ಅಧಿಕಾರ ಹಸ್ತಾಂತರ ಕುರಿತ ರಾಜಕೀಯ ಬೆಳವಣಿಗೆಗಳು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಪೂರಕವಾಗಿದ್ದರೂ, ಸಂಭ್ರಮಾಚರಣೆ ಮೂಡ್‌ಗೆ ಹೋಗದೆ ಸಂಯಮ ಮತ್ತು ಎಚ್ಚರಿಕೆಯ ಹೆಜ್ಜೆಯನ್ನಿಡುತ್ತಿರುವುದು ಕುತೂಹಲ ಮೂಡಿಸಿದೆ.

 ಬೆಂಗಳೂರು : ಅಧಿಕಾರ ಹಸ್ತಾಂತರ ಕುರಿತ ರಾಜಕೀಯ ಬೆಳವಣಿಗೆಗಳು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಪೂರಕವಾಗಿದ್ದರೂ, ಸಂಭ್ರಮಾಚರಣೆ ಮೂಡ್‌ಗೆ ಹೋಗದೆ ಸಂಯಮ ಮತ್ತು ಎಚ್ಚರಿಕೆಯ ಹೆಜ್ಜೆಯನ್ನಿಡುತ್ತಿರುವುದು ಕುತೂಹಲ ಮೂಡಿಸಿದೆ.

ಹೈಕಮಾಂಡ್‌ ಜತೆಗಿನ ಸಭೆಯಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆಯಾಗಿದೆ. ಆದರೆ ಡಿ.ಕೆ. ಶಿವಕುಮಾರ್‌ ಅವರು ಮುಂದಿನ ಮುಖ್ಯಮಂತ್ರಿ ಎಂಬುದು ಅಧಿಕೃತವಾಗಿಲ್ಲ. ಹೀಗಾಗಿ ಮುಂದಿನ ಮುಖ್ಯಮಂತ್ರಿ ಕುರಿತು ಸಿದ್ದರಾಮಯ್ಯ ಅವರ ನಡೆ ಏನಾಗಿಲಿದೆ ಎಂಬ ಕುರಿತು ಶಿವಕುಮಾರ್‌ ತಂಡದ ಗಮನ ನೆಟ್ಟಿದೆ.

ವಿವಾದಾತ್ಮಕ ಹೇಳಿಕೆ ನೀಡುತ್ತಿಲ್ಲ

ಹೀಗಾಗಿ ಶಿವಕುಮಾರ್ ಬಣದ ಯಾರೊಬ್ಬರೂ, ‘ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿ ಆಗುತ್ತಿದ್ದಾರೆ’ ಎಂಬ ಅರ್ಥದಲ್ಲಿ ವಿವಾದಾತ್ಮಕ ಹೇಳಿಕೆ ನೀಡುತ್ತಿಲ್ಲ. ಬದಲಿಗೆ ಶಿವಕುಮಾರ್ ಅವರಿಗೆ ಅವಕಾಶ ದೊರೆಯಬೇಕು ಎಂದಷ್ಟೇ ಹೇಳುತ್ತಿದ್ದಾರೆ. ತನ್ಮೂಲಕ ಎಚ್ಚರಿಕೆಯ ನಡೆಯಿಟ್ಟಿದೆ.

ಮುಂದಿನ ಮುಖ್ಯಮಂತ್ರಿ’ ಯಾವ ಪೋಸ್ಟ್ ಗಳು ಇಲ್ಲ

ಸಾಮಾಜಿಕ ಜಾಲತಾಣಗಳಲ್ಲಿ ಶಿವಕುಮಾರ್‌ ಪರ ಪೋಸ್ಟ್ ಗಳ ಸುರಿಮಳೆಯೇ ನಡೆದಿದ್ದರೂ ಅವುಗಳೆಲ್ಲಿ ಶಿವಕುಮಾರ್‌ ಸಿಎಂ ಹುದ್ದೆಗೆ ಅರ್ಹರು ಎಂದು ಹೇಳಲಾಗುತ್ತಿದೆಯೇ ಹೊರತು ಅವರು ‘ಮುಂದಿನ ಮುಖ್ಯಮಂತ್ರಿ’ ಯಾವ ಪೋಸ್ಟ್ ಗಳು ಇಲ್ಲ. ಇನ್ನು ಸದಾಶಿವನಗರದ ಡಿಕೆಶಿ ನಿವಾಸದ ಬಳಿಯೂ ಪಟಾಕಿ ಹೊಡೆದು ಸಂಭ್ರಮಿಸಲು ಯತ್ನಿಸಿದ ಬೆಂಬಲಿಗರನ್ನು ಖುದ್ದು ಡಿ.ಕೆ. ಸುರೇಶ್‌ ಅವರು ತಡೆದರು ಎನ್ನಲಾಗಿದೆ.

ಬುಧವಾರ ಸಂಜೆಯೂ ದೆಹಲಿಯಲ್ಲಿ ಮಾಧ್ಯಮಗಳಿಗೆ ತೋರಿದ ತಮ್ಮ ಕೈ ಸನ್ನೆಯನ್ನು ‘ಥಮ್ಸ್ ಅಪ್‌’ ಎಂದು ಭಾವಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಖುದ್ದು ಡಿ.ಕೆ. ಶಿವಕುಮಾರ್‌ ಸ್ಪಷ್ಟನೆಯನ್ನೂ ನೀಡಿದ್ದರು. ಹೀಗಾಗಿ ಯಾವುದೇ ಹಂತದಲ್ಲೂ ಶಿವಕುಮಾರ್‌ ಅವರು ಮುಖ್ಯಮಂತ್ರಿ ಎಂಬುದು ಅಂತಿಮವಾಗಿದೆ ಎಂಬ ಸಂದೇಶ ಹೋಗದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.