ಸಾರಾಂಶ
ಬಾಳಗಡಿ ಒಕ್ಕಲಿಗರ ಸಮುದಾಯ ಭವನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಕನ್ನಡಪ್ರಭ ವಾರ್ತೆ, ಕೊಪ್ಪಮನುಷ್ಯನಿಗೆ ಆರ್ಥಿಕ ಸಂಪತ್ತಿಗಿಂತಲೂ ಆರೋಗ್ಯ ಸಂಪತ್ತು ಅತೀ ಮುಖ್ಯ. ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ನಿರ್ಲಕ್ಷ್ಯ ವಹಿಸದೆ ತಪಾಸಣೆ ಮಾಡಿಸಿಕೊಂಡರೆ ಶಾರೀರಿಕ ಮತ್ತು ಮಾನಸಿಕವಾಗಿಯೂ ಸದೃಢರಾಗಬಹುದು ಎಂದು ಕೊಪ್ಪ ತಾಲೂಕು ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಶ್ರೀನಿಧಿ ದಿನೇಶ್ ಹೇಳಿದರು.ನವಚೈತ್ರ ಸಾಂಸ್ಕೃತಿಕ ವೇದಿಕೆ ಕೊಪ್ಪ ಮತ್ತು ಕೊಪ್ಪ ತಾಲೂಕು ಮಹಿಳಾ ಒಕ್ಕಲಿಗರ ಸಂಘಯಿಂದ ಪಟ್ಟಣದ ಹೊರ ವಲಯದ ಬಾಳಗಡಿ ಒಕ್ಕಲಿಗರ ಸಮುದಾಯ ಭವನದಲ್ಲಿ ಬುಧವಾರ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಕ್ಯಾನ್ಸರ್ ತಜ್ಞರಿಂದ ಮಹಿಳೆಯರ ಸ್ತನ ಕ್ಯಾನ್ಸರ್‌ಗೆ ಸಂಬಂಧಿಸಿದಂತೆ ಉಚಿತ ಮ್ಯಾಮೋಗ್ರಫಿ ತಪಾಸಣೆ, ಕೊಪ್ಪ ಹರ್ಷಲಕ್ಷ್ಮಿ ಆಸ್ಪತ್ರೆಯ ಮೂಳೆ ತಜ್ಞ ಡಾ. ಚಿರಾಗ್ ಇವರಿಂದ ಮೂಳೆ ಮತ್ತು ಕೀಲುಗಳ ತಪಾಸಣೆ, ಸ್ತ್ರೀರೋಗ ತಜ್ಞೆ ಡಾ. ವರ್ಷರಾಮ್ ಇವರಿಂದ ಸ್ತ್ರೀರೋಗ ತಪಾಸಣೆ ಮತ್ತು ಸ್ತ್ರೀರೋಗಗಳ ಬಗ್ಗೆ ಮಾಹಿತಿ, ಸಮಾಲೋಚನೆ, ಅಗತ್ಯವಿದ್ದವರಿಗೆ ಉಚಿತ ಔಷಧಿಗಳ ವಿತರಣೆ ಯನ್ನು ಮಹಿಳಾ ಒಕ್ಕಲಿಗರ ಸಂಘದಿಂದ ಏರ್ಪಡಿಸಲಾಗಿದೆ. ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ನವಚೈತ್ರ ಸಾಂಸ್ಕೃತಿಕ ವೇದಿಕೆ ದುರ್ಗಾಚರಣ್, ಉಪಾಧ್ಯಕ್ಷ ಸಂತೋಷ್ ಕುಲಾಸೋ ಮುಂತಾದವರು ಮಾತನಾಡಿ ಶಿಬಿರದ ಬಗ್ಗೆ ಮಾಹಿತಿ ನೀಡಿದರು. ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಕ್ಯಾನ್ಸರ್ ತಜ್ಞರಾದ ಡಾ. ಅಥಿಯಾ, ಡಾ. ಯಶಸ್ವಿನಿ ಮತ್ತು ತಂಡ ಮ್ಯಾಮೋಗ್ರಫಿ ತಪಾಸಣೆ ನಡೆಸಿದರು. ಮ್ಯಾಮೋಗ್ರಫಿ ತಪಾಸಣೆಗೆ ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ವಿಶೇಷ ಬಸ್ ಆಗಮಿಸಿತ್ತು.
ಶಿಬಿರದಲ್ಲಿ ಕೊಪ್ಪ ಹರ್ಷಲಕ್ಷ್ಮಿ ಆಸ್ಪತ್ರೆಯ ಸಿಬ್ಬಂದಿಯಿಂದ ಮಧುಮೇಹ ಮತ್ತು ರಕ್ತದೊತ್ತಡ ಪರೀಕ್ಷೆ ನಡೆಯಿತು.ಮಹಿಳಾ ಒಕ್ಕಲಿಗ ಸಂಘದ ಖಜಾಂಚಿ ವೀಣಾ ಉಮೇಶ್, ಕಾರ್ಯದರ್ಶಿ ಶೃತಿ ಮಿತ್ರ, ನವಚೈತ್ರ ಸಾಂಸ್ಕೃತಿಕ ವೇದಿಕೆ ಹಮೀದ್ ಎಚ್.ಎಂ., ಚೇತನ್ ಕುದುರೆಗುಂಡಿ ಮುಂತಾದವರಿದ್ದರು.