೊಳ್ಳುತ್ತಿದ್ದೇವೆ ಎಂಬ ಉತ್ತರ ಬರುತ್ತಿದೆ.
ಮೂರು ತಿಂಗಳ ಹಿಂದೆ ದಿನಕ್ಕೊಂದೋ ಎರಡೋ ಅರ್ಜಿಗಳು ಬರುತ್ತಿದ್ದವು. ಕಳೆದ ನಾಲ್ಕು ದಿನಗಳಿಂದ ಅರ್ಜಿಗಳ ಮಹಾಪೂರವೇ ದೂರು ಕೇಂದ್ರಕ್ಕೆ ಹರಿದುಬರುತ್ತಿದೆ. ನೂಕು ನುಗ್ಗಲು ತಪ್ಪಿಸಲು ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ.ಒಂದು ಕೌಂಟರ್ ಇದ್ದ ಕಾರಣ ಅಲ್ಲೇ ನೂರಾರು ಜನರು ಅರ್ಜಿ ಸಲ್ಲಿಸಲು ಸಾಲುಗಟ್ಟಿ ನಿಂತಿದ್ದರೆ, ಇನ್ನಷ್ಟು ಮಂದಿ ನೋಟರಿಯವರಿಂದ ದಾಖಲೆಗಳನ್ನು ದೃಢೀಕರಿಸುವಲ್ಲಿ, ಇನ್ನೂ ಹಲವರು ದಾಖಲೆಗಳನ್ನು ಜೆರಾಕ್ಸ್ ಮಾಡಿಸಿಕೊಳ್ಳಲು ಅಂಗಡಿಗಳೆದುರು ಗುಂಪುಗೂಡಿರುವ ದೃಶ್ಯಗಳು ಕಂಡುಬಂದವು. ಜನರನ್ನು ನಿಯಂತ್ರಿಸಲಾಗದೆ ಲೋಕಾಯುಕ್ತ ಕಚೇರಿ ಬಳಿ ಶುಕ್ರವಾರದಿಂದ ಎರಡನೇ ಕೌಂಟರ್ ತೆರೆಯಲಾಗಿತ್ತು.
ನೋಟರಿಯವರಿಗೆ ಸುಗ್ಗಿ ಕಾಲ:ನೋಟರಿ ಮಾಡಿಕೊಡುವುದಕ್ಕೆ ಜನರಿಗಾಗಿ ಎದುರು ನೋಡುತ್ತಾ ಕೂರುತ್ತಿದ್ದ ವಕೀಲರಿಗೆ ಈಗ ಫುಲ್ ಡಿಮಾಂಡ್. ನೂರಾರು ಜನರು ದಾಖಲೆಗಳನ್ನು ಹಿಡಿದು ದೃಢೀಕರಿಸಿಕೊಳ್ಳುವುದಕ್ಕೆ ಧಾವಿಸಿ ಬರುತ್ತಿದ್ದಾರೆ. ಸೀಲ್ ಹಾಕಿಕೊಡುವುದಕ್ಕೂ ಅವರಿಗೆ ಸಮಯಾವಕಾಶವೇ ಸಿಗುತ್ತಿಲ್ಲ. ಹಾಗಾಗಿ ಅರ್ಜಿಯನ್ನು ತಂದವರಿಗೇ ಸೀಲ್ ಹಾಕುವಂತೆ ಹೇಳಿ ತಾವು ಸಹಿ ಹಾಕಿಕೊಟ್ಟು ಕಳುಹಿಸುತ್ತಿದ್ದಾರೆ. ಒಬ್ಬೊಬ್ಬರು ಐದರಿಂದ ಹತ್ತು ಅರ್ಜಿಗಳನ್ನು ಹಿಡಿದು ನೋಟರಿಯವರ ಬಳಿ ದೃಢೀಕರಿಸಿಕೊಳ್ಳುತ್ತಿದ್ದಾರೆ. ತರಾತುರಿಯಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಓಡಾಡುತ್ತಿದ್ದಾರೆ. ಇದರಿಂದ ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ಜನದಟ್ಟಣೆ ಹೆಚ್ಚಾಗಿ ಕಂಡುಬರುತ್ತಿದೆ.
8 ಸಾವಿರ ಅರ್ಜಿಗಳು:ಮೂರು ತಿಂಗಳಿಂದ ಸುಮಾರು 500 ಅರ್ಜಿಗಳು ಬಂದಿದ್ದರೆ ಕಳೆದೊಂದು ವಾರದಿಂದ ಜಿಲ್ಲಾಧಿಕಾರಿಗಳ ದೂರು ಕೇಂದ್ರಕ್ಕೆ 8 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ನಿತ್ಯವೂ ಅರ್ಜಿಗಳನ್ನು ಹಿಡಿದು ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಜಿಲ್ಲಾಧಿಕಾರಿ ಕಚೇರಿಯ ದೂರು ಕೇಂದ್ರದ ಎದುರು ದಿನಕ್ಕೊಂದೊಂದು ರೀತಿಯ ದಾಖಲೆಗಳನ್ನು ಕೇಳುತ್ತಿದ್ದು, ಅದರ ಬಗ್ಗೆಯೂ ಈಗಾಗಲೇ ಅರ್ಜಿ ಸಲ್ಲಿಸಿದವರು ಗೊಂದಲಕ್ಕೊಳಗಾಗಿ ಮತ್ತೆ ಅರ್ಜಿಗಳನ್ನು ಹಿಡಿದು ಬರುತ್ತಿರುವುದು ಸಾಮಾನ್ಯವಾಗಿದೆ.
ಮಧ್ಯವರ್ತಿಗಳೂ ಕೂಡ ಅರ್ಜಿ ಸಲ್ಲಿಕೆಗೆ ಜು.30 ಎಂದು ವದಂತಿ ಹಬ್ಬಿಸಿರುವುದರಿಂದ ವಂಚನೆಗೊಳಗಾದವರು ಆತಂಕಗೊಂಡು ಅರ್ಜಿ ಸಲ್ಲಿಕೆಗೆ ನಾ ಮುಂದು ತಾ ಮುಂದು ಎಂದು ದುಂಬಾಲು ಬೀಳುತ್ತಿದ್ದಾರೆ. ಆದರೆ, ಜಿಲ್ಲಾಡಳಿತ ಈ ವಿಷಯವಾಗಿ ನಾವು ಯಾವುದೇ ಕೊನೆಯ ದಿನಾಂಕವನ್ನು ನಿಗದಿಪಡಿಸಿಲ್ಲವೆಂದು ಸ್ಪಷ್ಟಪಡಿಸಿದೆ.ಅರ್ಜಿ ಸಲ್ಲಿಕೆಗೆ ಪರದಾಟ:
ಹಣ ಹೂಡಿಕೆ ಮಾಡಿ ವಂಚನೆಗೊಳಗಾದವರ ಜೊತೆಗೆ ಹಲವಾರು ಮಂದಿ ನಕಲಿ ವ್ಯಕ್ತಿಗಳು ಅರ್ಜಿ ಸಲ್ಲಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಹಲವಾರು ಮಂದಿ ಅರ್ಜಿಯೊಂದಿಗೆ ಸಲ್ಲಿಸಿರುವ ದಾಖಲೆಗಳು ಸಮರ್ಪಕವಾಗಿಲ್ಲ. ಸತ್ತವರ ಹೆಸರಿನಲ್ಲೂ ಅರ್ಜಿ ಸಲ್ಲಿಕೆಯಾಗುತ್ತಿವೆ. ಮರಣ ಪ್ರಮಾಣಪತ್ರವನ್ನು ಲಗತ್ತಿಸಿರುವುದಿಲ್ಲ. ಹಲವೆಡೆ ಹಣ ಕಟ್ಟಿಸಿಕೊಂಡ ಏಜೆಂಟರು ನಾಪತ್ತೆಯಾಗಿದ್ದಾರೆ. ದೂರದ ಊರುಗಳಿಂದ ಬಂದವರು ಎಲ್ಲಾ ದಾಖಲೆಗಳನ್ನು ಹಿಡಿದು ತಂದು ಅರ್ಜಿ ಸಲ್ಲಿಸುವುದಕ್ಕೆ ಪರದಾಡುತ್ತಿದ್ದಾರೆ. ಹಲವು ಗೊಂದಲಗಳ ನಡುವೆಯೂ ಹಣ ವಂಚನೆಗೊಳಗಾದವರಿಂದ ಅರ್ಜಿಗಳು ಸಾವಿರಾರು ಸಂಖ್ಯೆಯಲ್ಲಿ ಸಲ್ಲಿಕೆಯಾಗುತ್ತಲೇ ಇವೆ.ಸಕ್ಷಮ ಪ್ರಾಧಿಕಾರವೇ ರಚನೆಯಾಗಿಲ್ಲ
ಹೂಡಿಕೆ ವಂಚನೆಯ ಬಗ್ಗೆ ಸಾರ್ವಜನಿಕರು ತಮ್ಮ ದೂರುಗಳನ್ನು ನೇರವಾಗಿ ಸಕ್ಷಮ ಪ್ರಾಧಿಕಾರ, ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ (ಬಡ್ಸ್ ಕಾಯಿದೆ)ಗೆ ಸಲ್ಲಿಸುವಂತೆ 2023ರಲ್ಲಿ ರಾಜ್ಯ ಸರ್ಕಾರ ಸೂಚಿಸಿತ್ತು. ಆದರೆ, ಇದುವರೆಗೂ ಸರ್ಕಾರ ಸಕ್ಷಮ ಪ್ರಾಧಿಕಾರವನ್ನು ರಚಿಸದಿರುವುದು ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ಸಕ್ಷಮ ಅಧಿಕಾರಿಗಳು ವಿಶೇಷ ಕೌಂಟರ್ ತೆರೆದು ಹಣಕಾಸು ಸಂಸ್ಥೆ, ಕಂಪನಿ, ಸೊಸೈಟಿಗಳಿಂದ ವಂಚನೆಗೊಳಗಾದ ಸಂತ್ರಸ್ತರಿಂದ ಅರ್ಜಿ ಸ್ವೀಕರಿಸಿ 180 ದಿನಗಳಲ್ಲಿ ಹಣ ಮರುಪಾವತಿಗೆ ಕ್ರಮ ಕೈಗೊಳ್ಳಬೇಕೆಂದು ಆರು ತಿಂಗಳ ಹಿಂದೆಯೇ ಆದೇಶವಾಗಿತ್ತು. ಸಕ್ಷಮ ಪ್ರಾಧಿಕಾರ ಈವರೆಗೂ ರಚನೆಯಾಗದಿರುವುದರಿಂದ ಈಗ ಬರುತ್ತಿರುವ ಅರ್ಜಿಗಳನ್ನು ಸ್ವೀಕರಿಸಿಟ್ಟುಕೊಂಡು ಸಕ್ಷಮ ಪ್ರಾಧಿಕಾರ ರಚನೆಯಾದ ಬಳಿಕ ಅಲ್ಲಿಗೆ ರವಾನಿಸಲಾಗುವುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.ಬಡ್ಸ್ ಕಾಯ್ದೆಯಡಿ ಅರ್ಜಿ ಸಲ್ಲಿಸುವವರಿಗೆ ಅಂತಿಮ ದಿನಾಂಕವನ್ನು ನಿಗದಿಪಡಿಸಿಲ್ಲ. ಅರ್ಜಿಯ ಜೊತೆ ದೃಢೀಕೃತ ಬಾಂಡ್, ಆಧಾರ್‌ಕಾರ್ಡ್, ಫೋಟೋ, ಪಾಸ್‌ಬುಕ್ ನಕಲು ಲಗತ್ತಿಸುವುದು. ಆಯಾ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಸಲ್ಲಿಸುವುದು. ಸಕ್ಷಮ ಪ್ರಾಧಿಕಾರ ನೇಮಕವಾದ ನಂತರ ಅರ್ಜಿಗಳ ಬಗ್ಗೆ ಕ್ರಮ ವಹಿಸಲಾಗುವುದು. ಆದ್ದರಿಂದ ಅರ್ಜಿಗಳನ್ನು ತರಾತುರಿಯಲ್ಲಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ನೇರವಾಗಿ ಅರ್ಜಿದಾರರೇ ದೂರು ಅರ್ಜಿಯನ್ನು ಸಲ್ಲಿಸಬೇಕೇ ಹೊರತು ಮಧ್ಯವರ್ತಿಗಳಿಂದ ಒಗ್ಗೂಡಿಸಿ ನೀಡುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.- ಡಾ.ಎಚ್.ಎಲ್.ನಾಗರಾಜು, ಅಪರ ಜಿಲ್ಲಾಧಿಕಾರಿ