ಸಾರಾಂಶ
ಸ್ವಂತ ನ್ಯಾಯಾಲಯ ಕಟ್ಟಡ ಒದಗಿಸಬೇಕು ಸೇರಿದಂತೆ ಮೂಲಸೌಕರ್ಯ ಒದಗಿಸಬೇಕೆಂದು ಆಗ್ರಹಿಸಿ ತಾಲೂಕು ವಕೀಲರ ಸಂಘದ ನೇತೃತ್ವದಲ್ಲಿ ಸೋಮವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಾಯಿತು.
ಕನ್ನಡಪ್ರಭ ವಾರ್ತೆ ಕಾಗವಾಡ
ಸ್ವಂತ ನ್ಯಾಯಾಲಯ ಕಟ್ಟಡ ಒದಗಿಸಬೇಕು ಸೇರಿದಂತೆ ಮೂಲಸೌಕರ್ಯ ಒದಗಿಸಬೇಕೆಂದು ಆಗ್ರಹಿಸಿ ತಾಲೂಕು ವಕೀಲರ ಸಂಘದ ನೇತೃತ್ವದಲ್ಲಿ ಸೋಮವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಾಯಿತು.ಬೆಳಗ್ಗೆ ಪಟ್ಟಣದ ನ್ಯಾಯಾಲಯದಿಂದ ಚನ್ನಮ್ಮ ವೃತ್ತದವರೆಗೆ ಮೆರವಣಿಗೆ ಮೂಲಕ ತೆರಳಿ ಮಾನವ ಸರಪಳಿ ನಿರ್ಮಿಸಿ ಕೆಲಹೊತ್ತು ರಸ್ತೆ ತಡೆ ನಡೆಸಿದರು. ಸ್ಥಳಕ್ಕಾಗಮಿಸಿದ ಉಪತಹಸೀಲ್ದಾರಗೆ ಮನವಿ ಸಲ್ಲಿಸಿ, ಬಳಿಕ ನ್ಯಾಯಾಲಯ ಮುಂಭಾಗ ಮುಷ್ಕರ ಪ್ರಾರಂಭಿಸಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಪಿ.ಎ. ಮಾನೆ ಮಾತನಾಡಿ, ಪಟ್ಟಣದಲ್ಲಿ ನ್ಯಾಯಾಲಯ ಸ್ಥಾಪನೆಯಾಗಿ 4 ವರ್ಷವಾದರೂ ಸ್ವಂತ ಕಟ್ಟಡ ಇಲ್ಲ. ರಾಜ್ಯ ಸರ್ಕಾರದ ಹಲವು ಸಚಿವರು, ಸ್ಥಳೀಯ ಶಾಸಕರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಬೇಡಿಕೆ ಈಡೇರಿಸುವವರೆಗೆ ಮುಷ್ಕರ ಮುಂದುವರಿಯಲಿದೆ ಎಂದು ಹೇಳಿದರು.ಹಿರಿಯ ವಕೀಲ ಅಭಯಕುಮಾರ ಅಕಿವಾಟೆ ಮಾತನಾಡಿ, ಕಾಗವಾಡದಲ್ಲಿ ಎಪಿಎಂಸಿ ಸ್ಥಳದಲ್ಲಿಯೇ ತಾತ್ಕಾಲಿಕವಾಗಿ ಎಎಂಎಫ್‌ಸಿ ಸ್ಥಾಪನೆಗೊಂಡಿದ್ದರಿಂದ ಸುಮಾರು 60 ಕಿಮೀವರೆಗೆ ಸುತ್ತುಬಳಿಸಿ ಅಥಣಿಗೆ ಹೋಗುವುದು ಕಕ್ಷಿದಾರರಿಗೆ ಆಗುತ್ತಿದ್ದ ತೊಂದರೆ ತಪ್ಪಿಸಲಾಗಿದೆ. ಎಪಿಎಂಸಿ ಸಚಿವರು ಹಾಗೂ ಕಾಗವಾಡ ಶಾಸಕರು ಮುತುವರ್ಜಿ ವಹಿಸಿ ವಕೀಲರ ಬೇಡಿಕೆ ಈಡೇರಿಸಬೇಕೆಂದರು.
ಅಥಣಿ ವಕೀಲರ ಸಂಘದ ಅಧ್ಯಕ್ಷ ನಿಂಗಪ್ಪ ಖೋಕಲೆ, ಕೆ.ಎ. ವನಜೋಳ, ಎಸ್.ಎಸ್. ಪಾಟೀಲ, ಎಸ್.ಬಿ. ಐಹೊಳೆ, ಬಿ.ಬಿ. ಬಿಸಲಾಪೂರ ಸೇರಿದಂತೆ ಅಥಣಿ ವಕೀಲರು ಬೆಂಬಲ ಸೂಚಿಸಿದರು.ಕಾಗವಾಡ ವಕೀಲರ ಸಂಘದ ಉಪಾಧ್ಯಕ್ಷ ಬಿ.ಎ.ಮಗದುಮ್, ಅಭಯಕುಮಾರ ಅಕಿವಾಟೆ, ಅಮಿತ್ ದಿಕ್ಷಾಂತ, ರಾಹುಲ್ ಕಟಗೇರಿ, ಎಂ.ಜಿ. ವಡ್ಡರ, ಭಾಸ್ಕರ ಪಾಟೀಲ, ವಿದ್ಯಾಧರ ಮೌರ್ಯ, ಟಿ.ಕೆ. ಧೋತ್ರೆ, ಎಂ.ಎಸ್. ಉದಗಾಂವೆ ಸೇರಿದಂತೆ ತಾಲೂಕಿನ ವಕೀಲರ ಸಂಘದ ವಕೀಲರು ಇದ್ದರು.