ಸಾರಾಂಶ
ಹಳಿಯಾಳ: ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ ಎಂದು ಬೆಳಗಾವಿ ಕೆಎಲ್‌ಇ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಶ್ರೀಶೈಲ ಮೆಟಗುಡ್ಡ ಹೇಳಿದರು.
ಪಟ್ಟಣದ ಶ್ರೀ ವಿ.ಆರ್.ಡಿ.ಎಂ. ಟ್ರಸ್ಟ್ ಸಂಸ್ಥಾಪನೆಯ ಇಪ್ಪತ್ತನೇ ವರ್ಷಾಚರಣೆ ಹಿನ್ನೆಲೆ ತಾಲೂಕು ಆರೋಗ್ಯ ಇಲಾಖೆ ಮತ್ತು ವಿವಿಧ ಖಾಸಗಿ ಆರೋಗ್ಯ ಸಂಸ್ಥೆಗಳ ಆಶ್ರಯದಲ್ಲಿ ಮಂಗಳವಾರ ತಾಲೂಕು ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿಯೊಬ್ಬರೂ ಆರೋಗ್ಯ ಬಗ್ಗೆ ನಿರ್ಲಕ್ಷ್ಯ ತೋರದೇ ತಜ್ಞ ವೈದ್ಯರು ಲಭ್ಯವಿದ್ದಾಗ ಶಿಬಿರದಲ್ಲಿ ಪಾಲ್ಗೊಂಡು ಉಚಿತ ಆರೋಗ್ಯ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದರು.ಟ್ರಸ್ಟ್‌ಗೆ 20 ವರ್ಷ: ವಿ.ಆರ್.ಡಿ.ಎಂ. ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು ಮಾತನಾಡಿ, ಸಾಮಾಜಿಕ ಜವಾಬ್ದಾರಿಯ ನಿರ್ವಹಣೆಯಲ್ಲಿ ನಮ್ಮ ಸಂಸ್ಥೆ ಸದಾ ತೊಡಗಿಸಿಕೊಂಡಿದೆ. ಇಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಜನಸಾಮಾನ್ಯರ ಆರೋಗ್ಯ ಅಭಿವೃದ್ಧಿಗೆ ಸಹಕಾರಿಯಾಗಬೇಕು. ವಿ.ಆರ್.ಡಿ.ಎಂ. ಟ್ರಸ್ಟ್ ಆರಂಭಗೊಂಡು ಇಪ್ಪತ್ತು ವರ್ಷಗಳಾಗುತ್ತಿದ್ದು, ಅದಕ್ಕಾಗಿ ಕಳೆದ ಮೂರು ತಿಂಗಳಲ್ಲಿ ಜನಸಾಮಾನ್ಯರನ್ನು ದೃಷ್ಟಿಯಲ್ಲಿಟ್ಟುಕೊಂಡು ನಾವು ಇಪ್ಪತ್ತು ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ ಎಂದರು.
ಹಳಿಯಾಳ ತಾಲೂಕು ಆಸ್ಪತ್ರೆ ಆಡಳಿತಾಧಿಕಾರಿ ಡಾ. ರಮೇಶ ಕದಂ, ಬೆಳಗಾವಿ ಕೆಎಲ್‌ಇ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಅಲ್ಲಮಪ್ರಭು, ದೇಶಪಾಂಡೆ ರುಡ್‌ಸೆಟಿ ನಿರ್ದೇಶಕ ಪ್ರಶಾಂತ ಬಡ್ಡಿ, ಯೋಜನಾ ಸಂಯೋಜಕ ವಿನಾಯಕ ಚವ್ಹಾಣ, ಪುರಸಭಾ ಮಾಜಿ ಅಧ್ಯಕ್ಷ ಉಮೇಶ ಬೊಳಶೆಟ್ಟಿ, ಆರೋಗ್ಯ ಸಲಹಾ ಸಮಿತಿ ಸದಸ್ಯೆ ದೀಪಾ ತಿಗಡಿಕರ್, ನಸರುಲ್ಲಾ ಜೈಲರ್, ಅಪ್ಪಾಸಾಹೇಬ ಹುಂಡೇಕರ, ಮಹೇಶ ಕಲಭಾವಿ ಇದ್ದರು.ಹಳಿಯಾಳದ ಶ್ರೀ ವಿ.ಆರ್.ಡಿ.ಎಂ. ಟ್ರಸ್ಟ್, ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ, ಕೆ.ಎಲ್.ಇ. ವಿಶ್ವವಿದ್ಯಾಲಯ, ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನೆ ಕೇಂದ್ರ, ಬೆಳಗಾವಿಯ ಜೆ.ಎನ್. ಮೆಡಿಕಲ್ ಕಾಲೇಜು ಮತ್ತು ತಾಲೂಕು ಆರೋಗ್ಯ ಇಲಾಖೆಯವರ ಸಹಯೋಗದಲ್ಲಿ ಶಿಬಿರ ಆಯೋಜಿಸಲಾಗಿತ್ತು. ಹಳಿಯಾಳ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ 561 ಫಲಾನುಭವಿಗಳು ಶಿಬಿರದ ಪ್ರಯೋಜನ ಪಡೆದು, ತಮ್ಮ ಆರೋಗ್ಯ ಕುರಿತು ತಜ್ಞ ವೈದ್ಯರಿಂದ ಸಲಹೆಗಳನ್ನು ಪಡೆದರು.
ಶಿಬಿರದ ಯಶಸ್ವಿ ಆಯೋಜನೆಗೆ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ದಾಂಡೇಲಿಯ ವಿಮಲ್ ದೇಶಪಾಂಡೆ ನರ್ಸಿಂಗ್ ಸೈನ್ಸ್ ವಿದ್ಯಾರ್ಥಿಗಳು ಸಹಕರಿಸಿದರು. ಸಂಸ್ಥೆಯ ಮೇಲ್ವಿಚಾರಕರಾದ ವಿಷ್ಣು ಮಡಿವಾಳ, ಉಳವಯ್ಯ ಬೆಂಡಿಗೇರಿ, ಸಂತೋಷ ಸಿದ್ನೇಕೊಪ್ಪ, ನಾರಾಯಣ ವಾಡಕರ್, ಮನೋಹರ ಚವರಿ, ಅಂದಾನಪ್ಪ ಅಂಗಡಿ ಮತ್ತು ವಿನೋದ್ ಅಗಸರ್ ಸಹಕರಿಸಿದರು.