ಪತ್ರಕರ್ತರ ಕುಟುಂಬಗಳಿಗೆ ಉಚಿತ ಆರೋಗ್ಯ ತಪಾಸಣೆ

| Published : Feb 12 2025, 12:34 AM IST

ಸಾರಾಂಶ

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ನಾರಾಯಣ ಹಾರ್ಟ್ ಸೆಂಟರ್, ಜಾಲಪ್ಪ ಮೆಡಿಕಲ್ ಕಾಲೇಜ್ ವತಿಯಿಂದ ಕಾರ್ಯನಿರತ ಪತ್ರಕರ್ತ ಸಂಘದ ಸದಸ್ಯರಿಗೆ ಹಾಗೂ ಅವರ ಕುಟುಂಬಗಳಿಗೆ ಫೆ.20 ರಂದು ಪಟ್ಟಣದಲ್ಲಿ ಹೃದಯ ಆರೋಗ್ಯ ಉಚಿತ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ

ಕನ್ನಡಪ್ರಭ ವಾರ್ತೆ ಮಾಲೂರು

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ನಾರಾಯಣ ಹಾರ್ಟ್ ಸೆಂಟರ್, ಜಾಲಪ್ಪ ಮೆಡಿಕಲ್ ಕಾಲೇಜ್ ವತಿಯಿಂದ ಕಾರ್ಯನಿರತ ಪತ್ರಕರ್ತ ಸಂಘದ ಸದಸ್ಯರಿಗೆ ಹಾಗೂ ಅವರ ಕುಟುಂಬಗಳಿಗೆ ಫೆ.20 ರಂದು ಪಟ್ಟಣದಲ್ಲಿ ಹೃದಯ ಆರೋಗ್ಯ ಉಚಿತ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಡಿ.ಎಂ. ವಿಜಯಕುಮಾರ್ ತಿಳಿಸಿದ್ದಾರೆ.

ಪತ್ರಕರ್ತರ ಸಂಘದ ಸದಸ್ಯರು ತಾಲೂಕಿನಲ್ಲಿ ರಾಜ್ಯ ಹಾಗೂ ಜಿಲ್ಲಾ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರ ದಿನನಿತ್ಯ ಕೆಲಸ ಕಾರ್ಯಗಳ ಒತ್ತಡದ ನಡುವೆ ಕೆಲವರು ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಾರೆ. ಸಂಘದ ಎಲ್ಲಾ ಸದಸ್ಯರ ಆರೋಗ್ಯದ ಹಿತದೃಷ್ಟಿಯಿಂದ, ಇದೇ ಮೊದಲ ಬಾರಿಗೆ ಪಟ್ಟಣದ ಜೆಎಸ್‌ಎಸ್ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಫೆ.20ರಂದು ನಾರಾಯಣ ಹಾರ್ಟ್ ಸೆಂಟರ್ ಹಾಗೂ ಆರ್. ಎಲ್. ಜಾಲಪ್ಪ ಮೆಡಿಕಲ್ ಕಾಲೇಜಿನ ಸಹಯೋಗದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಹಾಗೂ ಜೆಎಸ್‌ಎಸ್ ವಿದ್ಯಾ ಸಂಸ್ಥೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೂ ಸಹ ಉಚಿತ ಹೃದಯ ರೋಗ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ ಎಂದರು.ಹೃದಯ ರೋಗ ತಜ್ಞ ಡಾ.ಕಿರಣ್ ಸೇರಿ ನುರಿತ ತಂತ್ರಜ್ಞರು ಭಾಗವಹಿಸಲಿದ್ದು, ಇಸಿಜಿ, ಎಕೋ, ಸೌಲಭ್ಯವಿದ್ದು, ಮಧುಮೇಹ ಮತ್ತು ರಕ್ತದೊತ್ತಡವನ್ನು ಸಹ ತಪಾಸಣೆ ಮಾಡಲಾಗುವುದು. ಸಂಘದ ಎಲ್ಲಾ ಸದಸ್ಯರು ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ, ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಹೇಳಿದರು.

ಉಚಿತ ಹೃದಯ ರೋಗ ಆರೋಗ್ಯ ತಪಾಸಣಾ ಶಿಬಿರವನ್ನು, ಶಾಸಕ ಕೆ. ವೈ. ನಂಜೇಗೌಡ ಹಾಗೂ ತಹಸೀಲ್ದಾರ್ ಎಂವಿ ರೂಪ ಉದ್ಘಾಟಿಸಲಿದ್ದು, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಜಿ ಶ್ರೀನಿವಾಸ್, ಜೆಎಸ್‌ಎಸ್ ವಿದ್ಯಾ ಸಂಸ್ಥೆಯ ಸಂಯೋಜಕ ಮಹೇಶ್ವರಪ್ಪ, ತಾಲೂಕು ಆರೋಗ್ಯ ಅಧಿಕಾರಿ ರಮೇಶ್ ಬಾಬು, ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಲಿದ್ದಾರೆ ಎಂದರು.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಟಿ.ಕೆ.ನಾಗರಾಜ್, ಪ್ರಧಾನ ಕಾರ್ಯದರ್ಶಿ ಎಸ್. ನಾರಾಯಣಸ್ವಾಮಿ, ಖಜಾಂಚಿ ಮಾರುತೇಶ್ ಹಾಜರಿದ್ದರು.