ಸಾರಾಂಶ
ಗದಗ: ರಾಷ್ಟ್ರೀಯ ಮಟ್ಟದಿಂದ ತಾಲೂಕು ಮಟ್ಟದ ವರೆಗೆ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯನಿರ್ವಹಿಸುತ್ತಿದ್ದು, ಈ ಮೂಲಕ ಜನರಲ್ಲಿ ಕಾನೂನು ಅರಿವು ಮೂಡಿಸುವ ಜತೆಗೆ, ಬಡವರಿಗೆ, ನಿರ್ಗತಿಕರಿಗೆ ಉಚಿತವಾಗಿ ಕಾನೂನು ನೆರವು ನೀಡುತ್ತಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಹೇಳಿದರು.
ನಗರದ ಎಸ್.ಎ. ಮಾನ್ವಿ ಕಾನೂನು ಮಹಾವಿದ್ಯಾಲಯದಲ್ಲಿ ರಾಷ್ಚ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಕೆ.ಎಲ್.ಇ. ಸಂಸ್ಥೆಯ ಎಸ್.ಎ. ಮಾನ್ವಿ ಕಾನೂನು ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಜರುಗಿದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ನಮ್ಮ ಸಂವಿಧಾನದಲ್ಲಿ ಅಶಕ್ತರು, ದುರ್ಬಲರು ಸೇರಿದಂತೆ ಎಲ್ಲರಿಗೂ ಕಾನೂನು ಸೇವೆ ದೊರೆಯಬೇಕು ಎಂಬ ಆಶಯವನ್ನು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ನೆರವೇರಿಸುತ್ತಿದೆ.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ಮಾತನಾಡಿ, 1995ನೇ ನ. 9ರಂದು ದೇಶದಲ್ಲಿ ಲೀಗಲ್ ಸರ್ವೀಸ್ ಆ್ಯಕ್ಟ್ ಜಾರಿಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಪ್ರತಿವರ್ಷ ನವೆಂಬರ್ 9ರಂದು ದೇಶಾದ್ಯಂತ ಕಾನೂನು ಸೇವೆಗಳ ದಿನ ಆಚರಿಸಲಾಗುತ್ತಿದೆ. ಕಾನೂನು ಸೇವೆಗಳ ಪ್ರಾಧಿಕಾರದ ವ್ಯಾಪ್ತಿ ಬಹಳ ವಿಶಾಲವಾಗಿದ್ದು, ಜನರಿಗೆ ನಿರಂತರವಾಗಿ ಉಚಿತವಾಗಿ ಕಾನೂನು ಸಲಹೆ ನೀಡುತ್ತ ಬಂದಿದೆ. ಪ್ರಾಧಿಕಾರದಲ್ಲಿ ಪ್ಯಾನ್ ವಕೀಲರು ಹಾಗೂ ಕಾನೂನು ನೆರವು ಅಭಿರಕ್ಷಕರನ್ನು ನೇಮಿಸಿಕೊಂಡು ಬಡವರಿಗೆ, ಮಹಿಳೆಯರಿಗೆ ಉಚಿತವಾಗಿ ಕಾನೂನು ನೇರವು ನೀಡುತ್ತಿದೆ ಎಂದು ಪ್ರಾಧಿಕಾರದ ಬಗ್ಗೆ ತಿಳಿಸಿದರು.
ಯಾವುದೇ ವ್ಯಾಜ್ಯ ನ್ಯಾಯಾಲಯದ ಎದುರು ಬಂದಾಗ ವಾದ-ವಿವಾದಗಳನ್ನು ಆಲಿಸಿ ತೀರ್ಪು ನೀಡಲಾಗುತ್ತದೆ. ತೀರ್ಪು ಬರಲು ಹೆಚ್ಚಿನ ಸಮಯ ಬೇಕಾಗುತ್ತದೆ. ಪ್ರಕರಣದಲ್ಲಿ ಕೊನೆಗೆ ಒಬ್ಬರ ಗೆಲುವು, ಇನ್ನೊಬ್ಬರ ಸೋಲಾಗುತ್ತದೆ. ಎರಡೂ ಕಕ್ಷಿದಾರರ ಒಪ್ಪಿಗೆಯಿಂದ ಲೋಕ ಅದಾಲತ್ ನಲ್ಲಿ ರಾಜೀ ಸಂಧಾನಕ್ಕೆ ಮುಂದಾಗಿ ಪ್ರಕರಣ ಬಗೆಹರಿಸಿಕೊಂಡರೆ ಇಬ್ಬರೂ ಗೆಲ್ಲುತ್ತಾರೆ. ಜತೆಗೆ ವ್ಯಾಜ್ಯಗಳ ಸಂಖ್ಯೆ ಕಡಿಮೆಯಾಗುತ್ತದೆ, ಸಾಕಷ್ಟು ಸಮಯ ಉಳಿಯುತ್ತದೆ ಎಂದರು.ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಂ.ಐ. ಹಿರೇಮನಿಪಾಟೀಲ ಮಾತನಾಡಿ, ಬಡವರು, ನಿರ್ಗತಿಕರು, ಮಹಿಳೆಯರು ನ್ಯಾಯದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಕಾನೂನು ಸೇವೆಗಳ ಪ್ರಾಧಿಕಾರವನ್ನು ರಚಿಸಿದ್ದು, ಈ ಮೂಲಕ ಕಾನೂನು ಅರಿವು ಹಾಗೂ ನೆರವನ್ನು ನೀಡುತ್ತಿದ್ದು, ಇದರ ಸದುಪಯೋಗ ಪಡೆಯಬೇಕು ಎಂದರು.
ಮುಖ್ಯ ಕಾನೂನು ನೆರವು ಅಭಿರಕ್ಷಕ ಎಸ್.ವಿ. ಗ್ರಾಮಪುರೋಹಿತ ಮಾತನಾಡಿ, ನಮ್ಮ ಸಂವಿಧಾನದಲ್ಲಿ ಸರ್ವರಿಗೂ ನ್ಯಾಯ ದೊರಕಬೇಕು ಎಂಬ ಆಶಯ ಇದೆ. ಅದು ನಮ್ಮ ಮೂಲಭೂತ ಹಕ್ಕೂ ಹೌದು. ಈ ಹಿನ್ನೆಲೆಯಲ್ಲಿ ಕಾನೂನು ಸೇವೆಗಳ ಕಾಯ್ದೆ ಜಾರಿಗೆ ಬಂದಿದೆ. ಪ್ರಾಧಿಕಾರದಿಂದ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳಲ್ಲಿ ಬಡವರಿಗೆ ನೆರವನ್ನು ನೀಡುತ್ತಿದೆ. 2022ರಲ್ಲಿ ಎಲ್.ಎ.ಡಿ.ಸಿ. ಪ್ರಾರಂಭಿಸಿ ಅದರ ಮೂಲಕ ಸೇವೆ ನೀಡುತ್ತಿದೆ ಎಂದರು.ಪ್ರಾಚಾರ್ಯ ಜೈಹನುಮಾನ ಎಚ್.ಕೆ. ಮಾತನಾಡಿ, ಸಮಾಜದ ದುರ್ಬಲರು ನ್ಯಾಯದಿಂದ ವಂಚಿತರಾಗವಾರದು. ಇದರಲ್ಲಿ ಕಾನೂನು ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿದೆ. ವಿದ್ಯಾರ್ಥಿ ಹಂತದಿಂದಲೇ ದುರ್ಬಲರಿಗಾಗಿ ಸಹಾನುಭೂತಿ ಹೊಂದುವ ಮೂಲಕ ಅವರಿಗೆ ನ್ಯಾಯ ದೊರಕಿಸಲು ಮುಂದಾಗುವ ಮೂಲಕ ತಮ್ಮ ವ್ಯಕ್ತಿತ್ವ ವಿಕಸನಗೊಳಿಸಬೇಕು ಎಂದರು.
ಶರತಕುಮಾರ ಪ್ರಾರ್ಥಿಸಿದರು, ಜ್ಯೋತಿ ಸಿ.ವಿ. ಸ್ವಾಗತಿಸಿದರು. ವಿ.ವಿ. ಮುರದಂಡೆ ವಂದಿಸಿದರು. ಮಹಾವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಕಾನೂನು ವಿದ್ಯಾರ್ಥಿಗಳು ಹಾಜರಿದ್ದರು.