ತಪಾಸಣಾ ಶಿಬಿರಗಳಲ್ಲಿ ಗುರುತಿಸಲಾದ ಒಟ್ಟು ೧೦೭ ರೋಗಿಗಳಿಗೆ ಆಸ್ಪತ್ರೆಯಲ್ಲಿ ಉಚಿತವಾಗಿ ನೇತ್ರ ಶಸ್ತç ಚಿಕಿತ್ಸೆ ನಡೆಸಲಾಗಿದೆ.

ಸಂಡೂರು: ಜೆಎಸ್‌ಡಬ್ಲು ಫೌಂಡೇಶನ್ ಸಹಕಾರದಲ್ಲಿ ಅಂಧತ್ವ ಮುಕ್ತ ಬಳ್ಳಾರಿ ಉಪಕ್ರಮದ ಭಾಗವಾಗಿ ತಾಲೂಕಿನ ತೋರಣಗಲ್ಲಿನಲ್ಲಿರುವ ಜಿಂದಾಲ್ ಸಂಜೀವಿನಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಗುರುವಾರ ಉಚಿತವಾಗಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು.

೧೯ ಮಂದಿಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಗ್ರಾಮೀಣ ಆರೋಗ್ಯ ಶಿಬಿರ ಹಾಗೂ ದೃಷ್ಟಿ ತಪಾಸಣಾ ಶಿಬಿರಗಳಲ್ಲಿ ಗುರುತಿಸಲಾದ ಒಟ್ಟು ೧೦೭ ರೋಗಿಗಳಿಗೆ ಆಸ್ಪತ್ರೆಯಲ್ಲಿ ಉಚಿತವಾಗಿ ನೇತ್ರ ಶಸ್ತç ಚಿಕಿತ್ಸೆ ನಡೆಸಲಾಗಿದೆ.

ಶಿಬಿರಗಳಲ್ಲಿ ಶಿಫಾರಸ್ತು ಕಾರ್ಡ್‌ಗಳನ್ನು ಪಡೆದ ರೋಗಿಗಳಿಗೆ ಆಸ್ಪತ್ರೆಯಲ್ಲಿ ಆಹಾರ, ವಸತಿ ಸೇರಿದಂತೆ ಸಂಪೂರ್ಣ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಯಿತು. ಕಣ್ಣಿನ ಪೊರೆ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಎಬಿ ಸ್ಕ್ಯಾನ್ ತಂತ್ರಜ್ಞಾನ ಬಳಸಲಾಗುತ್ತಿದ್ದು, ಇದು ಶೇ.೧೦೦ರಷ್ಟು ನಿಖರತೆ ನೀಡುತ್ತದೆ. ಚಿಕಿತ್ಸೆ ಪಡೆದ ಎಲ್ಲರೂ ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ಕುಟುಂಬಗಳಿಗೆ ಸೇರಿದವರಾಗಿದ್ದು, ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಜೆಎಸ್‌ಡಬ್ಲು ಫೌಂಡೇಶನ್ ಭರಿಸಿದೆ.

ಕಣ್ಣಿನ ಪೊರೆಯ ಚಿಕಿತ್ಸೆ ಪಡೆದುಕೊಂಡ ಕುಡುತಿನಿ ಗ್ರಾಮದ ಖಾಸಗಿ ಶಾಲಾ ಶಿಕ್ಷಕಿ ಉಮಾ ಮಹೇಶ್ವರಿ ಹಾಗೂ ಪಿಕೆ ಹಳ್ಳಿ ಗ್ರಾಮದ ದಿನಗೂಲಿ ಕಾರ್ಮಿಕ ಭೀಮಪ್ಪ ಅವರು ಉಚಿತವಾಗಿ ಮತ್ತು ಯಶಸ್ವಿಯಾಗಿ ಕಣ್ಣಿನ ಪೊರೆಯ ಚಿಕಿತ್ಸೆ ಪಡೆಯಲು ನೆರವಾದ ಫೌಂಡೇಶನ್‌ಗೆ ಮತ್ತು ವೈದ್ಯರಿಗೆ ಧನ್ಯವಾದಗಳನ್ನು ತಿಳಿಸಿದರು.

ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ವೈದ್ಯಕೀಯ ಸೇವೆಗಳ ಮುಖ್ಯಸ್ಥ ಡಾ. ಸನ್ನಿಈಯಪ್ಪನ್, ಜೆಎಸ್‌ಡಬ್ಲು ಫೌಂಡೇಶನ್ ದಕ್ಷಿಣ ವಲಯ ಮುಖ್ಯಸ್ಥ ಪೆದ್ದಣ್ಣ ಬೀಡಲಾ, ಆಸ್ಪತ್ರೆ ಸೌಕರ್ಯಗಳ ನಿರ್ದೇಶಕ ಮಂಜುನಾಥ್, ನೇತ್ರ ತಜ್ಞ ಡಾ. ಭರತ್‌ಕುಮಾರ್, ರಾಘವೇಂದ್ರ, ಮುತ್ತುಕೃಷ್ಣ ಹಾಗೂ ತಂಡದ ಸದಸ್ಯರು ಉಪಸ್ಥಿತರಿದ್ದರು.

ಸಂಡೂರು ತಾಲೂಕಿನ ತೋರಣಗಲ್ಲಿನಲ್ಲಿರುವ ಜಿಂದಾಲ್ ಸಂಜೀವಿನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜೆಎಸ್‌ಡಬ್ಲು ಫೌಂಡೇಶನ್ ಸಹಕಾರದೊಂದಿಗೆ ಗುರುವಾರ ೧೯ ಜನರಿಗೆ ಉಚಿತವಾಗಿ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ ನಡೆಸಲಾಯಿತು.