ಸಾರಾಂಶ
ಪ್ರಸ್ತುತ ಆಸ್ಪತ್ರೆಯ ಖರ್ಚು ವೆಚ್ಚಗಳು ದುಬಾರಿಯಾಗಿರುವ ಇಂತಹ ಸನ್ನಿವೇಶದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರಗಳು ಕಡುಬಡವರು ಹಾಗೂ ಗ್ರಾಮಾಂತರ ಪ್ರದೇಶದ ಸಾಮಾನ್ಯ ಜನರಿಗೆ ಹೆಚ್ಚು ಸಹಕಾರಿಯಾಗಲಿವೆ ಎಂದು ಬಿಜೆಪಿ ಮುಖಂಡ ಲೋಕೇಶ್ವರ ಹೇಳಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಪ್ರಸ್ತುತ ಆಸ್ಪತ್ರೆಯ ಖರ್ಚು ವೆಚ್ಚಗಳು ದುಬಾರಿಯಾಗಿರುವ ಇಂತಹ ಸನ್ನಿವೇಶದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರಗಳು ಕಡುಬಡವರು ಹಾಗೂ ಗ್ರಾಮಾಂತರ ಪ್ರದೇಶದ ಸಾಮಾನ್ಯ ಜನರಿಗೆ ಹೆಚ್ಚು ಸಹಕಾರಿಯಾಗಲಿವೆ ಎಂದು ಬಿಜೆಪಿ ಮುಖಂಡ ಲೋಕೇಶ್ವರ ಹೇಳಿದರು.ತಾಲೂಕಿನ ಕೋಟನಾಯಕನಹಳ್ಳಿಯ ರುದ್ರಮುನಿ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಸುಖ ಹಾಗೂ ನೆಮ್ಮದಿಯಿಂದ ಜೀವನ ನಡೆಸಲು ಆರೋಗ್ಯ ಮುಖ್ಯವಾಗಿದ್ದು, ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ ಜೀವನ ಸಾಗಿಸಲು ಕಷ್ಟವಾಗುತ್ತದೆ. ಆದ್ದರಿಂದ ಜನರು ಮೊದಲು ಆರೋಗ್ಯದ ಕಡೆ ಗಮನ ನೀಡಬೇಕು ಎಂದು ಸಲಹೆ ನೀಡಿದರು.
ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ಮಾತನಾಡಿ, ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನದಿಂದ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದ್ದು, ಅದರಲ್ಲೂ ಗ್ರಾಮೀಣರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಿದೆ. ಇಂದು ನೂರಾರು ಕಾಯಿಲೆಗಳು ಆವರಿಸಿಕೊಳ್ಳುತ್ತಿದ್ದು, ನೀವು ತಾತ್ಸಾರ ಮಾಡದೆ ನಿಗದಿತ ಸಮಯಕ್ಕೆ ತಪಾಸಣೆ ಮಾಡಿಸಿಕೊಳ್ಳಬೇಕು ಎಂದ ಅವರು, ಸಾರ್ವಜನಿಕರು ಇಂತಹ ಉಚಿತ ಆರೋಗ್ಯ ಪರೀಕ್ಷೆಯಂತಹ ಶಿಬಿರಗಳನ್ನು ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದರು.ಷಡಕ್ಷರ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಹುಚ್ಚಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಬಿ.ಬಸವರಾಜು, ಧರಣೇಶ್, ಎಸ್‌ಆರ್‌ಎಸ್ ಇಂಟರ್‌ನ್ಯಾಷನಲ್ ಶಾಲೆಯ ಆಡಳಿತಾಧಿಕಾರಿ ರಶ್ಮಿ ನಿರಂಜನ್, ಶಿಕ್ಷಕಿ ಶ್ವೇತಾ ವಸಂತ್ ಸೇರಿದಂತೆ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿವರ್ಗದವರಿದ್ದರು.ಶಿಬಿರದಲ್ಲಿ ಬಿಪಿ, ಶುಗರ್, ಇ.ಸಿ.ಜಿ, ಎಕೋ ಸ್ಕ್ಯಾನಿಂಗ್ ಅಲ್ಲದೇ ಹೃದಯ, ಕಣ್ಣು ಮತ್ತು ಕಿಡ್ನಿ ಪರೀಕ್ಷೆ ನಡೆಸಲಾಯಿತು.