ಶಾಹೀನ್ ಸಂಸ್ಥೆಯಿಂದ ಉಚಿತ ಸಿಯುಇಟಿ ತರಬೇತಿ

| Published : Oct 05 2024, 01:39 AM IST

ಶಾಹೀನ್ ಸಂಸ್ಥೆಯಿಂದ ಉಚಿತ ಸಿಯುಇಟಿ ತರಬೇತಿ
Share this Article
  • FB
  • TW
  • Linkdin
  • Email

ಸಾರಾಂಶ

ಬೀದರ್‌ನಲ್ಲಿ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಅವರು ಸಿಯುಇಟಿ ಉಚಿತ ತರಬೇತಿಯ ಭಿತ್ತಿಪತ್ರ ಬಿಡುಗಡೆ ಮಾಡಿದರು.

ಕನ್ನಡಪ್ರಭ ವಾರ್ತೆ ಬೀದರ್

ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವಾಗಲು ಇಲ್ಲಿನ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹವು ವಿಶ್ವವಿದ್ಯಾಲಯಗಳ ಸ್ನಾತಕ ಹಾಗೂ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆಗಳ ಉಚಿತ ತರಬೇತಿ ನೀಡಲು ನಿರ್ಧರಿಸಿದೆ.

ತರಬೇತಿಗಾಗಿ ಅ.26 ರಂದು ದೇಶದ 15 ರಾಜ್ಯಗಳ 100 ಕೇಂದ್ರಗಳಲ್ಲಿ ಅರ್ಹತಾ ಪರೀಕ್ಷೆ ನಡೆಯಲಿದೆ ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ತಿಳಿಸಿದ್ದಾರೆ.

ದ್ವಿತೀಯ ಪಿಯುಸಿ ಪಾಸಾದ ಅಥವಾ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸ್ನಾತಕ ಹಾಗೂ ಪದವಿ ಅಂತಿಮ ವರ್ಷದಲ್ಲಿ ಓದುತ್ತಿರುವ ಅಥವಾ ಉತ್ತೀರ್ಣರಾದ ಅಭ್ಯರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆಗಳ ತರಬೇತಿಗೆ ಅರ್ಹರು ಎಂದು ಹೇಳಿದ್ದಾರೆ.

ಶಾಹೀನ್‌ನ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ನವೆಂಬರ್‌ನಿಂದ ಸ್ನಾತಕ ಹಾಗೂ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆಗಳ ಆನ್‌ಲೈನ್ ತರಬೇತಿ ಆರಂಭವಾಗಲಿದೆ. ಸ್ನಾತಕ ಸಾಮಾನ್ಯ ಪ್ರವೇಶ ಪರೀಕ್ಷೆಯ ಆಫ್‌ಲೈನ್ ತರಬೇತಿ ಮಾರ್ಚ್-ಏಪ್ರಿಲ್, ಸ್ನಾತಕೋತ್ತರ ತರಬೇತಿ ಜನವರಿ- ಫೆಬ್ರುವರಿಯಲ್ಲಿ ಶುರುವಾಗಲಿವೆ ಎಂದು ತಿಳಿಸಿದ್ದಾರೆ.

ಆಫ್‌ಲೈನ್ ತರಬೇತಿಯು ಊಟ, ವಸತಿ ಸಹಿತ 40 ದಿನಗಳು ಇರಲಿದೆ. ಆಸಕ್ತರು ಅ.22ರ ಒಳಗೆ www.shaheengroup.org/cuet ನಲ್ಲಿ ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 8549897767 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಕೇಂದ್ರೀಯ ವಿಶ್ವವಿದ್ಯಾಲಯಗಳು ಸೇರಿದಂತೆ ದೇಶದಲ್ಲಿ ಸುಮಾರು 200 ವಿಶ್ವವಿದ್ಯಾಲಯಗಳಿವೆ. ಸರ್ಕಾರದ ವಿಶ್ವವಿದ್ಯಾಲಯಗಳಲ್ಲಿ ಬಹು ಬೇಡಿಕೆಯ ವಿವಿಧ ಕೋರ್ಸ್‌ಗಳು, ಗುಣಮಟ್ಟದ ಶಿಕ್ಷಣ, ಉತ್ತಮ ಶೈಕ್ಷಣಿಕ ವಾತಾವರಣ ಹಾಗೂ ಅತ್ಯಂತ ಕಡಿಮೆ ಶುಲ್ಕ ಇದೆ.

ಹೀಗಾಗಿ ವಿಶ್ವವಿದ್ಯಾಲಯಗಳ ಸಾಮಾನ್ಯ ಪ್ರವೇಶ ಪರೀಕ್ಷೆಯ ಕುರಿತು ಜಾಗೃತಿ ಮೂಡಿಸಲು ಹಾಗೂ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯಗಳ ಸ್ನಾತಕ ಹಾಗೂ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕೆ ನೆರವಾಗಲು ಉಚಿತ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಶಾಹೀನ್‌ ಸಂಸ್ಥೆಯಲ್ಲಿ ಕಳೆದ ವರ್ಷ ಪ್ರಾಯೋಗಿಕವಾಗಿ ಸಿಯುಇಟಿ ತರಬೇತಿ ಕೊಡಲಾಗಿದ್ದು, 6 ಅಭ್ಯರ್ಥಿಗಳು ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಯಶಸ್ಸು ಕಂಡಿದ್ದಾರೆ. ಉಚಿತ ತರಬೇತಿಯು ವಿದ್ಯಾರ್ಥಿಗಳಿಗೆ ಯುಪಿಎಸ್‌ಸಿ, ಕೆಪಿಎಸ್‌ಸಿ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.

ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಉಚಿತ ತರಬೇತಿಯ ಲಾಭ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.