ಬಡ ರೋಗಿಗಳ ಚಿಕಿತ್ಸೆಗೆ ಉಚಿತ ವ್ಯವಸ್ಥೆ

| Published : Aug 06 2024, 12:33 AM IST

ಸಾರಾಂಶ

ರೋಗಿಗಳು ಇರುವ ಕಡೆಗೆ ವೈದ್ಯರನ್ನು ಕರೆ ತಂದು ಸ್ಥಳದಲ್ಲಿಯೇ ತಪಾಸಣೆ ನಡೆಸುವುದೇ ಈ ಶಿಬಿರದ ಉದ್ದೇಶ. ಎಂವಿಜೆ ವೈದ್ಯಕೀಯ ಕಾಲೇಜಿನ ಸಹಯೋಗದಲ್ಲಿ ತಾಲೂಕಿನ ೨೮ ಗ್ರಾ.ಪಂ.ಗಳಲ್ಲಿ ಪ್ರತಿ ಮಂಗಳವಾರ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸಲಾಗುವುದು

ಕನ್ನಡಪ್ರಭ ವಾರ್ತೆ ಟೇಕಲ್

ಮಾಲೂರು ತಾಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

ಅವರು ಟೇಕಲ್‌ನ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಹೊಸಕೋಟೆಯ ಎಂವಿಜೆ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನ ಆಸ್ಪತ್ರೆ ಮತ್ತು ಕೆ.ಜಿ.ಹಳ್ಳಿ ಗ್ರಾ.ಪಂ.ನ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಮಲ್ಟಿಸ್ಟೆಷಾಲಿಟಿ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ರೋಗಿಗಳು ಹೆಚ್ಚಿನ ಚಿಕಿತ್ಸೆಗೆ ತಾಲೂಕು, ಜಿಲ್ಲಾ ಆಸ್ಪತ್ರೆಗಳಿಗೆ ಹೋಗುತ್ತಿರುವುದನ್ನು ಮನಗಂಡು ರೋಗಿಗಳು ಇರುವ ಕಡೆಗೆ ವೈದ್ಯರನ್ನು ಕರೆ ತಂದು ಸ್ಥಳದಲ್ಲಿಯೇ ತಪಾಸಣೆ ನಡೆಸುವುದೇ ಈ ಶಿಬಿರದ ಉದ್ದೇಶ. ಎಂವಿಜೆ ವೈದ್ಯಕೀಯ ಕಾಲೇಜಿನ ಸಹಯೋಗದಲ್ಲಿ ತಾಲೂಕಿನ ೨೮ ಗ್ರಾ.ಪಂ.ಗಳಲ್ಲಿ ಪ್ರತಿ ಮಂಗಳವಾರ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸಲಾಗುವುದು ಎಂದರು.

ಹೆಚ್ಚಿನ ಚಿಕಿತ್ಸೆಗೆ ಉಚಿತ ವ್ಯವಸ್ಥೆ

ಎಂವಿಜೆ ವೈದ್ಯಕೀಯ ಆಸ್ಪತ್ರೆಯ ನಿರ್ದೇಶಕರಾದ ಡಾ. ಪ್ರಮೋದ್‌ ಮಾತನಾಡಿ, ವೈದ್ಯಕೀಯ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇರುವ ರೋಗಿಗಳಿಗೆ ಗುರುತಿನ ಚೀಟಿ ಮತ್ತು ಕಾರ್ಡ್‌ನ್ನು ವಿತರಿಸಲಾಗುವುದು. ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರು ಶಿಫಾರಸು ಮಾಡಿದರೆ ನಮ್ಮ ಆಸ್ಪತ್ರೆಯಿಂದ ಉಚಿತ ವಾಹನ ಸೌಲಭ್ಯ ನೀಡಿ ಚಿಕಿತ್ಸೆ ನೀಡಿ ಮತ್ತೆ ಅದೇ ವಾಹನದಲ್ಲಿ ವಾಪಸ್‌ ಕಳುಹಿಸಲಾಗುವುದು ಎಂದರು.ಶಿಬಿರದ ಸೌಲಭ್ಯ ಬಳಸಿಕೊಳ್ಳಿ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ.ಜಿ.ಹಳ್ಳಿ ಗ್ರಾ.ಪಂ.ಅಧ್ಯಕ್ಷ ಎಸ್.ಆರ್.ಯಲ್ಲಪ್ಪ ಮಾತನಾಡಿ ತಾಲ್ಲೂಕಿನಲ್ಲಿ ಪ್ರಥಮವಾಗಿ ನಮ್ಮ ಪಂಚಾಯ್ತಿಯಲ್ಲಿ ಆರೋಗ್ಯ ಶಿಬಿರ ನಡೆಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ಕೋರಿದರು.

ಕೀರ್ಯಕ್ರಮದಲ್ಲಿ ಮಾಲೂರು ತಾಪಂ ಇಒ ಕೃಷ್ಣಪ್ಪ, ಟೇಕಲ್ ಆಸ್ಪತ್ರೆಯ ಡಾ. ಪ್ರಕಾಶ್, ತಹಸೀಲ್ದಾರ್ ರಮೇಶ, ಕೆ.ಜಿ.ಹಳ್ಳಿ ಗ್ರಾಪಂ ಉಪಾಧ್ಯಕ್ಷೆ ಮಮತಶಶಿಧರ, ಪಿಡಿಒ ಮಂಜುಳ, ಟೇಕಲ್ ಗ್ರಾ.ಪಂ.ಅಧ್ಯಕ್ಷ ಖಾದರ್, ಎ.ಕೆ.ವೆಂಕಟೇಶ, ಮಂಜುಳ ಪ್ರಕಾಶ್, ಆಸ್ಪತ್ರೆ ಸಿಬ್ಬಂದಿ ವರ್ಗ, ಮುಖಂಡರುಗಳು ಉಪಸ್ಥಿತರಿದ್ದರು.