ಜೆಎಸ್‌ಎಸ್‌ನಲ್ಲಿ ಉಚಿತ ಬಂಜೆತನ ತಪಾಸಣೆ ಶಿಬಿರ

| Published : Jun 18 2024, 12:47 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ನಗರದ ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ (ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ) ಜೂ.23ರಂದು ಬೆಳಗ್ಗೆ 9 ರಿಂದ ಸಂಜೆ 4ರ ವರೆಗೆ ಉಚಿತ ಬಂಜೆತನ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ವೈದ್ಯೆ ಡಾ.ವರ್ಷಾ ವಿವೇಕ ಪಾಟೀಲ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರದ ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ (ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ) ಜೂ.23ರಂದು ಬೆಳಗ್ಗೆ 9 ರಿಂದ ಸಂಜೆ 4ರ ವರೆಗೆ ಉಚಿತ ಬಂಜೆತನ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ವೈದ್ಯೆ ಡಾ.ವರ್ಷಾ ವಿವೇಕ ಪಾಟೀಲ್ ತಿಳಿಸಿದರು.

ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ನಗರದಲ್ಲಿನ ಜ್ಞಾನಯೋಗಾಶ್ರಮದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ಹೇರಿ ಮಠದ ಸಿದ್ಧಗಿರಿ ಜನನಿ ಐವಿಎಫ್ ಕೇಂದ್ರದಿಂದ ಉಚಿತ ಬಂಜೆತನ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಜೂ.23ರಂದು ನಗರದ ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ಹಾಗೂ ಜೂ.30ರಂದು ಜಮಖಂಡಿಯಲ್ಲಿ ಉಚಿತ ಬಂಜೆತನ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಾಮಾಜಿಕ ಸೇವೆಗೆ ಸ್ವಾಮೀಜಿ ಅವರು ಜಾಗ ನೀಡಿದ್ದಾರೆ. ಹಲವು ವೈದ್ಯರು ಉಚಿತ ಸೇವೆ ಸಲ್ಲಿಸುತ್ತಿರುವುದು, ಜೊಲ್ಲೆ ಫೌಂಡೇಷನ್ ವತಿಯಿಂದ ಐವಿಎಫ್ ಮಷಿನರಿ ಕೊಡುಗೆ ಸೇರಿದಂತೆ ಪ್ರತಿಯೊಬ್ಬರೂ ಸಹಾಯ ಮಾಡುತ್ತಿರುವುದರಿಂದ ಅತ್ಯಂತ ಕಡಿಮೆ‌ ಖರ್ಚಿನಲ್ಲಿ ಬಂಜೆತನ ನಿವಾರಣೆಗೆ ಚಿಕಿತ್ಸೆ ಹಾಗೂ ಹೈಟೆಕ್ ಸೌಲಭ್ಯ ಸಿಗಲಿದೆ. ಕೇವಲ ₹ 75 ಸಾವಿರಗಳಲ್ಲಿ ಬಡವರಿಗಾಗಿ ಐವಿಎಫ್ ತಂತ್ರಜ್ಞಾನದ ಇಂಜೆಕ್ಷನ್, ಗರ್ಭಿಣಿಗೆ ಮಾಡುವ ಶಸ್ತ್ರಚಿಕಿತ್ಸೆ, ವಾರಗಳ ಕಾಲ ಆಸ್ಪತ್ರೆಯಲ್ಲಿ ವಸತಿ ವ್ಯವಸ್ಥೆ, ಅತ್ಯಾಧುನಿಕ ಮಷಿನರಿಗಳು ಹಾಗೂ ನುರಿತ ವೈದ್ಯರಿಂದ ಸೂಕ್ತ ಚಿಕಿತ್ಸೆ, ಫ್ರೀಜಿಂಗ್ ಸೇರಿದಂತೆ ಎಲ್ಲ ರೀತಿಯ ಚಿಕಿತ್ಸೆಗಳನ್ನು ಒದಗಿಸಲಾಗುವುದು. ಇದುವರೆಗೂ ನೀಡಿರುವ ಐವಿಎಫ್ ಸೇವೆಯಲ್ಲಿ ಶೇ.75ರಷ್ಟು ಯಶಸ್ವಿಯಾಗಿವೆ ಎಂದು ಡಾ.ವರ್ಷಾ ಮಾಹಿತಿ ನೀಡಿದರು.

ಶ್ರೀಗಳ ವರ:

ಬುರಣಾಪುರ ಆರೂಢಾಶ್ರಮದ ಯೋಗೇಶ್ವರಿ ಮಾತಾಜಿ, ಕನ್ಹೇರಿ ಮಠದ ವತಿಯಿಂದ ಒಳ್ಳೆಯ ಸೇವೆ ಆರಂಭವಾಗಿದೆ. ಮಕ್ಕಳಾಗದವರ ಕುಟುಂಬಗಳ ಚಿಂತೆಗೆ ಇಲ್ಲಿ ಚಿಕಿತ್ಸೆ ಮೂಲಕ ಪರಿಹಾರ ಸಿಗಲಿದೆ. ಕನ್ಹೇರಿ ಸ್ವಾಮೀಜಿಗಳ ಕನಸಿನ ಈ ಕಾರ್ಯ ಬಹಳ‌ ಮಹತ್ವದ್ದಾಗಿದೆ. ಒಂದು ಹೆಣ್ಣು ತಾಯಿ ಆದಾಗ ಅವಳ‌ ಜೀವನ ಪರಿಪೂರ್ಣ ಆಗುತ್ತದೆ, ಹಾಗಾಗಿ ಮಕ್ಕಳಾಗದವರಿಗೆ ಈ ಅವಕಾಶ ಕಾಡಸಿದ್ಧೇಶ್ವರ ಶ್ರೀಗಳು ಚಿಕಿತ್ಸೆ ಮೂಲಕ ಮಗು ಮಾಡಿಕೊಳ್ಳುವ ಸೌಲಭ್ಯ ಕೊಟ್ಟಿದ್ದಾರೆ. ಇದು ಶ್ರೀಗಳು ಬಡ ಕುಟುಂಬಗಳಿಗೆ ನೀಡಿರುವ ವರ ಎಂದರು.

ಚಿಂತಿಸುವ ದಂಪತಿಗೆ ಅನುಕೂಲ:

ಜೆಎಸ್‌ಎಸ್‌ ಆಸ್ಪತ್ರೆಯ ಡಾ.ಸಂತೋಷ ಮಾತನಾಡಿ, ಐವಿಎಫ್ ಮೂಲಕ ಮಕ್ಕಳಾಗದ ಹೆಣ್ಣುಮಕ್ಕಳಿಗೆ ಮಕ್ಕಳ ಸೇವೆ ಕೊಡಲಾಗುವುದು. ಮಕ್ಕಳಿಲ್ಲ ಎಂದು ಚಿಂತಿಸುವ ದಂಪತಿಗೆ ಅನುಕೂಲ‌ ಮಾಡಬೇಕು ಎಂದು ಸ್ವಾಮೀಜಿಗಳು ಯೋಚಿಸಿ ಬಡವರಿಗೆ ಅನುಕೂಲ ಕಲ್ಪಿಸಿದಾರೆ. ಆಸ್ಪತ್ರೆಯಲ್ಲಿ ಎಲ್ಲರೂ ಸೇವಾ ಮನೋಭಾವನೆಯಿಂದ ಕೆಲಸ ಮಾಡುತ್ತಾರೆ. ಹಾಗಾಗಿ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ಕೊಡಲಿದ್ದಾರೆ. ಕನ್ಹೇರಿ ಅಪ್ಪಗಳವರಿಂದ ಮಾತ್ರ ಇಂತಹ ಕೆಲಸ ಮಾಡಲು ಸಾಧ್ಯ ಎಂದು ಸ್ಮರಿಸಿದರು.

ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಶ್ರೀ ಬಸವಲಿಂಗ ಸ್ವಾಮೀಜಿ ಸೇರಿದಂತೆ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

-------------------------------

ಕೋಟ್‌

ಕನ್ಹೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಶ್ರೀಗಳ ಸಾನಿಧ್ಯದಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಸಿದ್ಧಗಿರಿ ಜನನಿ ಕೇಂದ್ರದ ಮೂಲಕ ಕೊಲ್ಹಾಪುರದ ಕನ್ಹೇರಿ ಮಠದಲ್ಲಿಯೇ ಐವಿಎಫ್ ಚಿಕಿತ್ಸೆ ಆರಂಭಿಸಲಾಗಿದೆ. ಮಕ್ಕಳಾಗದ ದಂಪತಿಗಳಿಗೆ ಅನುಕೂಲ ಕಲ್ಪಿಸಬೇಕು ಎಂಬ ಶ್ರೀಗಳ ಕನಸಿನಂತೆ ಈ ಸೇವೆ ಆರಂಭಿಸಲಾಗಿದೆ. ಬಡವರಿಗಾಗಿ ತೆರೆದಿರುವ ಈ ಅತ್ಯಾಧುನಿಕ ಸೌಲಭ್ಯಗಳುಳ್ಳ ಆಸ್ಪತ್ರೆಯಲ್ಲಿ ಕೇವಲ ₹ 5 ಸಾವಿರದಿಂದ ₹ 75 ಸಾವಿರದೊಳಗೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಇದೇ ಚಿಕಿತ್ಸೆಗೆ ಬೇರೆ ಬೇರೆ ಆಸ್ಪತ್ರೆಗಳಲ್ಲಿ ₹ 3 ರಿಂದ ₹ 5 ಲಕ್ಷ ಖರ್ಚಾಗಲಿದೆ. ಹಣವಿಲ್ಲದ ಕುಟುಂಬಗಳಿಗೆ ಮಕ್ಕಳ ಭಾಗ್ಯ ಪಡೆಯಲು ಆಗುತ್ತಿಲ್ಲ. ಅಂತಹವರ ಅನುಕೂಲಕ್ಕಾಗಿ ಈ ಸೇವೆ ಆರಂಭಿಸಲಾಗಿದೆ.

- ಡಾ.ವರ್ಷಾ ವಿವೇಕ ಪಾಟೀಲ್, ವೈದ್ಯೆ