ಸಾರಾಂಶ
ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ
ರಾಜ್ಯದಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿ ನೀರಿಗೆ ಹಾಹಾಕಾರ ಉಂಟಾಗಿದ್ದು, ಮನುಷ್ಯರು ಮಾತ್ರವಲ್ಲ, ಪ್ರಾಣಿ- ಪಕ್ಷಿ ಸಂಕುಲಗಳು ಜೀವಜಲಕ್ಕಾಗಿ ಪರದಾಡುವ ಪರಿಸ್ಥಿತಿ ಹೆಚ್ಚಾಗಿದೆ. ಅದರಂತೆಯೇ ನೆಲಮಂಗಲ ತಾಲೂಕಿನ ವಿವಿಧ ಬೆಟ್ಟಗಳಲ್ಲಿ ವಾಸಿಸುತ್ತಿರುವ ಪ್ರಾಣಿಗಳು, ವನ್ಯಜೀವಿಗಳು ಕುಡಿಯುವ ನೀರು, ಆಹಾರಕ್ಕಾಗಿ ಪರದಾಡುವಂತಾಗಿದೆ.ಜಲಮೂಲಗಳು, ಕೆರೆ- ಕಟ್ಟೆಗಳು ಬರಿದಾಗುತ್ತಿದ್ದು, ಪ್ರಾಣಿ- ಪಕ್ಷಿಗಳು ಬಿಸಿಲಿನ ಬೇಗೆ ತಾಳಲಾರದೆ ಸರಿಯಾಗಿ ನೀರು ಸಿಗದೆ ನಿತ್ರಾಣಗೊಂಡು ಸಾವನ್ನಪ್ಪುತ್ತಿವೆ. ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು, ಜಲದಾಹಕ್ಕೆ ಮೂಕಜೀವಿಗಳ ರೋಧನೆಯೂ ಹೆಚ್ಚಾಗಿದೆ.
ನಲ್ಲಿ, ಮನೆಗಳತ್ತ ಚೀರಾಟ:ಕೋತಿ, ಗುಬ್ಬಚ್ಚಿ, ಕಾಗೆ, ಬೀದಿಗೆ ಬಿಟ್ಟ ಹಸು, ಎಮ್ಮೆ, ಕರುಗಳು, ಬೀದಿ ನಾಯಿಗಳು ಮನೆ ಇಲ್ಲವೇ ನಲ್ಲಿಗಳ ಬಳಿ ನೀರಿಗಾಗಿ ಎಡತಾಕುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ. ಬಿಂದಿಗೆ, ಬಕೆಟ್ ಕಾಣಿಸುತ್ತಿದ್ದಂತೆ ಧಾವಿಸಿ ಬರುತ್ತಿವೆ. ಬಹುತೇಕ ಕಡೆ ಹಲವು ಪ್ರಾಣಿಗಳು ಅನುಭವಿಸುತ್ತಿರುವ ಮೂಕ ರೋಧನೆ ಬೆಳಕಿಗೆ ಬರುತ್ತಿಲ್ಲ.
ಉಷ್ಣಾಂಶ ಹೆಚ್ಚಳ:ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಗರಿಷ್ಠ 38 ಡಿಗ್ರಿ ಸೆಲ್ಸಿಯಸ್ ಮುಟ್ಟಿದೆ. ಬಿಸಿಲಿನ ದಾಹ ನೀಗಿಸಿಕೊಳ್ಳಲು ಜನರು ಎಳನೀರು, ತಂಪು ಪಾನೀಯ, ಕಲ್ಲಂಗಡಿ, ಐಸ್ ಕ್ರೀಮ್ ಮೊರೆ ಹೋಗುತ್ತಿದ್ದಾರೆ. ಮೂಕಜೀವಿಗಳ ನೋವು ಕೇಳವವರಿಲ್ಲ. ಪ್ರಜ್ಞಾವಂತ ನಾಗರಿಕರು ಪ್ರಾಣಿ ಪಕ್ಷಿಗಳಿಗೆ ನೀರುಣಿಸುವ ಕಾರ್ಯಕ್ಕೆ ಮುಂದಾಗಬೇಕಾಗಿದೆ.
ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು:ತಾಲೂಕಿನಲ್ಲಿ ಮಳೆ ಇಲ್ಲದೆ ಅಂತರ್ಜಲ ಕುಸಿತ ಉಂಟಾಗಿ ಬೋರ್‌ವೆಲ್ ಗಳು ಬರಿದಾಗುತ್ತಿರುವುದು ಒಂದೆಡೆಯಾದರೆ ಕೆರೆ, ಕಟ್ಟೆ, ಹಳ್ಳಗಳಲ್ಲಿ ನೀರಿಲ್ಲದಂತಾಗಿದೆ. ಮಳೆ ಬರದ ಹಿನ್ನೆಲೆಯಲ್ಲಿ ಪ್ರಾಣಿ, ಪಕ್ಷಿಗಳ ಸ್ಥಿತಿಯನ್ನು ಊಹಿಸಲು ಸಾಧ್ಯವಿಲ್ಲ. ಈಗ ಉಂಟಾಗಿರುವ ಬರದಿಂದ ಇನ್ನೂ ಕೆಲವು ಪ್ರಾಣಿ, ಪಕ್ಷಿಗಳು ಹಸಿವು ಮತ್ತು ನೀರಿನ ದಾಹದಿಂದ ಪ್ರಾಣ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಜಿಲ್ಲೆಯ ಬೆಟ್ಟಗುಡ್ಡಗಳಲ್ಲಿ, ಅರಣ್ಯ ಪ್ರದೇಶದಲ್ಲಿ ನೀರಿಲ್ಲ. ಕನಿಷ್ಠ ನಶಿಸುತ್ತಿರುವ ಈ ಪ್ರಾಣಿ, ಪಕ್ಷಿಗಳು ಬರಗಾಲದ ಪರಿಸ್ಥಿತಿಯಲ್ಲಿ ಹೇಗೆ ಬದುಕುತ್ತವೆ. ಅವುಗಳಿಗೆ ನೀರು, ಆಹಾರ ಹೇಗೆ ಒದಗಿಸಬೇಕು ಎನ್ನುವ ಆಲೋಚನೆ ಯಾವುದೇ ಅಧಿಕಾರಿಗಳಿಗೂ ತೋಚದೇ ಇರುವುದು ವಿಪರ್ಯಾಸ.
ವಲಸೆ ಹೋಗುತ್ತಿವೆ ಜೀವಿಗಳು: ಶಿವಗಂಗೆ ಅರಣ್ಯ ಪ್ರದೇಶ, ನಿಜಗಲ್ ಸಿದ್ದರಬೆಟ್ಟ, ಮಹಿಮರಂಗನ ಬೆಟ್ಟದ ಅರಣ್ಯ ಪ್ರದೇಶ ಸೇರಿ ಜಿಲ್ಲೆಯಲ್ಲಿರುವ ಬಹುತೇಕ ಅರಣ್ಯ ಪ್ರದೇಶಗಳಲ್ಲಿ ಅತ್ಯಮೂಲ್ಯವಾದ ಪಕ್ಷಿ ಸಂಕುಲವಿದೆ. ಆದರೆ, ಜಿಲ್ಲೆಯಲ್ಲಿ ಬರಗಾಲ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಬೆಳೆ ವಿಫಲವಾಗಿ ಪಕ್ಷಿಗಳಿಗೆ ಅರಣ್ಯ ಸಿಗುತ್ತಿಲ್ಲ. ಇತ್ತ ನೀರಿಲ್ಲದೇ ಜಿಲ್ಲೆಯ ಬಹುತೇಕ ಪಕ್ಷಿಗಳು ವಲಸೆ ಹೋಗುತ್ತಿವೆ. ಕೆಲವು ಪ್ರಾಣಿಗಳು ನಗರಗಳತ್ತ ದಾಳಿಯಿಡುತ್ತಿವೆ. ಇದನ್ನು ತಪ್ಪಿಸಲು ಅರಣ್ಯ ಪ್ರದೇಶಗಳಲ್ಲಿ ಕನಿಷ್ಠ ಕುಡಿಯುವ ನೀರು ಸಿಗುವಂತೆ ವ್ಯವಸ್ಥೆ ಮಾಡುವತ್ತ ಜಿಲ್ಲಾಡಳಿತ, ಸರ್ಕಾರ ಮುಂದಾಗಬೇಕಿದೆ.