- ಎಂ.ಸಿ.ಶಿವಾನಂದ ಸ್ವಾಮಿ ಮಾಹಿತಿ । ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸದಸ್ಯರು ಮತ್ತು ಅಧಿಕಾರಿಗಳ ಸಭೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಯೋಜನೆ ಜಾರಿಯಿಂದ ಜಿಲ್ಲೆಯ ಬರೋಬ್ಬರಿ 60 ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲ ವಾಗಲಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದ ಸ್ವಾಮಿ ಹೇಳಿದರು.
ಬುಧವಾರ ನಗರ ಜಿಲ್ಲಾ ಪಂಚಾಯಿತಿಯಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸದಸ್ಯರು ಮತ್ತು ಅಧಿಕಾರಿ ಗಳೊಂದಿಗೆ ಸಭೆ ನಡೆಸಿ ಮಾತನಾಡಿ ಈವರೆಗೆ ಜಿಲ್ಲೆಯಲ್ಲಿ ಎಲ್‌ಕೆಜಿಯಿಂದ 10ನೇ ತರಗತಿ ವರೆಗೆ 93 ಸಾವಿರ ವಿದ್ಯಾರ್ಥಿಗಳು ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ದಾಖಲಾತಿ ಪಡೆದುಕೊಂಡಿದ್ದು ಈ ಪೈಕಿ 48 ಸಾವಿರ ಗಂಡು ಮಕ್ಕಳಿದ್ದಾರೆ. ಈಗಾಗಲೇ ಹೆಣ್ಣು ಮಕ್ಕಳು ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣದ ಲಾಭ ಪಡೆಯುತ್ತಿದ್ದಾರೆ.ಇನ್ನೂ ಪದವಿ, ಎಂಜಿನಿಯರಿಂಗ್, ಐಟಿಐ, ಮೆಡಿಕಲ್ ಸೇರಿದಂತೆ ವಿವಿಧ ತರಗತಿಗಳಿಗೆ ಸುಮಾರು 10 ಸಾವಿರ ಗಂಡು ಮಕ್ಕಳಿದ್ದಾರೆ. ಈ ಎಲ್ಲರಿಗೂ ಉಚಿತ ಪಾಸ್ ಸೌಲಭ್ಯ ದೊರೆಯಲಿದೆ. ಅಗತ್ಯವಿರುವವರು ಯೋಜನೆ ಲಾಭ ಪಡೆಯ ಬಹುದಾಗಿದೆ ಎಂದು ತಿಳಿಸಿದರು.
ಈ ವೇಳೆ ಕೆಎಸ್‌ಆರ್‌ಟಿಸಿಯ ಚಿಕ್ಕಮಗಳೂರು ವಿಭಾಗೀಯ ಅಧಿಕಾರಿ ಸತೀಶ್ ಮಾತನಾಡಿ ಕಳೆದ 2025-26ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟಾರೆ 8,495 ವಿದ್ಯಾರ್ಥಿಗಳು ಬಸ್ ಪಡೆದುಕೊಂಡಿದ್ದರು. ಉಚಿತ ಪಾಸ್ ಯೋಜನೆ ಹಿನ್ನೆಲೆಯಲ್ಲಿ ಈ ವರ್ಷ ಶೇ.20 ರಿಂದ 25 ರಷ್ಟು ಹೆಚ್ಚಿನ ವಿದ್ಯಾರ್ಥಿಗಳು ಈ ವರ್ಷ ಹೆಚ್ಚಾಗಿ ಪಾಸ್ ಪಡೆಯಬಹುದು ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು.
ಸುಮಾರು 1,200 ರಿಂದ 1,300 ವಿದ್ಯಾರ್ಥಿಗಳು ಈಗಾಗಲೇ ಹಣ ಪಾವತಿಸಿ ಬಸ್ ಪಾಸ್ ಪಡೆದುಕೊಂಡಿದ್ದಾರೆ. ಆ ವಿದ್ಯಾರ್ಥಿಗಳಿಗೆ ಡಿಬಿಟಿ ಮೂಲಕ ಬ್ಯಾಂಕ್ ಖಾತೆಗೆ ಹಣ ಮರುಪಾವತಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಗೃಹ ಲಕ್ಷ್ಮಿ ಬಗ್ಗೆ ಗೊಂದಲ ಸೃಷ್ಟಿ ಬೇಡಗೃಹ ಲಕ್ಷ್ಮೀ ಯೋಜನೆಗೆ ಮರು ಅರ್ಜಿ ಸಲ್ಲಿಕೆ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದು, ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಈ ಬಗ್ಗೆ ಸರ್ಕಾರ ಅಧಿಕೃತ ಆದೇಶ ಬಂದಿಲ್ಲ. ಆದೇಶ ಬರುವವರೆಗೆ ಯಾವುದೇ ಕ್ರಮ ಸಾಧ್ಯವಿಲ್ಲ. ಅನಾವಶ್ಯಕ ಗೊಂದಲ ಸೃಷ್ಟಿ ಬೇಡ ಎಂದು ಶಿವಾನಂದ ಸ್ವಾಮಿ ಸ್ಪಷ್ಟಪಡಿಸಿದರು.
ಗೃಹ ಲಕ್ಷ್ಮೀ ಯೋಜನೆಗೆ ಮರು ಅರ್ಜಿ ಸಲ್ಲಿಕೆ ಮಾಡಬೇಕಾ ಎಂದು ಜನಸಾಮಾನ್ಯರು ಕೇಳುತ್ತಿದ್ದಾರೆ ಎಂದು ಸದಸ್ಯರು ಸಭೆ ಗಮನಕ್ಕೆ ತಂದರು. ಈ ವೇಳೆ ಶಿವಾನಂದ ಸ್ವಾಮಿ, ಸರ್ಕಾರ ಆದೇಶ ಬರುವವರೆಗೆ ಯಾವುದೇ ಹೇಳಿಕೆ ನೀಡುವುದು ಬೇಡ ಎಂದು ಸೂಚಿಸಿದರು.ಗೃಹ ಲಕ್ಷ್ಮಿ 30ನೇ ಕಂತು ಬಿಡುಗಡೆ
ಈ ವರೆಗೆ 30 ಕಂತು ಗೃಹ ಲಕ್ಷ್ಮಿ ಹಣ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 2.49 ಲಕ್ಷ ಫಲಾನುಭವಿಗಳಿಗೆ ತಲಾ ₹2 ಸಾವಿರ ಜಮಾ ಆಗಿದೆ. ಜಿಲ್ಲೆಯಲ್ಲಿ 3,712 ಮಂದಿ ಮೃತಪಟ್ಟಿದ್ದಾರೆ. ಮರಣ ಪ್ರಮಾಣ ಪತ್ರ ಪಡೆದು ಗೃಹ ಲಕ್ಷ್ಮಿ ಹಣ ಪಾವತಿ ನಿಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು. ಈವರೆಗೆ ಒಟ್ಟು ₹ 49.80 ಕೋಟಿ ರು. ಫಲಾನುಭವಿಗಳಿಗೆ ನೀಡಲಾಗಿದೆ ಎಂದರು.ಸರ್ವರ್ ಸಮಸ್ಯೆ ಪರಿಹಾರ
ಕಳೆದ ಮೇ 15 ರಿಂದ 23ರ ಅವಧಿಯಲ್ಲಿ ಸರ್ವರ್ ಸಮಸ್ಯೆಯಿಂದ ಅನ್ನ ಭಾಗ್ಯದ ಅಕ್ಕಿ ವಿತರಣೆಗೆ ಸಮಸ್ಯೆ ಉಂಟಾಗಿತ್ತು. ಎನ್‌ಐಸಿಯಿಂದ ಪರಿಹಾರ ಮಾಡಲಾಗಿದೆ. ಈಗ ಯಾವುದೇ ಸಮಸ್ಯೆ ಇಲ್ಲ. ಜೂನ್‌ನಲ್ಲಿ ಒಂದು ಬಾರಿ ಮಾತ್ರ ಬಯೋ ಮೆಟ್ರಿಕ್ ಪಡೆಯುವುದಕ್ಕೆ ಸೂಚಿಸಲಾಗಿದೆ. ಕಳೆದ ತಿಂಗಳು ಎರಡು ತಿಂಗಳ ಪಡಿತರ ವಿತರಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎರಡು ಬಾರಿ ಬಯೋಮೆಟ್ರಿಕ್ ಪಡೆಯುವುದಕ್ಕೆ ಸೂಚಿಸಿತ್ತು ಎಂದು ನಾಗರಿಕ ಅಹಾರ ಸರಬರಾಜು ಇಲಾಖೆ ಉಪ ನಿರ್ದೇಶಕ ಯೋಗಾನಂದ ಮಾಹಿತಿ ನೀಡಿದರು.ಜಿಲ್ಲೆಯಲ್ಲಿ 2.46 ಲಕ್ಷ ಕುಟುಂಬಗಳಿಗೆ ಅನ್ನ ಭಾಗ್ಯದ ಅಕ್ಕಿ ಪೂರೈಕೆ ಮಾಡಲಾಗುತ್ತಿದೆ. ಒಟ್ಟು ಈವರೆಗೆ ಸರ್ಕಾರ ₹369 ಕೋಟಿ ವೆಚ್ಚ ಮಾಡಿದೆ ಎಂದು ತಿಳಿಸಿದರು.
ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷ ಎಚ್.ಎಸ್.ಕೃಷ್ಣೇಗೌಡ, ಜಿಲ್ಲಾ ಯೋಜನಾಧಿಕಾರಿ ರಾಜಗೋಪಾಲ್, ಎಲ್ಲಾ ತಾಲೂಕಿನ ಅಧ್ಯಕ್ಷರು ಉಪಸ್ಥಿತರಿದ್ದರು.----ಬಾಕ್ಸ್---
ಹೆಚ್ಚಿನ ಬಸ್ ವ್ಯವಸ್ಥೆಗೆ ಆಗ್ರಹಕೊಪ್ಪ ತಾಲೂಕಿಗೆ ಹೆಚ್ಚುವರಿಯಾಗಿ ಒಂದು ಬಸ್ ವ್ಯವಸ್ಥೆ ಮಾಡುವಂತೆ ಕಳೆದ ಏಳು ತಿಂಗಳಿನಿಂದ ಮನವಿ ಮಾಡಿದರು ಬಸ್ ವ್ಯವಸ್ಥೆ ಮಾಡಿಲ್ಲ ಎಂದು ಸದಸ್ಯರು ಅಸಮಧಾನ ವ್ಯಕ್ತಪಡಿಸಿದರು.
ಇದೇ ವೇಳೆ ತರೀಕೆರೆ-ಅಜ್ಜಂಪುರ ಹಾಗೂ ಲಿಂಗದಹಳ್ಳಿ ಮಾರ್ಗದಲ್ಲಿ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಬೇಕು. ಇರುವ ಬಸ್ ಗಳಲ್ಲಿ ಕೆಲವು ಸಮಯ ಬದಲಾವಣೆ ಮಾಡಬೇಕು. ಇದರಿಂದ ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಗ್ಯಾರಂಟಿ ಪ್ರಾಧಿಕಾರದ ಸದಸ್ಯರು ಒತ್ತಾಯಿಸಿದರು.ಈ ಕುರಿತು ಮಾಹಿತಿ ನೀಡಿದ ಕೆಎಸ್‌ಆರ್‌ಟಿಸಿ ವಿಭಾಗೀಯ ಅಧಿಕಾರಿ ಸತೀಶ್, ಜಿಲ್ಲೆಗೆ ಒಟ್ಟು ಹೊಸ 11 ಬಸ್ ಲಭ್ಯವಾಗಿದೆ. ಇನ್ನೂ 10 ಹೊಸ ಬಸ್ ಬರಬೇಕಾಗಿದೆ. ಜುಲೈ 2ನೇ ವಾರದೊಳಗೆ ಬಸ್ ವ್ಯವಸ್ಥೆ ಮಾಡಲಾಗುವುದು ಭರವಸೆ ನೀಡಿದರು.
-- ಕೋಟ್ --ಪಂಚ ಗ್ಯಾರಂಟಿ ಯೋಜನೆ ಆರಂಭಿಸಿದ ಬಳಿಕ ಈವರೆಗೆ ಜಿಲ್ಲೆಯ ಸುಮಾರು 10 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಆರ್ಥಿಕ ಬಲ ತುಂಬುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದ್ದು, ಸುಮಾರು ₹2,556 ಕೋಟಿ ಚಿಕ್ಕಮಗಳೂರು ಜಿಲ್ಲೆಗೆ ಗ್ಯಾರಂಟಿ ಯೋಜನೆಗಳಿಗೆ ವೆಚ್ಚ ಮಾಡಿದೆ. ಶೇ.95 ರಷ್ಟು ಫಲಾನುಭವಿಗಳಿಗೆ ಯೋಜನೆ ತಲುಪಿದೆ.
-ಎಂ,ಸಿ.ಶಿವಾನಂದ ಸ್ವಾಮಿ ಜಿಲ್ಲಾಧ್ಯಕ್ಷ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ, ಚಿಕ್ಕಮಗಳೂರು