ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಕಠಿಣ ನಿರ್ಧಾರ, ಆಸಕ್ತಿ, ಸಾಮರ್ಥ್ಯ ಮತ್ತು ಕೌಶಲ್ಯ ಮುಖ್ಯ ಎಂದು ಇನ್‌ಸೈಟ್ಸ್ ಐಎಎಸ್ ಸಂಸ್ಥಾಪಕ ವಿನಯ್ ಕುಮಾರ್ ಹೇಳಿದರು.ಒಕ್ಕಲಿಗ ಯುವ ಬ್ರಿಗೇಡ್ ಮೇಟಗಳ್ಳಿಯ ಪೂಜಾ ಭಾಗವತ್ ಸ್ಮಾರಕ ಮಹಾಜನ ಸ್ನಾತಕೋತ್ತರ ಕೇಂದ್ರದಲ್ಲಿ ಗುರುವಾರ ಏರ್ಪಡಿಸಿದ್ದ ಐಎಎಸ್, ಕೆಎಎಸ್ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುವುದು ಹೇಗೆ? ಕುರಿತ ಉಚಿತ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.ಐಎಎಸ್ ಮಾಡಬೇಕಾದರೆ ಮಹಾತ್ವಕಾಂಕ್ಷೆ ಇರಬೇಕು. ದೊಡ್ಡ ದೊಡ್ಡ ಕನಸುಗಳನ್ನು ಕಾಣಬೇಕು. ಅದನ್ನು ನನಸು ಮಾಡಿಕೊಳ್ಳಲು ಸಾಕಷ್ಟು ಪರಿಶ್ರಮ ಹಾಕಬೇಕು. ಪ್ರತಿ ವರ್ಷ 2 ಕೋಟಿ ಜನ ಐಎಎಸ್ ಮಾಡುವ ಕನಸು ಕಾಣುತ್ತಾರೆ. 5 ಲಕ್ಷ ಮಂದಿ ಮಾತ್ರ ಪರೀಕ್ಷೆ ಬರೆಯುತ್ತಾರೆ. ಅದರಲ್ಲಿ ಕೆಲವರು ಮಾತ್ರ ಆಯ್ಕೆಯಾಗುತ್ತಾರೆ. ಕರ್ನಾಟಕದವರು ಪ್ರತಿ ಬಾರಿ ನೂರು ಮಂದಿಯಾದರೂ ಆಯ್ಕೆಯಾಗಬೇಕು ಎಂಬುದು ನನ್ನ ಉದ್ದೇಶ ಎಂದರು.ಹುಣಸೂರಿನಲ್ಲಿ ಪಿಡಿಒ ಆಗಿದ್ದ ನಾನು ನಂತರ ಕೆಎಎಸ್ ಪರೀಕ್ಷೆ ಬರೆದು ಸಿಟಿಒ ಆಗಿ ಆಯ್ಕೆಯಾಗಿದ್ದೆ. ಆದರೆ ಆ ಪಟ್ಟಿ ತಡೆಹಿಡಿಯಲ್ಪಟ್ಟಿತು. ಹೀಗಾಗಿ ನನ್ನಲ್ಲಿರುವ ಜ್ಞಾನ ಹಂಚಿಕೊಳ್ಳಲು ವೆಬ್‌ಸೈಟ್ನಲ್ಲಿ ಬರೆಯತೊಡಗಿದೆ. ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರಿಂದ ನಾನೇ ಇನ್‌ಸೈಟ್ಸ್ ಐಎಎಸ್ ಸಂಸ್ಥೆ ಪ್ರಾರಂಭಿಸಿದೆ. ನಾಲ್ಕು ಬಾರಿ ಐಎಎಸ್ ಪರೀಕ್ಷೆ ಬರೆದು, ಒಮ್ಮೆ ಸಂದರ್ಶನಕ್ಕೂ ಹೋಗಿ ಬಂದೆ. ಎರಡು ಅಂಕದಲ್ಲಿ ರ್ಯಾಕಿಂಗ್ ಹೋಯಿತು. ಮುಂದೆ ಸಂಸ್ಥೆಯನ್ನು ಕಟ್ಟಿ ಬೆಳೆಸಿದೆ. ಈವರೆಗೆ 1547 ಮಂದಿ ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ದೇಶ- ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನೀವು ಈ ರೀತಿ ಆಗಬೇಕಾದರೆ ಕಠಿಣ ಪರಿಶ್ರಮ ಪಡಬೇಕು ಎಂದು ಅವರು ಕಿವಿಮಾತು ಹೇಳಿದರು.ತರಬೇತಿಯನ್ನು ಉದ್ಘಾಟಿಸಿದ ಸಿಐಡಿ ಎಸ್ಪಿ ಕಾಶಿ ಗೌಡ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರಿಗೆ ಮೊದಲು ನಡೆ- ನುಡಿ, ಗುರಿ, ಶಿಸ್ತು ಮುಖ್ಯ, ಕಲಿಯುವ ಹಸಿವು ಇರಬೇಕು ಎಂದರು.ಮುಖ್ಯ ಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಇದು ಅವಕಾಶಗಳ ಯುಗ. ಪ್ರಪಂಚದ ಮೂಲೆಮೂಲೆಯಲ್ಲಿ ಕೆಲಸ ಸಿಗುತ್ತಿದೆ. ನಿಮಗೆ ಬೇಕಾದ ಕೆಲಸವನ್ನು ಆಯ್ಕೆ ಮಾಡಿಕೊಳ್ಳಬಹುದು. ಸ್ಪರ್ಧಾತ್ಮಕ ಪರೀಕ್ಷೆಗೆ ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವು ಇರಬೇಕು. ಅದಕ್ಕಾಗಿ ಪ್ರತಿನಿತ್ಯ ಪತ್ರಿಕೆಗಳನ್ನು ಓದಬೇಕು. ಅದರಲ್ಲೂ ಸಂವಾದಕೀಯ ಹಾಗೂ ಮುಕ್ತ ಪುಟದಲ್ಲಿ ಪ್ರಕಟವಾಗುವ ಲೇಖನಗಳನ್ನು ಗಮನಿಸಬೇಕು. ಗ್ರಂಥಾಲಯಗಳಲ್ಲಿ ಹೆಚ್ಚು ಸಮಯ ಕಳೆಯಬೇಕು ಎಂದರು.ಮತ್ತೊರ್ವ ಹಿರಿಯ ಪತ್ರಕರ್ತ ಎಂ.ಆರ್. ಸತ್ಯನಾರಾಯಣ ಮಾತನಾಡಿ, ಐಎಎಸ್ ಪಾಸು ಮಾಡುತ್ತಿರುವವರಲ್ಲಿ ಉತ್ತರ ಭಾರತೀಯರೇ ಹೆಚ್ಚು. ಕರ್ನಾಟಕದವರ ಸಂಖ್ಯೆ ಕಡಿಮೆ ಇದೆ. ಇದಕ್ಕೆ ಪೋಷಕರ ಮನಸ್ಥಿತಿ ಕಾರಣ. ಅವರಿಗೆ ಎಂಜಿಯರಿಂಗ್, ವೈದ್ಯಕೀಯ ಕೋರ್ಸುಗಳ ಬಗ್ಗೆ ಮಾತ್ರ ಯೋಚನೆ. ಇದನ್ನು ಹೊರತುಪಡಿಸಿ ಐಎಎಸ್, ಕೆಎಎಸ್ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಿವೆ ಎಂಬ ಬಗ್ಗೆ ಗಮನನೀಡಬೇಕು ಎಂದು ಸಲಹೆ ಮಾಡಿದರು.ಅಧ್ಯಕ್ಷತೆ ವಹಿಸಿದ್ದ ಮಹಾಜನ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಸಿ.ಕೆ. ರೇಣುಕಾರ್ಯ ಮಾತನಾಡಿ, ಐಎಎಸ್, ಐಎಫ್‌ಎಸ್, ಎಆರ್ ಎಸ್ ಮೊದಲಾದ ಪರೀಕ್ಷೆಗಳಲ್ಲಿ ಉತ್ತರ ಭಾರತೀಯರೇ ಮೇಲುಗೈ. ದಕ್ಷಿಣ ಭಾರದಲ್ಲಿ ಕೇರಳ ಹಾಗೂ ತಮಿಳನಾಡಿನವರು ಹೆಚ್ಚಿರುತ್ತಾರೆ. ದೇಶದಲ್ಲಿ ಕರ್ನಾಟಕ ಒಂದು ಪ್ರಮುಖ ರಾಜ್ಯ. ಜಿಡಿಪಿ ಹೆಚ್ಚಿದೆ. ಹೆಚ್ಚಿನ ವಿದ್ಯಾವಂತರು ಇದ್ದಾರೆ. ಆದರೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮಾತ್ರ ಹಿಂದೆ ಇದ್ದಾರೆ ಎಂದು ವಿಷಾದಿಸಿದರು.ವಿದ್ಯಾರ್ಥಿಗಳಿಗೆ ಈ ಪರೀಕ್ಷೆಗಳಿಗೆ ತರಬೇತಿ ನೀಡಲು ಒಕ್ಕಲಿಗ ಯುವ ಬ್ರಿಗೇಡ್ ಜೊತೆ ಸೇರಿ, ಕೇಂದ್ರವೊಂದನ್ನು ತೆರೆಯಲಾಗುವುದು ಎಂದು ಅವರು ಪ್ರಕಟಿಸಿದರು.ಮಹಾಜನ ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಡಾ.ವಿ. ಭಾವನಾ ಸ್ವಾಗತಿಸಿದರು. ಒಕ್ಕಲಿಗ ಯುವಬ್ರಿಗೇಡ್ ಸಂಸ್ಥಾಪಕ ನಂಜೇಗೌಡ ನಂಡುಂಡ ವಂದಿಸಿದರು. ರಾಜ್ಯಶಾಸ್ತ್ರ ವಿಷಯ ತರಬೇತುದಾರ ನಿಖಿಲ್, ಸಾಮಾನ್ಯ ಪರೀಕ್ಷೆ ತರಬೇತುದಾರ ಕೃಷ್ಣ ಗರಣಿ ಮೊದಲಾದವರು ಇದ್ದರು.