ಸಾರಾಂಶ
ವರದಕ್ಷಿಣೆ ಹಾಗೂ ಮದುವೆಗಾಗಿ ಮಾಡುವ ದುಂದು ವೆಚ್ಚವನ್ನು ತಡೆಯುವ ಉದ್ದೇಶದಿಂದ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ 1972ರಲ್ಲಿ ಉಚಿತ ಸಾಮೂಹಿಕ ವಿವಾಹ ಸಮಾರಂಭ ಆರಂಭಿಸಿದರು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 52ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಬುಧವಾರ ಸಂಜೆ 6.45ಕ್ಕೆ ಗೋಧೂಳಿ ಲಗ್ನದಲ್ಲಿ ನಡೆಯಲಿದೆ.ಈಗಾಗಲೆ 123 ಜೊತೆ ವಧು- ವರರು ಸರಳ ವಿವಾಹಕ್ಕೆ ಹೆಸರು ನೋಂದಾಯಿಸಿದ್ದಾರೆ. ಅವರು ನೀಡಿದ ಪ್ರಮಾಣಪತ್ರಗಳು ಕ್ರಮಬದ್ಧವಾಗಿವೆಯೇ ಎಂದು ಪರಿಶೀಲಿಸಿ ಸಾಮೂಹಿಕ ವಿವಾಹದಲ್ಲಿ ಮದುವೆಗೆ ಅವಕಾಶ ಕಲ್ಪಿಸಲಾಗುತ್ತದೆ.
ಶ್ರೀ ಕ್ಷೇತ್ರದ ವತಿಯಿಂದ ವರನಿಗೆ ಧೋತಿ, ಶಾಲು ಹಾಗೂ ವಧುವಿಗೆ ಸೀರೆ, ರವಿಕೆ ಮತ್ತು ಮಂಗಳಸೂತ್ರ ನೀಡಲಾಗುವುದು. ಬುಧವಾರ ಬೆಳಗ್ಗೆಯಿಂದಲೇ ಧರ್ಮಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ವಧು-ವರರಿಗೆ ಸೀರೆ, ರವಿಕೆಕಣ, ಧೋತಿ ಮತ್ತು ಶಾಲುಗಳನ್ನು ಉಚಿತವಾಗಿ ವಿತರಿಸಲಿದ್ದಾರೆ. ಸಂಜೆ 5 ಗಂಟೆಗೆ ವಧು- ವರರು ಭವ್ಯ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಅಮೃತವರ್ಷಿಣಿ ಸಭಾಭವನಕ್ಕೆ ತೆರಳುವರು. ಅಲ್ಲಿ ಅವರವರ ಜಾತಿ-ಸಂಪ್ರದಾಯದಂತೆ ಒಂದೇ ಮುಹೂರ್ತದಲ್ಲಿ ಸಾಮೂಹಿಕ ವಿವಾಹ ನಡೆಯುತ್ತದೆ. ಬಳಿಕ ಅವರಿಗೆ ಪ್ರಮಾಣವಚನ ಬೊಧಿಸಲಾಗುತ್ತದೆ. ವೀರೇಂದ್ರ ಹೆಗ್ಗಡೆ ಹಾಗೂ ಮುಖ್ಯ ಅತಿಥಿ ಚಲನಚಿತ್ರ ನಟ ದೊಡ್ಡಣ್ಣ ಶುಭಾಶಂಸನೆ ಮಾಡಲಿದ್ದಾರೆ. ಬಳಿಕ ನೂತನ ದಂಪತಿಗಳು ದೇವರದರ್ಶನ ಮಾಡಿ, ಅನ್ನಪೂರ್ಣ ಭೋಜನಾಲಯದಲ್ಲಿ ಮದುವೆ ಊಟ ಮಾಡಿ ಊರಿಗೆ ತೆರಳಲಿದ್ದಾರೆ. ಸಾಮೂಹಿಕ ವಿವಾಹದಲ್ಲಿ ಮದುವೆ ಆದವರಿಗೆ ಸರ್ಕಾರದ ವತಿಯಿಂದ ವಿವಾಹ ನೋಂದಣಿ ಪ್ರಮಾಣ ಪತ್ರ ನೀಡಲಾಗುವುದು.ಆದರ್ಶ ಕಾರ್ಯಕ್ರಮ:
ವರದಕ್ಷಿಣೆ ಹಾಗೂ ಮದುವೆಗಾಗಿ ಮಾಡುವ ದುಂದು ವೆಚ್ಚವನ್ನು ತಡೆಯುವ ಉದ್ದೇಶದಿಂದ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ 1972ರಲ್ಲಿ ಉಚಿತ ಸಾಮೂಹಿಕ ವಿವಾಹ ಸಮಾರಂಭ ಆರಂಭಿಸಿದರು. ಪ್ರಥಮ ವರ್ಷದಲ್ಲಿ 88 ವಧೂ ವರರು ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದರು. ಹೆಗ್ಗಡೆ ಆರಂಭಿಸಿದ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ರಾಷ್ಟ್ರ-ರಾಜ್ಯಮಟ್ಟದಲ್ಲಿ ಆದರ್ಶ ಕಾರ್ಯಕ್ರಮವೆಂದು ಪ್ರಸಿದ್ಧವಾಗಿದೆ. ಇಲ್ಲಿನ ಪದ್ಧತಿಯನ್ನು ರಾಜ್ಯದ ಅನೇಕ ಸಂಘ-ಸಂಸ್ಥೆಗಳು ಅನುಕರಿಸುತ್ತಿರುವುದು ಹೆಗ್ಗಳಿಕೆಯಾಗಿದೆ.ವಿವಾಹವಾದ ಜೋಡಿಗಳ ವಿವರ:
1972ರಲ್ಲಿ 88, 1973 ರಲ್ಲಿ 291, 1974 ರಲ್ಲಿ 231, 1975 ರಲ್ಲಿ 484, 1976 ರಲ್ಲಿ 426, 1977 ರಲ್ಲಿ 482, 1978 ರಲ್ಲಿ 440, 1979 ರಲ್ಲಿ 385, 1980 ರಲ್ಲಿ 379, 1981ರಲ್ಲಿ 420, 1982ರಲ್ಲಿ 322, 1983ರಲ್ಲಿ 338, 1984ರಲ್ಲಿ 336, 1985ರಲ್ಲಿ 424, 1986ರಲ್ಲಿ 247, 1987ರಲ್ಲಿ 292, 1988 ರಲ್ಲಿ 200, 1989ರಲ್ಲಿ 351, 1990ರಲ್ಲಿ 310, 1991ರಲ್ಲಿ 414, 1992ರಲ್ಲಿ 410, 1993 ರಲ್ಲಿ 375, 1994 ರಲ್ಲಿ 295, 1995 ರಲ್ಲಿ 285, 1996ರಲ್ಲಿ 338, 1997ರಲ್ಲಿ 212, 1998ರಲ್ಲಿ 169, 1999ರಲ್ಲಿ 245, 2000ರಲ್ಲಿ 186, 2001ರಲ್ಲಿ 158, 2002ರಲ್ಲಿ 143, 2003ರಲ್ಲಿ 127, 2004ರಲ್ಲಿ 102, 2005ರಲ್ಲಿ 133, 2006ರಲ್ಲಿ 125, 2007ರಲ್ಲಿ 171, 2008ರಲ್ಲಿ 207, 2009ರಲ್ಲಿ 157, 2010ರಲ್ಲಿ 238, 2011ರಲ್ಲಿ 192, 2012ರಲ್ಲಿ 157, 2013ರಲ್ಲಿ 180, 2014ರಲ್ಲಿ 142, 2015ರಲ್ಲಿ 143, 2016ರಲ್ಲಿ 127, 2017ರಲ್ಲಿ 102, 2018ರಲ್ಲಿ 131, 2019ರಲ್ಲಿ 102, 2020ರಲ್ಲಿ ನಡೆದಿಲ್ಲ, 2021ರಲ್ಲಿ 131, 2022ರಲ್ಲಿ 183 ಹಾಗೂ 2023ರಲ್ಲಿ 201 ಜೋಡಿಗಳಿಗೆ ವಿವಾಹ ನೆರವೇರಿದೆ. ಹೀಗೆ ಇದುವರೆಗೆ 12,777 ಜೋಡಿಗಳು ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ಹಸೆಮಣೆಗೇರಿ ಸುಖ-ಶಾಂತಿ, ನೆಮ್ಮದಿಯ ದಾಂಪತ್ಯಜೀವನ ನಡೆಸುತ್ತಿದ್ದಾರೆ. ಹಿಂದೆ ಮದುವೆಯಾದ ಜೋಡಿಗಳ ಮಕ್ಕಳು ತದನಂತರದ ವರ್ಷದಲ್ಲಿ ಧರ್ಮಸ್ಥಳದ ಸಾಮೂಹಿಕ ವಿವಾಹದಲ್ಲಿ ವಿವಾಹವಾಗಿರುವ ಉದಾಹರಣೆಗಳೂ ಇವೆ.