ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಷಯದಲ್ಲಿ ಕಳೆದೊಂದು ತಿಂಗಳಿನಿಂದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಡೆಸುತ್ತಿದ್ದ ಹೋರಾಟ ಇದೀಗ ದಿಢೀರ್ ಕಾಂಗ್ರೆಸ್ ತೆಕ್ಕೆಗೆ ಸಿಕ್ಕಿದೆ. ಸಿಜೆಪಿ ಹೋರಾಟಕ್ಕೆ ಹಲವು ದಿನಗಳಿಂದ ವಿವಿಧ ರಾಜಕೀಯ ಪಕ್ಷಗಳು ಬೆಂಬಲ ವ್ಯಕ್ತಪಡಿಸುತ್ತಾ ಬಂದಿದ್ದವಾದರೂ ಮಂಗಳವಾರದಿಂದೀಚೆಗೆ ಕಾಂಗ್ರೆಸ್ ಪ್ರತಿಕ್ರಿಯಿಸಿದ ರೀತಿ ರಾಜಕೀಯವಾಗಿ ಚರ್ಚೆಗೆ ಗ್ರಾಸವಾಗಿದೆ.
ನೀಟ್ ಅಕ್ರಮದ ವಿರುದ್ಧ ಈ ಹಿಂದೆ ರಾಹುಲ್ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಧ್ವನಿ ಎತ್ತಿದ್ದರು. ಅಲ್ಲಲ್ಲಿ ಪ್ರತಿಭಟನೆ ಕೂಡಾ ನಡೆದಿತ್ತು. ಆದರೆ ಸಿಜೆಪಿ ಹೋರಾಟ ತೀವ್ರಗೊಂಡ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಮಂಗಳವಾರ ಮಧ್ಯಾಹ್ನ ದಿಢೀರ್ ಹೋರಾಟದ ಕದನಕ್ಕೆ ದೊಡ್ಡ ಮಟ್ಟದಲ್ಲಿ ಧುಮುಕಿದ್ದಾರೆ. ಬುಧವಾರ ಸಂಸತ್ತಿನ ಒಳಗೆ-ಹೊರಗೆ ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ಸಂಸತ್ ಕಲಾಪ ಭಂಗವಾಗಿದೆ.
ಇದಲ್ಲದೆ, ರಾಹುಲ್ ಗಾಂಧಿ ಬುಧವಾರ ಸುದ್ದಿಗೋಷ್ಠಿ ನಡೆಸಿ, ‘ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ವಜಾಗೊಳಿಸುವುದು, ಇತ್ತೀಚಿನ ಪ್ರತಿಭಟನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವುದು ಮತ್ತು ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳಿಗೆ ಕ್ಷಮೆಯಾಚಿಸುವುದು’ ಎಂಬ 3 ಷರತ್ತು ಇಟ್ಟಿದ್ದಾರೆ.
ಮೊನ್ನೆಯಿಂದಲೇ ಕೈ ಚುರುಕು:
ಮಂಗಳವಾರ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುವ ನೆಪದಲ್ಲಿ ದೆಹಲಿಯ ಅವರ ನಿವಾಸಕ್ಕೆ ತೆರಳಿದ್ದ ರಾಹುಲ್, ಪ್ರಿಯಾಂಕಾ ಸೇರಿದಂತೆ ಹಲವು ನಾಯಕರು ಅಲ್ಲಿಂದ ದಿಢೀರನೆ ಪ್ರಧಾನಿ ಮೋದಿ ಅವರ ನಿವಾಸದ ಮುಂದೆ ಧರಣಿ ಆರಂಭಿಸುವ ಮೂಲಕ ದೇಶದ ಗಮನ ಸೆಳೆದರು.
ಸಿಜೆಪಿ ಕಾರ್ಯಕರ್ತರ ಸಂಸತ್ ಚಲೋ ವೇಳೆ ಪ್ರತಿಭಟನಾಕಾರರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಈ ವಿಷಯದಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಪ್ರಧಾನಿ ಮನೆ ಮುಂದೆ ಧರಣಿ ಆರಂಭಿಸಿದ್ದರು. ಕಾಂಗ್ರೆಸ್ಸಿಗರ ಈ ಧರಣಿ ವಿದ್ಯಾರ್ಥಿಗಳ ಹೋರಾಟವನ್ನು ಮೀರಿ ಎಲ್ಲರ ಗಮನ ಸೆಳೆಯಿತು. ಅಷ್ಟರ ಮಟ್ಟಿಗೆ ಪ್ರಕರಣವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಕಾಂಗ್ರೆಸ್ ನಾಯಕರು ಯಶಸ್ವಿಯಾಗಿದ್ದರು.
ಕಾಂಗ್ರೆಸ್ ನಾಯಕರ ದೊಡ್ಡಮಟ್ಟದಲ್ಲಿ ಹೋರಾಟ
ಇನ್ನು ಇದರ ಮುಂದುವರೆದ ಭಾಗವಾಗಿ ಬುಧವಾರ ಕೂಡಾ ಕಾಂಗ್ರೆಸ್ ನಾಯಕರು ಸಂಸತ್ತಿನ ಉಭಯ ಸದನದ ಒಳಗೂ, ಹೊರಗೂ ನೀಟ್ ಅಕ್ರಮ ಪ್ರಶ್ನಿಸಿ ದೊಡ್ಡಮಟ್ಟದಲ್ಲಿ ಹೋರಾಟ ಸಂಘಟಿಸಿದರು. ಜೊತೆಗೆ ಮೋದಿ ಮನೆಯ ಬಳಿಯಿಂದ ರಾಹುಲ್ ಗಾಂಧಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದನ್ನು ಖಂಡಿಸಿ ಬುಧವಾರ ದೇಶವ್ಯಾಪಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸುವ ಮೂಲಕ ನೀಟ್ ಅಕ್ರಮ ವಿರುದ್ಧದ ಹೋರಾಟದಲ್ಲಿ ಪಕ್ಷದ ಪಾತ್ರ ದೊಡ್ಡದಾಗಿ ಕಾಣುವಂತೆ ಮಾಡುವಲ್ಲಿ ಯಶಸ್ವಿಯಾದರು.
