ತಮಿಳು ಯುವಕರ ಉಚಿತ ಆಹಾರ ಸೇವೆ ಶ್ಲಾಘನೀಯ: ಶಾಸಕ ಬಿ.ಕೆ ಸಂಗಮೇಶ್ವರ್

| Published : Nov 01 2025, 01:30 AM IST

ತಮಿಳು ಯುವಕರ ಉಚಿತ ಆಹಾರ ಸೇವೆ ಶ್ಲಾಘನೀಯ: ಶಾಸಕ ಬಿ.ಕೆ ಸಂಗಮೇಶ್ವರ್
Share this Article
  • FB
  • TW
  • Linkdin
  • Email

ಸಾರಾಂಶ

ತಮಿಳು ಸಮುದಾಯದವರು ಯಾರನ್ನು ಅವಲಂಬಿಸದೆ ತಮ್ಮ ಶ್ರಮದಿಂದ ಸ್ವಂತ ಬಲದ ಮೇಲೆ ಬದುಕು ಕಟ್ಟಿಕೊಳ್ಳುವ ಜನರಾಗಿದ್ದು, ಇಂತಹ ಸಮುದಾಯದವರು ಹಸಿದವರಿಗೆ ಉಚಿತವಾಗಿ ಬೆಳಗಿನ ಉಪಾಹಾರ ನೀಡುವ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದು ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಪ್ರಶಂಸೆ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಭದ್ರಾವತಿ

ತಾಲೂಕಿನ ಹೊಸಮನೆ ಮುಖ್ಯರಸ್ತೆ, ಸಂತೆ ಮೈದಾನದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ತಮಿಳು ಯೂತ್ಸ್ ಅಸೋಸಿಯೇಷನ್ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ತಮಿಳು ಯುವಕರು ಒಗ್ಗೂಡಿಕೊಂಡು ೫೦೦ ದಿನಗಳ ಕಾಲ ನಿರಂತರವಾಗಿ ಸೇವೆ ಮುನ್ನಡೆಸಿಕೊಂಡು ಬಂದಿರುವುದು ಶ್ಲಾಘನೀಯ ಎಂದರು.

ಸಮಾಜದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿದರೂ ಸಹ ಕೆಲವರು ಟೀಕೆಗಳನ್ನು ಮಾಡುತ್ತಾರೆ. ಅವುಗಳಿಗೆ ತಲೆಕೆಡಿಸಿಕೊಳ್ಳದೆ ಎಲ್ಲರೂ ಒಗ್ಗಟ್ಟಾಗಿ ತಮ್ಮ ಸೇವೆ ಮುನ್ನಡೆಸಿಕೊಂಡು ಹೋಗಬೇಕು. ಅಲ್ಲದೆ ಎಲ್ಲಾ ರೀತಿಯ ಸಂಕಷ್ಟಗಳಿಗೂ ಸ್ಪಂದಿಸುವ ನಿಟ್ಟಿನಲ್ಲಿ ಯುವಕರು ಹೆಚ್ಚಿನ ಗಮನ ನೀಡಬೇಕು. ಸೇವಾ ಕಾರ್ಯಗಳಿಗೆ ನೆರವಾಗುವ ನಿಟ್ಟಿನಲ್ಲಿ ವೈಯಕ್ತಿಕವಾಗಿ ೨ ಲಕ್ಷ ರು. ನೆರವು ನೀಡುವುದಾಗಿ ಭರವಸೆ ನೀಡಿದರು.

ಹಿರಿಯ ಪತ್ರಕರ್ತ ಕಣ್ಣಪ್ಪ ಮಾತನಾಡಿ, ತಮಿಳರು ಎಂದರೆ ಶ್ರಮಜೀವಿಗಳು ಮತ್ತು ನಂಬಿಕೆಗೆ ಅರ್ಹರಾದವರು. ಶ್ರಮದ ಬದುಕಿನಲ್ಲೂ ಸಮಾಜದ ಎಲ್ಲರ ಏಳಿಗೆಗಾಗಿ ಸೇವಾ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮಾದರಿಯಾದವರು. ತಮಿಳು ಯುವಕರು ೫೦೦ ದಿನಗಳ ಕಾಲ ಬೆಳಗಿನ ಉಚಿತ ಉಪಾಹಾರ ಸೇವಾ ಕಾರ್ಯ ಯಶಸ್ವಿಯಾಗಿ ನಡೆಸಿರುವುದು ತಮಿಳು ಸಮಾಜಕ್ಕೆ ಹೆಮ್ಮೆಯ ಸಂಗತಿ ಎಂದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್, ಆಗಮುಡಿ ಮೊದಲಿಯಾರ್ ಸಮಾಜದ ತಾಲೂಕು ಅಧ್ಯಕ್ಷ ಕೆ. ಮಂಜುನಾಥ್, ನಗರಸಭೆ ಹಿರಿಯ ಸದಸ್ಯ ವಿ.ಕದಿರೇಶ್, ಬಿಜೆಪಿ ಯುವ ಮುಖಂಡ ಮಂಗೋಟೆ ರುದ್ರೇಶ್ ಇತರರು ಮಾತನಾಡಿದರು.

ಸಂಘದ ಗೌರವಾಧ್ಯಕ್ಷ, ಯುವ ಮುಖಂಡ ಶಿವಕುಮಾರ್ ಮತ್ತು ಅಧ್ಯಕ್ಷ ಜಯಕುಮಾರ್, ನಗರಸಭೆ ಸದಸ್ಯರಾದ ಅನುಸುಧಾ ಮೋಹನ್ ಪಳನಿ, ಬಸವರಾಜ್ ಬಿ.ಆನೇಕೊಪ್ಪ, ಕೆ.ಸುದೀಪ್‌ಕುಮಾರ್, ಟಿಪ್ಪುಸುಲ್ತಾನ್, ಉದ್ಯಮಿ ಎ.ಮಾಧು, ಸುರಕ್ಷಾ ಜೀವನಾ ಸೇವಾ ಟ್ರಸ್ಟ್‌ನ ಜ್ಯೋತಿ ಸೋಮಶೇಖರ್, ಸಂಜೀವಿನ ಹಿರಿಯ ನಾಗರಿಕರ ಆರೈಕೆ ಕೇಂದ್ರದ ಸವಿತಾ, ಸಿದ್ದಾರ್ಥ ಅಂಧರ ಕೇಂದ್ರದ ಶಿಬಬಸಪ್ಪ, ಕಾರ್ಮಿಕ ಮುಖಂಡ ವಿ.ವಿನೋದ್, ತಮಿಳು ಯೂತ್ಸ್ ಅಸೋಸಿಯೇಷನ್ ಪದಾಧಿಕಾರಿಗಳು, ಸದಸ್ಯರು ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಪಾಲ್ಗೊಂಡಿದ್ದರು.