ಸಾರಾಂಶ
ಈ ಬಾರಿ ಡಿ.೨೭, ೨೮ ಮತ್ತು ೨೯ರಂದು ಪುತ್ತೂರು ಮಹತೋಭಾರ ಶ್ರೀ ಮಹಾಲೀಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ೩ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಜರುಗಲಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರು ವರ್ಷ ಆಗುವ ಈ ಸಂದರ್ಭದಲ್ಲಿ ಶ್ರೀನಿವಾಸ ಕಲ್ಯಾಣೊತ್ಸವದ ಸ್ಥಳದಲ್ಲಿ ೧೦೦ ಜೋಡಿಗಳಿಗೆ ಸಾಮೂಹಿಕ ವಿವಾಹವನ್ನು ಮಾಡಬೇಕೆಂಬ ಯೋಜನೆ ರೂಪಿಸಲಾಗಿದೆ ಎಂದು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಪುತ್ತೂರು
ಈ ಬಾರಿ ಡಿ.೨೭, ೨೮ ಮತ್ತು ೨೯ರಂದು ಪುತ್ತೂರು ಮಹತೋಭಾರ ಶ್ರೀ ಮಹಾಲೀಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ೩ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಜರುಗಲಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರು ವರ್ಷ ಆಗುವ ಈ ಸಂದರ್ಭದಲ್ಲಿ ಶ್ರೀನಿವಾಸ ಕಲ್ಯಾಣೊತ್ಸವದ ಸ್ಥಳದಲ್ಲಿ ೧೦೦ ಜೋಡಿಗಳಿಗೆ ಸಾಮೂಹಿಕ ವಿವಾಹವನ್ನು ಮಾಡಬೇಕೆಂಬ ಯೋಜನೆ ರೂಪಿಸಲಾಗಿದೆ ಎಂದು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ.ಅವರು ಸೋಮವಾರ ಪುತ್ತಿಲ ಪರಿವಾರದ ಕಚೇರಿ ಬಳಿಯಲ್ಲಿನ ಸುಭದ್ರಾ ಕಲ್ಯಾಣ ಮಂಟಪದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಡಿ.೨೭ಕ್ಕೆ ಶ್ರೀ ದೇವಿ ಭೂದೇವಿ ಸಹಿತ ಶ್ರೀನಿವಾಸ ದೇವರ ಪುರಪ್ರವೇಶ ನಡೆಯಲಿದೆ. ೨೮ಕ್ಕೆ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ. ೨೯ಕ್ಕೆ ಶ್ರೀನಿವಾಸ ದೇವರ ಸಮ್ಮುಖದಲ್ಲೇ ೧೦೦ ಜೋಡಿಗಳಿಗೆ ಉಚಿತವಾಗಿ ಸಾಮೂಹಿಕ ವಿವಾಹ ಕಾರ್ಯ ನಡೆಯಲಿದೆ ಎಂದರು.ವಿವಾಹ ಸಮಾರಂಭ ಮಾಡುವ ಸಂದರ್ಭ ಯಾವುದೇ ರೀತಿಯ ಗೊಂದಲಗಳು ಉಂಟಾಗದಿರಲಿ ಎಂಬ ನಿಟ್ಟಿನಲ್ಲಿ ದೃಢೀಕರಣ ಪತ್ರದ ಜೊತೆಗೆ ವಿವಾಹ ನಡೆಸಲು ನೋಂದಣಿ ಕಚೇರಿಯನ್ನು ತೆರೆದಿದ್ದೇವೆ. ಯಾರು ವಿವಾಹ ಆಗುತ್ತಾರೋ ಅವರು ಸ್ಥಳೀಯ ಪಂಚಾಯಿತಿನಿಂದ ವಿವಾಹ ಆಗಿಲ್ಲ ಎಂಬುದಕ್ಕೆ ದೃಢೀಕರಣ ಪತ್ರ ಮತ್ತು ಅವರು ವಾಸ್ತವ್ಯ ಇರುವುದಕ್ಕೆ ಆಧಾರ್ ಕಾರ್ಡ್ ಪ್ರತಿಗಳನ್ನು ನೀಡಬೇಕು. ವೈವಾಹಿಕ ಬಂಧ ನಡೆಯುವ ಎರಡು ಮನೆಯವರು ತಮ್ಮ ಒಪ್ಪಿಗೆ ಪತ್ರವನ್ನು ಕಚೇರಿಗೆ ನೀಡಬೇಕು ಎಂದ ಅವರು ವಧು ವರರ ಎರಡು ಕಡೆಯವರಿಗೆ ಮದುವೆಗೆ ಬೇಕಾದ ಎಲ್ಲ ಸಾಹಿತ್ಯದ ಜೊತೆಗೆ ಚಿನ್ನದ ಮಾಂಗಲ್ಯ, ಬೆಳ್ಳಿಯ ಕಾಲುಂಗುರ, ವಸ್ತ್ರಗಳನ್ನು ಟ್ರಸ್ಟ್ ಮೂಲಕ ನೀಡಲಾಗುವುದು. ವಧು ವರರ ಕಡೆಗಳಿಂದ ಎಷ್ಟು ಜನರು ಬಂದರೂ ಕೂಡ ಔತಣ ಕೂಟವನ್ನು ಮಾಡಲು ಎಲ್ಲ ವ್ಯವಸ್ಥೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ವಿವಾಹ ವೇದಿಕೆಯ ಕುರಿತು ಸಮಿತಿಗಳನ್ನು ರಚಿಸಿ ಇನ್ನೂ ಹೆಚ್ಚಿನ ಸಿದ್ಧತೆಯ ಕುರಿತು ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು. ಮುಂದೆ ಗಿರಿಜಾ ಕಲ್ಯಾಣ, ಸೀತಾ ಕಲ್ಯಾಣಕ್ಕೂ ಚಿಂತನೆ:ಎರಡು ವರ್ಷದಿಂದ ಅತ್ಯಂತ ಯಶಸ್ವಿಯಾಗಿ ಶ್ರದ್ದೆ ಭಕ್ತಿಯ ಜೊತೆಗೆ ಶ್ರೀನಿವಾಸ ಕಲ್ಯಾಣೋತ್ಸವ ನಡೆದಿದೆ. ೩ನೇ ವರ್ಷವೂ ಯಶಸ್ವಿಯಾಗಿ ನಡೆಸಲಿದ್ದೇವೆ. ಅದಾದ ಬಳಿಕ ಭಕ್ತರ ಆಶಯದಂತೆ ಮುಂದಿನ ದಿನ ಗಿರಿಜಾ ಕಲ್ಯಾಣ, ಸೀತಾ ಕಲ್ಯಾಣವನ್ನೂ ನಡೆಸಲು ಚಿಂತನೆ ಮಾಡಲಾಗಿದೆ ಎಂದು ಪುತ್ತಿಲ ತಿಳಿಸಿದರು.ಕಳೆದ ಬಾರಿಯ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಪೇಜಾವರ ಶ್ರೀಗಳು ಪುತ್ತೂರಿನಲ್ಲಿ ದೊಡ್ಡದಾದ ಗೋ ಶಾಲೆ ನಿರ್ಮಾಣ ಮಾಡಬೇಕೆಂದು ಅಪೇಕ್ಷೆ ಪಟ್ಟರು. ಅವರ ಅಪೇಕ್ಷೆಯಂತೆ ಗೋ ಶಾಲೆ ನಿರ್ಮಾಣಕ್ಕೆ ಪುತ್ತಿಲ ಪರಿವಾರ ಟ್ರಸ್ಟ್ ಯೋಜನೆ ರೂಪಿಸುತ್ತಿದೆ. ಟ್ರಸ್ಟ್ ವತಿಯಿಂದ ೨ ಮನೆಗಳನ್ನು ನಿರ್ಮಾಣ ಮಾಡುವ ಅಪೇಕ್ಷೆ ಸಮಾಜದಿಂದ ಬಂದಿದೆ. ಅವರ ಮನೆಗೆ ಸಂಬಂಧಿಸಿದ ಜಾಗದ ದಾಖಲೆ ಸಲ್ಲಿಕೆಯಾದ ಬಳಿಕ ಮನೆ ನಿರ್ಮಾಣ ಮಾಡಿ ಹಸ್ತಾಂತರ ಮಾಡಲಿದ್ದೇವೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷ ಮಹೇಂದ್ರ ವರ್ಮ, ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ರೈ ಮಠ, ಜೊತೆ ಕಾರ್ಯದರ್ಶಿ ರಾಜು ಶೆಟ್ಟಿ, ಸದಸ್ಯ ಪ್ರಜ್ವಲ್ ಘಾಟೆ, ಮಾದ್ಯಮ ವಕ್ತಾರ ನವೀನ್ ರೈ ಪಂಜಳ ಉಪಸ್ಥಿತರಿದ್ದರು.