ಬಸವರಾಜ ಭರಮಪ್ಪ ಜಾಧವ
ಹುಬ್ಬಳ್ಳಿ: ಶ್ರೀ ಸಿದ್ಧಾರೂಢರ ಜಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತರಿಗಾಗಿ ಉಚಿತ ಆಟೋ ಸೇವೆ!ಕಳೆದ 30 ವರ್ಷಗಳಿಂದ ನಗರದ ಉತ್ತರ ಕರ್ನಾಟಕ ಆಟೋ ಚಾಲಕರ ಸಂಘದಿಂದ ಎರಡು ದಿನಗಳ ಕಾಲ 850ಕ್ಕೂ ಅಧಿಕ ಆಟೋಗಳಿಂದ ಉಚಿತ ಸೇವೆ ಕೈಗೊಳ್ಳಲಾಗಿದೆ. ಶ್ರೀ ಸಿದ್ಧಾರೂಢರ ಮಠದಲ್ಲಿ ನಡೆಯುವ ಮಹಾಶಿವರಾತ್ರಿ ಹಾಗೂ ಶ್ರೀ ಸಿದ್ಧಾರೂಢರ ರಥೋತ್ಸವಕ್ಕೆ ನಗರದೆಲ್ಲೆಡೆ ಸಂಭ್ರಮ ಮನೆ ಮಾಡಿದೆ.
ಭಾನುವಾರ ಶಿವರಾತ್ರಿ ಅಂಗವಾಗಿ ಶ್ರೀ ಸಿದ್ಧಾರೂಢರ ಮಠಕ್ಕೆ ನಗರದ ವಿವಿಧ ಆಟೋ ನಿಲ್ದಾಣಗಳಿಂದ 350ಕ್ಕೂ ಅಧಿಕ ಉಚಿತ ಆಟೋ ಸೇವೆ ಒದಗಿಸಲಾಗಿದೆ. ಸೋಮವಾರ ಜಾತ್ರೆ ಹಿನ್ನೆಲೆಯಲ್ಲಿ ಇದರೊಂದಿಗೆ 500 ಆಟೋಗಳಿಂದ ಉಚಿತ ಸೇವೆ ನೀಡಲಾಗುತ್ತಿದ್ದು, ಸೋಮವಾರ ಬೆಳಗ್ಗೆ 10 ಗಂಟೆಗೆ ಹಳೇ ಹುಬ್ಬಳ್ಳಿಯ ಡಾ. ಬಿ.ಆರ್. ಅಂಬೇಡ್ಕರ್ ಮೈದಾನದಲ್ಲಿ ಚಾಲನೆ ನೀಡಲಾಗುತ್ತಿದೆ. ಎರಡು ದಿನಗಳಲ್ಲಿ ಒಟ್ಟು 850ಕ್ಕೂ ಅಧಿಕ ಆಟೋಗಳಿಂದ ಉಚಿತ ಸೇವೆ ನೀಡಲಾಗುತ್ತಿದೆ.ಎಲ್ಲಿಂದ ಸೇವೆ?ನಗರದ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣದ ಮುಂಭಾಗ ಮತ್ತು ಸುರಂಗ ಮಾರ್ಗದ ಬಳಿ ಇರುವ ಆಟೋ ನಿಲ್ದಾಣ, ಸಿಬಿಟಿ, ಅಂಬೇಡ್ಕರ್ ವೃತ್ತ, ಚೆನ್ನಮ್ಮ ವೃತ್ತ, ಹಳೇ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ, ಹೊಸೂರು ಸರ್ಕಲ್, ಗೋಕುಲ್ ರಸ್ತೆಯ ಅಕ್ಷಯ ಪಾರ್ಕ್, ನೇಕಾರ ನಗರ, ಹಳೇ ಹುಬ್ಬಳ್ಳಿ, ರಾಯನಾಳ, ಗುಡಿಹಾಳ, ಉಣಕಲ್, ಬೈರಿದೇವಕೊಪ್ಪ ಸೇರಿದಂತೆ 70ಕ್ಕೂ ಅಧಿಕ ಆಟೋ ನಿಲ್ದಾಣಗಳಿಂದ ಶ್ರೀ ಮಠಕ್ಕೆ ತೆರಳುವ ಭಕ್ತರಿಗೆ ಉಚಿತ ಆಟೋ ಸೇವೆ ಕಲ್ಪಿಸಲಾಗಿದೆ.
ನಿಲ್ದಾಣದಲ್ಲೇ ಪ್ರಸಾದ ವಿತರಣೆ
ಶ್ರೀ ಮಠಕ್ಕೆ ತೆರಳುವ ಭಕ್ತರಿಗೆ ಉಚಿತ ಆಟೋ ಸೇವೆ ಕಲ್ಪಿಸುವುದರ ಜತೆಗೆ ಭಕ್ತರಿಗೆ ಪ್ರಸಾದ ವಿತರಣೆ ಸಹ ಮಾಡಲಾಗುತ್ತಿದೆ. 5 ಕ್ವಿಂಟಲ್ ಪಲಾವ್, 10 ಕ್ವಿಂಟಲ್ ಬಾಳೆ ಹಣ್ಣು, 25 ಕೆಜಿ ಜಲೇಬಿ, 5 ಸಾವಿರ ನೀರಿನ ಪೌಚ್‌ಗಳನ್ನು ಭಕ್ತರಿಗೆ ವಿತರಿಸುವ ಈ ಮೂಲಕ ಶ್ರೀಗಳಿಗೆ ತಮ್ಮ ಸೇವೆ ಸಮರ್ಪಿಸುವುದಷ್ಟೇ ಅಲ್ಲ, ಭಕ್ತರ ಪ್ರಶಂಸೆಗೂ ಆಟೋ ಚಾಲಕರು ಪಾತ್ರರಾಗಿದ್ದಾರೆ.ಭಕ್ತಿ ಸೇವೆಪ್ರಾರಂಭದಲ್ಲಿ 50 ಆಟೋರಿಕ್ಷಾ ಚಾಲಕರಿಂದ ಸ್ವಯಂ ಪ್ರೇರಿತವಾಗಿ ಚಾಲನೆಗೊಂಡ ಈ ಭಕ್ತಿಯ ಸೇವೆಗೆ ಇಂದು 850ಕ್ಕೂ ಅಧಿಕ ಆಟೋರಿಕ್ಷಾ ಚಾಲಕರು ಕೈಜೋಡಿಸಿದ್ದಾರೆ. ಈ ಕಾರ್ಯದಲ್ಲಿ ಸರ್ವ ಧರ್ಮದ ಆಟೋ ಚಾಲಕರು ಪಾಲ್ಗೊಳ್ಳುತ್ತಿರುವುದು ವಿಶೇಷ ಎಂದು ಉತ್ತರ ಕರ್ನಾಟಕ ಆಟೋ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಹೇಳಿದರು.
ಸೇವಾ ಕಾರ್ಯಎಲ್ಲವೂ ಅಜ್ಜನ ಸನ್ನಿಧಾನಕ್ಕೆ ಬರುವ ಭಕ್ತರಿಗೆ ಅನಕೂಲವಾಗಲಿ ಎಂಬ ಉದ್ದೇಶದಿಂದ ಈ ಸೇವಾ ಕಾರ್ಯ ಕೈಗೊಳ್ಳಲಾಗುತ್ತಿದೆ. ದೂರದ ಊರಿನಿಂದ ಬರುವ ಭಕ್ತರನ್ನು ಕಾಳಜಿಯಿಂದ ಶ್ರೀಮಠಕ್ಕೆ ಬಿಡುವ ಕಾರ್ಯ ನಮ್ಮೆಲ್ಲ ಸ್ನೇಹಿತರು ಮಾಡುತ್ತಿದ್ದಾರೆ ಎಂದು ಶ್ರೀ ಸಿದ್ಧಾರೂಢ ರೈಲು ನಿಲ್ದಾಣದ ಆಟೋ ಚಾಲಕರ ಸಂಘದ ಅಧ್ಯಕ್ಷ ಶ್ರೀಕಾಂತ ಗಡಾದ ತಿಳಿಸಿದರು.