ಮುರ್ಡೇಶ್ವರದ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯಲ್ಲಿ ತೃತೀಯ ವರ್ಷದ "ಅಕ್ಷರ ಪರ್ವ-೨೦೨೬ " ಸ್ಕಾಲರ್‌ಶಿಪ್ ಪರೀಕ್ಷೆ ಏ. ೧೨ರಂದು ಬೆಳಗ್ಗೆ ೧೦ ಗಂಟೆಯಿಂದ ೧೨ ಗಂಟೆಯ ತನಕ ನಡೆಯಲಿದ್ದು, ಪರೀಕ್ಷೆಯಲ್ಲಿ ಉತ್ತೀರ್ಣರಾದ ಆಯಾ ವಿಭಾಗದ ಟಾಪ್ ೧೦ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಂಕಾಳ ವೈದ್ಯ ತಿಳಿಸಿದ್ದಾರೆ.
ಭಟ್ಕಳ: ಮುರ್ಡೇಶ್ವರದ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯಲ್ಲಿ ತೃತೀಯ ವರ್ಷದ "ಅಕ್ಷರ ಪರ್ವ-೨೦೨೬ " ಸ್ಕಾಲರ್‌ಶಿಪ್ ಪರೀಕ್ಷೆ ಏ. ೧೨ರಂದು ಬೆಳಗ್ಗೆ ೧೦ ಗಂಟೆಯಿಂದ ೧೨ ಗಂಟೆಯ ತನಕ ನಡೆಯಲಿದ್ದು, ಪರೀಕ್ಷೆಯಲ್ಲಿ ಉತ್ತೀರ್ಣರಾದ ಆಯಾ ವಿಭಾಗದ ಟಾಪ್ ೧೦ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಂಕಾಳ ವೈದ್ಯ ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ೮, ೯, ೧೦ನೇ ತರಗತಿ ಹಾಗೂ ಪಿಯುಸಿ ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರವೇಶಕ್ಕಾಗಿ ಪರೀಕ್ಷೆ ನಡೆಸಲಾಗುತ್ತಿದೆ. ಎಲ್ಲ ವಿಭಾಗದ ಪ್ರಥಮ ಹತ್ತು ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆಯಲ್ಲಿ ದ್ವಿತೀಯ ಪಿಯುಸಿ ತನಕ ಉಚಿತ ಶಿಕ್ಷಣ ನೀಡಲಿದ್ದೇವೆ. ಮುಂದೆ ಅವರು ಉನ್ನತ ಶಿಕ್ಷಣಕ್ಕೆ ಹೋಗುವುದಿದ್ದಲ್ಲಿ ಸಹಾಯ-ಸಹಕಾರ ಮಾಡಲಾಗುವುದು ಎಂದೂ ಹೇಳಿದರು.ಈ ಹಿಂದೆ ಎರಡು ವರ್ಷಗಳಲ್ಲಿ ಪರೀಕ್ಷೆ ಬರೆದು ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನಮ್ಮ ಶಾಲೆಯಲ್ಲಿ ವಿದ್ಯಾಭ್ಯಾಸಕ್ಕೆ ತೊಂದರೆ ಇರುವ, ತಂದೆ ತಾಯಿ ಇಲ್ಲದ, ತೀರಾ ಬಡಕುಟುಂಬದ ಅನೇಕ ವಿದ್ಯಾರ್ಥಿಗಳು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ ಎಂದರು.
ಪ್ರೌಢಶಾಲಾ ವಿಭಾಗದಲ್ಲಿ ೮, ೯, ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಹಾಗೂ ಪಿಯುಸಿ ಕಾಮರ್ಸ್ ಹಾಗೂ ಸೈನ್ಸ್ ವಿಭಾಗದ ವಿದ್ಯಾರ್ಥಿಗಳು ಪರೀಕ್ಷೆಗೆ ಭಾಗವಹಿಸಬಹುದಾಗಿದೆ. ಏ. ೧೨ರಂದು ಬೆಳಗ್ಗೆ ೧೦ ಗಂಟೆಗೆ ಪರೀಕ್ಷೆ ನಡೆಯಲಿದ್ದು, ಒಟ್ಟು ೪೦ ಅಂಕಗಳು, ಪ್ರಸ್ತುತ ಪಠ್ಯ ೨೦ ಅಂಕಗಳು, ಸಾಮಾನ್ಯ ಜ್ಞಾನ ೧೦ ಅಂಕಗಳು ಹಾಗೂ ಬರವಣಿಗೆ ೧೦ ಅಂಕಗಳಾಗಿರುತ್ತವೆ. ಆಸಕ್ತರು ಗೂಗಲ್ ಫಾರ್ಮ ತುಂಬಿ ಪರೀಕ್ಷೆಗೆ ಹಾಜರಾಗಬಹುದು ಹಾಗೂ ಅಂದು ಬೆಳಗ್ಗೆ ಶಾಲೆಗೆ ಬಂದು ಅಲ್ಲಿಯೇ ನೋಂದಣಿ ಮಾಡಿಸಲು ಕೂಡಾ ಅವಕಾಶವಿದೆ ಎಂದರು. ಆಡಳಿತ ನಿರ್ದೇಶಕಿ ಡಾ. ಪುಷ್ಪಲತಾ ಮಂಕಾಳ ವೈದ್ಯ, ವಿ.ಡಿ. ಮೊಗೇರ ಉಪಸ್ಥಿತರಿದ್ದರು. ಅಕ್ಷರ ಪರ್ವದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಕಚೇರಿ ಸಂಖ್ಯೆ ೯೪೪೯೧೦೭೭೦೪ ಸಂಪರ್ಕಿಸಬಹುದು ಎಂದೂ ತಿಳಿಸಲಾಗಿದೆ.