ಎಚ್‌ಸಿಎಂ ಹುಟ್ಟುಹಬ್ಬಕ್ಕೆ ಉಚಿತ ಆರೋಗ್ಯ ಶಿಬಿರ

| Published : Apr 17 2025, 12:03 AM IST

ಸಾರಾಂಶ

ಹನೂರು ಕಾಂಗ್ರೆಸ್ ಕಚೇರಿಯಲ್ಲಿ ಎಚ್.ಸಿ ಮಹಾದೇವಪ್ಪ ಅಭಿಮಾನಿ ಬಳಗದ ವತಿಯಿಂದ ರಾಜ್ಯ ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಮಧುವನಹಳ್ಳಿ ಶಿವಕುಮಾರ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹನೂರು

ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡುವ ಸಂಬಂಧ ಹನೂರು ಪಟ್ಟಣದಲ್ಲಿ ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗಿದ್ದು ಹನೂರು ಕ್ಷೇತ್ರದ ಜನತೆ ಈ ಶಿಬಿರವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ರಾಜ್ಯ ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಮಧುವನಹಳ್ಳಿ ಶಿವಕುಮಾರ್ ಮನವಿ ಮಾಡಿದರು.

ಹನೂರಿನ ಕಾಂಗ್ರೆಸ್ ಕಚೇರಿಯಲ್ಲಿ ಎಚ್.ಸಿ.ಮಹಾದೇವಪ್ಪ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ದಲಿತರ ಆಶಾಕಿರಣ, ಹಿಂದುಳಿದ ವರ್ಗದ ನೇತಾರರಾದ ಮಹದೇವಪ್ಪ ಅವರು ಹನೂರು ವಿಧಾನಸಭಾ ಕ್ಷೇತ್ರವನ್ನು ವಿಶೇಷವಾಗಿ ಪರಿಗಣಿಸಿ ಹೆಚ್ಚಿನ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಹನೂರು ಕ್ಷೇತ್ರದಲ್ಲಿನ ರಸ್ತೆ ಸಾರಿಗೆ ವಿದ್ಯುತ್ ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮಲೆಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ಆಯೋಜನೆ ಮಾಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಕಾರಣೀಭೂತರಾಗಿದ್ದಾರೆ.

ಮಾಜಿ ಶಾಸಕ ಆರ್.ನರೇಂದ್ರ ಅಧ್ಯಕ್ಷತೆಯಲ್ಲಿ ಸಮೃದ್ಧಿ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಮತ್ತು ಈಸ್ಟ್ ಪಾಯಿಂಟ್ ಮೆಡಿಕಲ್ ಕಾಲೇಜು ಆಸ್ಪತ್ರೆ ಬೆಂಗಳೂರು ಇವರ ಸಹಯೋಗದಲ್ಲಿ ಸಚಿವ ಎಚ್ ಸಿ ಮಹದೇವಪ್ಪ ಹುಟ್ಟು ಹಬ್ಬದ ಪ್ರಯುಕ್ತ ಉಚಿತ ಆರೋಗ್ಯ ಶಿಬಿರವನ್ನು ಏ.20ರಂದು ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ಆಯೋಜನೆ ಮಾಡಲಾಗಿದೆ. ಶಿಬಿರದಲ್ಲಿ ಸಾಮಾನ್ಯ ವೈದ್ಯಕೀಯ, ಹೃದಯ ರೋಗ, ಸಾಮಾನ್ಯ ಶಸ್ತ್ರ ಚಿಕಿತ್ಸೆ, ಪ್ಲಾಸ್ಟಿಕ್ ಸರ್ಜರಿ, ನರರೋಗ ಶಸ್ತ್ರ ಚಿಕಿತ್ಸಾ ತಪಾಸಣೆ ಶಿಶು ವೈದ್ಯಕೀಯ, ಕಣ್ಣು ಮತ್ತು ಕಿವಿ, ಮೂಗು ಗಂಟಲು ತಪಾಸಣೆ, ಸ್ತ್ರೀರೋಗ ಮತ್ತು ಪ್ರಸ್ತುತಿ ತಪಾಸಣೆ ಮೂತ್ರ ಕೋಶ ಹಾಗೂ ಮೂತ್ರಪಿಂಡದ,ಇಸಿಜಿ, ಬಿ.ಪಿ ಶುಗರ್ ತಪಾಸಣೆಯನ್ನು ತಜ್ಞೆ ವೈದ್ಯರಿಂದ ಉಚಿತವಾಗಿ ತಪಾಸಣೆ ಮಾಡಲಾಗುವುದು ಎಂದರು.

ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ ಮಾತನಾಡಿ, ರೋಗಿಗಳಿಗೆ ಹೆಚ್ಚಿನ ಅವಶ್ಯಕತೆ ಇದ್ದಲ್ಲಿ ಕಡಿಮೆ ವೆಚ್ಚದಲ್ಲಿ ಉನ್ನತ ಮಟ್ಟದ ಚಿಕಿತ್ಸೆ ನೀಡಲಾಗುವುದು. ಶಸ್ತ್ರ ಚಿಕಿತ್ಸೆ ಉಚಿತವಿದ್ದು ಅವಶ್ಯವಿರುವ ಔಷಧಿಗಳನ್ನು ಖರೀದಿಸಬೇಕಾಗುತ್ತದೆ. ರಕ್ತ ಪರೀಕ್ಷೆಗಳು ಉಚಿತವಾಗಿರುತ್ತದೆ, ಶಿಬಿರಕ್ಕೆ ಬರುವ ರೋಗಿಗಳಿಗೆ ಹಾಸಿಗೆ ಮತ್ತು ಒಳರೋಗಿಗಳಿಗೆ ಊಟದ ವ್ಯವಸ್ಥೆ ಉಚಿತವಾಗಿರುತ್ತದೆ. ರಕ್ತ, ಮೂತ್ರ ಪರೀಕ್ಷೆಗಳು ಉಚಿತವಾಗಿರುವುದರಿಂದ ಕ್ಷೇತ್ರದ ಜನರು ಈ ಉಚಿತ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು. ಹೆಚ್ಚಿನ ಮಾಹಿತಿಗಾಗಿ 8095191556, 7975640588, 9980000133, ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಪಂ ಮಾಜಿ ಸದಸ್ಯ ಕೊಪ್ಪಳಿ ಮಹಾದೇವ ನಾಯಕ, ತಾಪಂ ಮಾಜಿ ಸದಸ್ಯ ಮುರುಡೇಶ್ವರ ಸ್ವಾಮಿ, ಅಕ್ರಮ ಸಕ್ರಮ ಸಮಿತಿ ಸದಸ್ಯ ಪಿಜಿ ಮಣಿ, ಮುಖಂಡರಾದ ಎಲ್ ನಾಗೇಂದ್ರ , ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷ ನಟರಾಜು ಇನ್ನಿತರರು ಹಾಜರಿದ್ದರು.