ಅಂಧ, ಅನಾಥ ಮಕ್ಕಳಿಗೆ ದೇವು ಹಡಪದ ಉಚಿತ ಕ್ಷೌರ ಸೇವೆ

| Published : Jun 20 2024, 01:06 AM IST

ಅಂಧ, ಅನಾಥ ಮಕ್ಕಳಿಗೆ ದೇವು ಹಡಪದ ಉಚಿತ ಕ್ಷೌರ ಸೇವೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಡರಗಿಯ ಶಿವು ಲಕ್ಕಿ ಮೆನ್ಸ್‌ ಪಾರ್ಲರ್ ಮಾಲೀಕ ದೇವು ಹಡಪದ ಅವರು ಪ್ರತಿವರ್ಷ ತಮ್ಮ ಮೆನ್ಸ್‌ ಪಾರ್ಲರ್ ವಾರ್ಷಿಕೋತ್ಸವದ ಅಂಗವಾಗಿ ಗದುಗಿನ ಪುಟ್ಟರಾಜ ಗವಾಯಿಗಳ ಮಠಕ್ಕೆ ಹೋಗಿ ಅಲ್ಲಿನ ಅಂಧ, ಅನಾಥ ಮಕ್ಕಳ ಕ್ಷೌರ ಮಾಡುವ ಮೂಲಕ ವಿಶಿಷ್ಟ ಸೇವೆ ಸಲ್ಲಿಸುತ್ತಾರೆ.

ಶರಣು ಸೊಲಗಿ

ಮುಂಡರಗಿ: ಇಲ್ಲಿಯ ಶಿವು ಲಕ್ಕಿ ಮೆನ್ಸ್‌ ಪಾರ್ಲರ್ ಮಾಲೀಕ ದೇವು ಹಡಪದ ಅವರು ಪ್ರತಿವರ್ಷ ತಮ್ಮ ಮೆನ್ಸ್‌ ಪಾರ್ಲರ್ ವಾರ್ಷಿಕೋತ್ಸವದ ಅಂಗವಾಗಿ ಗದುಗಿನ ಪುಟ್ಟರಾಜ ಗವಾಯಿಗಳ ಮಠಕ್ಕೆ ಹೋಗಿ ಅಲ್ಲಿನ ಅಂಧ, ಅನಾಥ ಮಕ್ಕಳ ಕ್ಷೌರ ಮಾಡುವ ಮೂಲಕ ವಿಶಿಷ್ಟ ಸೇವೆ ಸಲ್ಲಿಸುತ್ತಾರೆ.

ಕಳೆದ 15 ವರ್ಷದಿಂದ ಸತತವಾಗಿ ಅವರು ಈ ಸೇವೆ ಸಲ್ಲಿಸುತ್ತಿದ್ದು, ಸ್ಥಳೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವಾರ್ಷಿಕೋತ್ಸವದ ದಿನ ಅವರು ತಮ್ಮ ಎಲ್ಲ ಸಿಬ್ಬಂದಿಯನ್ನು ವೀರೇಶ್ವರ ಪುಣ್ಯಾಶ್ರಮಕ್ಕೆ ಕರೆದೊಯ್ಯುತ್ತಾರೆ. ಅಲ್ಲಿ ಎಲ್ಲ ಅಂಧ ಮಕ್ಕಳಿಗೂ ಉಚಿತ ಕ್ಷೌರ ಮಾಡುತ್ತಾರೆ.

ವೀರೇಶ್ವರ ಪುಣ್ಯಾಶ್ರಮದ ಪಂ. ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಹಾಗೂ ಪಂ. ಪುಟ್ಟರಾಜದ ಕವಿ ಗವಾಯಿಗಳ ಉಭಯ ಶ್ರೀಗಳ ಜಾತ್ರಾ ಮಹೋತ್ಸವದ ಅಂಗವಾಗಿ ಅವರು ಇಂಥ ಸೇವೆ ಸಲ್ಲಿಸುತ್ತಾರೆ.

ಪ್ರಾರಂಭದಲ್ಲಿ 170 ಮಕ್ಕಳಿಗೆ ಅವರು ಉಚಿತ ಕ್ಷೌರ ಮಾಡುತ್ತಿದ್ದರು. ಈಗ 500ಕ್ಕೂ ಹೆಚ್ಚು ಮಕ್ಕಳಿಗೆ ಅವರು ಕ್ಷೌರ ಸೇವೆ ಸಲ್ಲಿಸುತ್ತಾರೆ.

ಈ ವರ್ಷ ಜೂ. 18ರಂದು ಗದಗಗೆ ತೆರಳಿ 500ಕ್ಕೂ ಹೆಚ್ಚು ಮಕ್ಕಳಿಗೆ ಕ್ಷೌರ ಮಾಡಿ ಬಂದಿದ್ದಾರೆ. ವಾರ್ಷಿಕೋತ್ಸವದ ನೆಪದಲ್ಲಿ ದೇವು ಹಡಪದ ಹಾಗೂ ಬಳಗದವರು ನಡೆಸುತ್ತಿರುವ ಕಾರ್ಯ ಎಲ್ಲರೂ ಮೆಚ್ಚುವಂಥದ್ದು. ಅವರಿಗೆ ಪಂಚಾಕ್ಷರಿ ಗವಾಯಿಗಳ ಹಾಗೂ ಪುಟ್ಟರಾಜ ಕವಿ ಗವಾಯಿಗಳ ಆಶೀರ್ವಾದ ಸದಾ ಇರಲಿದೆ ಎಂದು ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಸಂತಸ ವ್ಯಕ್ತಪಡಿಸಿ, ಸೇವೆ ಮಾಡಿದ ಎಲ್ಲರಿಗೂ ಸನ್ಮಾನಿಸಿ, ಆಶೀರ್ವದಿಸಿದ್ದಾರೆ.

ದೇವು ಹಡಪದ, ಸುರೇಶ ಹಡಪದ, ಮಲ್ಲಿಕಾರ್ಜುನ ಹಡಪದ, ನಾಗಪ್ಪ ಹಡಪದ, ಈರಣ್ಣ ಹಾರೋಗೇರಿ, ಭೀಮಸಿ ಹಡಪದ, ಕೊಟ್ರೇಶ ಹಡಪದ, ಬಸವರಾಜ ಹಡಪದ, ಸುದೀಪ ಹಡಪದ, ಪ್ರಕಾಶ ಹಡಪದ, ರಾಮು ಹಡಪದ, ವೀರಣ್ಣ ಹಡಪದ ಕೌಜಗೇರಿ ಸೇರಿದಂತೆ ಅನೇಕರು ದೇವು ಹಡಪದ ನೇತೃತ್ವದಲ್ಲಿ ಕ್ಷೌರ ಸೇವಾಕಾರ್ಯದಲ್ಲಿ ತೊಡಗಿಕೊಂಡಿದ್ದರು.ವರ್ಷದ 365 ದಿನಗಳಲ್ಲಿ ನಾವು ನಮಗಾಗಿ, ನಮ್ಮ ಕುಟುಂಬದವರ ಒಳಿತಿಗಾಗಿ ದುಡಿದರೆ, ಒಂದು ದಿನ ಇಂತಹ ಪುಣ್ಯಾಶ್ರಮದ ಮಕ್ಕಳ ಸೇವೆ ಮಾಡುವಾಗ ದೊರೆಯುವ ಸಂತಸ ಹೇಳತೀರದು. ನಾಡಿನಾದ್ಯಂತ ಇರುವ ಅಂಧ ಮತ್ತು ಅನಾಥ ಮಕ್ಕಳನ್ನು ಹುಡುಕಿ ತಂದು ಅವರಿಗೆ ಅನ್ನ, ಅರಿವೆ ಮತ್ತು ಆಶ್ರಯ ನೀಡುತ್ತಿರುವ ಈ ಪುಣ್ಯಾಶ್ರಮದ ಸೇವೆ ನೋಡಿದರೆ ನಮ್ಮ ಸೇವೆ ಸಣ್ಣದು ಎಂದು ಮುಂಡರಗಿ ಶಿವು ಮೆನ್ಸ್ ಲಕ್ಕಿ ಪಾರ್ಲರ್ ದೇವು ಹಡಪದ ಹೇಳಿದರು.