ಮಾರುತಿ ಶಿಡ್ಲಾಪೂರಕನ್ನಡಪ್ರಭ ವಾರ್ತೆ ಹಾನಗಲ್ಲ
ವೈಜ್ಞಾನಿಕ ತಳಹದಿಯಲ್ಲಿ ಕೃಷಿ ಬೇಕೆಂಬ ಚರ್ಚೆಗಳ ನಡುವೆ ಸರ್ಕಾರ ಯೋಜಿಸಿರುವ ಉಚಿತ ಮಣ್ಣಿನ ಪರೀಕ್ಷೆ ಸೌಲಭ್ಯಗಳು ರೈತರನ್ನು ತಲುಪುವಲ್ಲಿ ವಿಳಂಬವಾಗುತ್ತಿರುವುದು ಕೃಷಿ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ.ಹಾನಗಲ್ಲ ತಾಲೂಕಿನಲ್ಲಿ ೪೬ ಸಾವಿರ ಹೆಕ್ಟೇರ್ ಕೃಷಿ ಭೂಮಿ ಇದೆ. ೩೮ ಸಾವಿರಕ್ಕೂ ಅಧಿಕ ರೈತರಿದ್ದಾರೆ. ರಾಸಾಯನಿಕಗಳ ಬಳಕೆ ಬೇಕು, ಬೇಡ ಎಂಬ ಜಿಜ್ಞಾಸೆಯೂ ಈಗ ಆರಂಭವಾಗಿದೆ. ಈ ನಡುವೆ ತಮ್ಮ ಭೂಮಿಗೆ ಅಗತ್ಯವಿರುವ ಪೋಷಕಾಂಶಗಳ ಬಗ್ಗೆ ತಿಳಿಯಲು ಕೃಷಿ ಭೂಮಿಯ ಪರೀಕ್ಷೆ ಬೇಕಾಗಿದೆ. ಆದರೆ ಇಡೀ ತಾಲೂಕಿನಲ್ಲಿ ಪ್ರತಿ ರೈತರ ಕೃಷಿ ಭೂಮಿಗೆ ತಲುಪಿ ಕಾಲ ಕಾಲಕ್ಕೆ ಮಣ್ಣು ಪರೀಕ್ಷೆ ಮಾಡಬೇಕಾದ ಸೌಲಭ್ಯ ಮಾತ್ರ ತೃಪ್ತಿಕರವಾಗಿಲ್ಲ. ಇಡೀ ತಾಲೂಕಿನಲ್ಲಿ ಒಂದೇ ಮಣ್ಣು ಪರೀಕ್ಷೆ ವಾಹನವಿದ್ದು, ವರ್ಷಕ್ಕೆ ೧೨೦೦ ಮಾದರಿಗಳನ್ನು ಮಾಡಬಹುದಾಗಿದೆ. ಆದರೆ ೪೬ ಸಾವಿರ ಹೆಕ್ಟೇರ್ ಭೂಮಿಯ ೩೮ ಸಾವಿರ ರೈತರನ್ನು ತಲುಪುವುದು ಯಾವಾಗ ಎಂಬ ಪ್ರಶ್ನೆ ಇದೆ. ಭೂಗುಣ ಆಧರಿಸಿ ಪೋಷಕಾಂಶಗಳನ್ನು ಹಾಕಬೇಕೆಂಬ ಯೋಜನೆ ಸಾಕಾರವಾಗಲು ಹಾನಗಲ್ಲ ತಾಲೂಕಿನ ಪ್ರತಿ ಹೋಬಳಿಗೆ ಒಂದರಂತೆ ಇನ್ನೂ ಎರಡು ಮಣ್ಣು ಪರೀಕ್ಷಾ ಕೃಷಿ ಸಂಜೀವಿನಿ ವಾಹನಗಳ ಅಗತ್ಯವಿದೆ. ಈಗಿರುವ ತಾಲೂಕಿನಲ್ಲಿನ ಒಂದೇ ಕೃಷಿ ಸಂಜೀವಿನಿ ವಾಹನವನ್ನು ವಿವಿಧ ಯೋಜನೆಗಳ ಪ್ರಚಾರಕ್ಕೂ ಬಳಸಲಾಗುತ್ತಿದೆ. ಕೃಷಿ ಕ್ಷೇತ್ರಗಳ ಭೇಟಿ, ಧರತಿ ಮಾತಾ ಬಚಾವೋ ಆಂದೋಲನ ಸೇರಿದಂತೆ ಕೃಷಿ ಇಲಾಖೆಯ ಪ್ರಚಾರ ವಾಹನವಾಗಿಯೇ ಹೆಚ್ಚು ಬಳಕೆಯಾಗುತ್ತಿರುವುದರಿಂದ ಹೆಚ್ಚಿನ ಮಣ್ಣು ಪರೀಕ್ಷೆಗೆ ಇದು ಬಳಕೆಯಾಗುತ್ತಿಲ್ಲ. ಇಲಾಖೆ ನೀಡಿದ ಗುರಿ ತಲುಪಿ ಅಲ್ಲಿಗೆ ಮಣ್ಣು ಪರೀಕ್ಷೆಯನ್ನು ನಿಲ್ಲಿಸಲಾಗುತ್ತದೆ. ಹೀಗಾಗಿ ಹಾನಗಲ್ಲ ತಾಲೂಕಿನ ಮೂರು ಹೋಬಳಿಗೆ ಒಂದರಂತೆ ಇನ್ನೂ ಎರಡು ಕೃಷಿ ಸಂಜೀವಿನಿ ವಾಹನಗಳು ಇಲ್ಲಿಗೆ ಬೇಕಾಗಿವೆ. ವಾಹನದ ಜೊತೆಗೆ ಸಾಕಷ್ಟು ಸಿಬ್ಬಂದಿ, ಅಗತ್ಯ ಸಾಮಗ್ರಿಗಳನ್ನೂ ನೀಡಿದರೆ ಮಾತ್ರ ಈ ಯೋಜನೆ ಸಫಲವಾಗಬಲ್ಲದು. ಇಲ್ಲಿನ ಸಿಬ್ಬಂದಿ ಮಣ್ಣು ಮಾದರಿಗಳನ್ನು ಸಂಗ್ರಹಿಸಿ ಹಾವೇರಿ ತಾಲೂಕಿನ ದೇವಿಹೊಸೂರಿನಲ್ಲಿರುವ ಕೃಷಿ ವಿಜ್ಞಾನ ಕೇಂದ್ರಕ್ಕೆ ಮಾದರಿಯನ್ನು ಕಳಿಸಿ, ಮಣ್ಣಿನಲ್ಲಿಯ ಪೋಷಕಾಂಶಗಳ ಸ್ಥಿತಿಗತಿಯನ್ನು ತಿಳಿಯಬೇಕಾಗಿದೆ. ಹಾನಗಲ್ಲಿನಲ್ಲಿಯೇ ಇಂತಹ ಮಣ್ಣು ಮಾದರಿ ಪರೀಕ್ಷೆ ಕೇಂದ್ರ ತೆರೆದರೆ ರೈತರಿಗೆ ಹೆಚ್ಚು ಅನುಕೂಲ. ಹಾನಗಲ್ಲ ರಾಜ್ಯದಲ್ಲಿಯೇ ಅತಿ ದೊಡ್ಡ ತಾಲೂಕು ಆಗಿರುವುದರಿಂದ ಇಂತಹ ಸೌಲಭ್ಯ ಬೇಕು ಎಂಬ ಬೇಡಿಕೆ ಇದೆ.ಮಣ್ಣು ಪರೀಕ್ಷೆಯ ಕೃಷಿ ಸಂಜೀವಿನಿ ವಾಹನದ ಮೂಲಕ ತಾಲೂಕಿನಲ್ಲಿ ಸರ್ಕಾರ ನಿಗದಿ ಮಾಡಿದ ಸಂಖ್ಯೆಯಲ್ಲಿ ಮಣ್ಣು ಮಾದರಿ ತೆಗೆದು, ಕೃಷಿ ವಿಜ್ಞಾನ ಕೇಂದ್ರಕ್ಕೆ ಕಳಿಸಿ, ಮಾದರಿಯಲ್ಲಿನ ಪೋಷಕಾಂಶಗಳ ಮಾಹಿತಿಯನ್ನು ರೈತರಿಗೆ ನೀಡಲಾಗುತ್ತಿದೆ. ತಾಲೂಕಿಗೆ ಇನ್ನೂ ಎರಡು ಕೃಷಿ ಸಂಜೀವಿನಿ ವಾಹನಗಳ ಅಗತ್ಯವಿದೆ. ಬೇಡಿಕೆ ಸಲ್ಲಿಸಲಾಗಿವೆ ಎಂದು ಹಾನಗಲ್ಲ ಸಹಾಯಕ ಕೃಷಿ ನಿರ್ದೇಶಕ ಸಿ.ಟಿ. ಸುರೇಶ ಹೇಳಿದರು.ಮಣ್ಣಿನ ಪರೀಕ್ಷೆ ಮಾಡಿಸಿ ಅದಕ್ಕನುಗುಣವಾಗಿ ಪೋಷಕಾಂಶ ಒದಗಿಸಬೇಕು ಎಂದು ಕೃಷಿ ಇಲಾಖೆ ಹೇಳುತ್ತದೆ. ಆದರೆ ಮಣ್ಣು ಮಾದರಿ ತೆಗೆಯುವ ಸಂಖ್ಯಾ ಪ್ರಮಾಣ ಮಾತ್ರ ತುಂಬ ಕಡಿಮೆ ಇದೆ. ಈ ಕೃಷಿ ಸಂಜೀವಿನಿಗೆ ಬೇಕಾದ ಸಿಬ್ಬಂದಿ ಕೊರತೆಯೂ ಇದೆ. ಸರ್ಕಾರ ಹೇಳುವಷ್ಟು ಪರಿಣಾಮಕಾರಿಯಾಗಿ ಈ ಯೋಜನೆ ಅನುಷ್ಠಾನಗೊಳ್ಳುತ್ತಿಲ್ಲ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಮರಿಗೌಡ ಪಾಟೀಲ ಹೇಳಿದರು.ರೈತರನ್ನು ತಲುಪುತ್ತಿಲ್ಲ ಉಚಿತ ಮಣ್ಣಿನ ಪರೀಕ್ಷೆ ಸೌಲಭ್ಯ
ವೈಜ್ಞಾನಿಕ ತಳಹದಿಯಲ್ಲಿ ಕೃಷಿ ಬೇಕೆಂಬ ಚರ್ಚೆಗಳ ನಡುವೆ ಸರ್ಕಾರ ಯೋಜಿಸಿರುವ ಉಚಿತ ಮಣ್ಣಿನ ಪರೀಕ್ಷೆ ಸೌಲಭ್ಯಗಳು ರೈತರನ್ನು ತಲುಪುವಲ್ಲಿ ವಿಳಂಬವಾಗುತ್ತಿರುವುದು ಕೃಷಿ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.