ಪ್ರಪಂಚದ ಹಲವು ದೇಶಗಳಲ್ಲಿ ಉಚಿತ ಆರೋಗ್ಯ ಸೇವೆ ನೀಡುತ್ತ ಜಾಗತಿಕ ಮನ್ನಣೆ ಗಳಿಸಿದ ಆರೋಗ್ಯ ಸೇವಾ ಸಂಸ್ಥೆಯ ನೂತನ ಶಾಖೆ ಜ. 26ರಂದು ಗೋಕರ್ಣದಲ್ಲಿ ಉದ್ಘಾಟನೆಗೊಳ್ಳಲಿದೆ.

ವಿಶ್ವದ ಮನಗೆದ್ದ ಆರೋಗ್ಯ ಸೇವಾ ಸಂಸ್ಥೆಯ ಶಾಖೆ ಈಗ ಗೋಕರ್ಣದಲ್ಲಿ, ಇಂದು ಉದ್ಘಾಟನೆವಸಂತಕುಮಾರ್ ಕತಗಾಲ

ಕನ್ನಡಪ್ರಭ ವಾರ್ತೆ ಕಾರವಾರ

ಪ್ರಪಂಚದ ಹಲವು ದೇಶಗಳಲ್ಲಿ ಉಚಿತ ಆರೋಗ್ಯ ಸೇವೆ ನೀಡುತ್ತ ಜಾಗತಿಕ ಮನ್ನಣೆ ಗಳಿಸಿದ ಆರೋಗ್ಯ ಸೇವಾ ಸಂಸ್ಥೆಯ ನೂತನ ಶಾಖೆ ಜ. 26ರಂದು ಗೋಕರ್ಣದಲ್ಲಿ ಉದ್ಘಾಟನೆಗೊಳ್ಳಲಿದೆ.

ಅಮೆರಿಕದ ನ್ಯೂಯಾರ್ಕ್‌ನ ಸಿರಾಕ್ಯೂಸ್ ವಿವಿಯ ಜೈವಿಕ ವೈದ್ಯಕೀಯ ಮತ್ತು ರಾಸಾಯನಿಕ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ. ದಯಾಪ್ರಸಾದ ಕುಲಕರ್ಣಿ ಆರೋಗ್ಯ ಸೇವಾದ ಸಂಸ್ಥಾಪಕರು ಹಾಗೂ ನಿರ್ದೇಶಕರು. ಅವರ ಹುಟ್ಟೂರು ಗೋಕರ್ಣ. ಹೀಗಾಗಿ ತಾವೇ ಹುಟ್ಟುಹಾಕಿದ ಸಂಸ್ಥೆಯ ಶಾಖೆಯನ್ನು ಗೋಕರ್ಣದಲ್ಲಿ ಆರಂಭಿಸುವ ಮೂಲಕ ಗೋಕರ್ಣ ಹಾಗೂ ಸುತ್ತಮುತ್ತಲಿನ ಪ್ರದೇಶದ ಜನತೆಗೆ ಉಚಿತವಾಗಿ ಉನ್ನತ ವೈದ್ಯಕೀಯ ಚಿಕಿತ್ಸೆ ಕಲ್ಪಿಸುವ ಯೋಜನೆಗೆ ಚಾಲನೆ ನೀಡುತ್ತಿದ್ದಾರೆ.

25 ವರ್ಷಗಳ ಹಿಂದೆ ಅವರು ವೈದ್ಯಕೀಯ ವೃತ್ತಿಯನ್ನು ಶುರುಮಾಡಿದಾಗಿನಿಂದ ಈ ತನಕ ಯಾವುದೇ ರೋಗಿಯಿಂದ ಚಿಕಿತ್ಸಾ ವೆಚ್ಚ ಪಡೆಯದೆ ಉಚಿತವಾಗಿ ಚಿಕಿತ್ಸೆ ನೀಡುತ್ತಿರುವುದು ಇವರ ಹೆಗ್ಗಳಿಕೆ. ಮೊದಲು ಇವರು ಉಚಿತ ಚಿಕಿತ್ಸೆ ಆರಂಭಿಸಿದರು. ಆನಂತರ ತಾವೊಬ್ಬರೇ ಉಚಿತ ಚಿಕಿತ್ಸೆ ನೀಡುತ್ತಿದ್ದರೆ ವಿಶ್ವದ ಎಲ್ಲೆಡೆ ಅಗತ್ಯ ಇರುವವರಿಗೆ ವೈದ್ಯಕೀಯ ಸೇವೆ ನೀಡುವುದು ಕಷ್ಟ. ಅದೇ ಒಂದು ತಂಡವೇ ನಿರ್ಮಾಣವಾದರೆ ಎಲ್ಲೆಡೆ ಅತಿ ಹೆಚ್ಚು ಜನರಿಗೆ ಉಚಿತ ಚಿಕಿತ್ಸೆ ನೀಡಬಹುದು ಎಂದು ಬೇರೆ ಬೇರೆ ದೇಶಗಳ ವೈದ್ಯರು, ವೈದ್ಯಕೀಯ ಸಿಬ್ಬಂದಿಯನ್ನು ಕಲೆಹಾಕಿದರು. ಈಗ ಆರೋಗ್ಯ ಸೇವಾ ಸಂಸ್ಥೆಯಲ್ಲಿ ಉಚಿತ ಸೇವೆ ನೀಡುವ ವೈದ್ಯರು, ವೈದ್ಯಕೀಯ ಸಿಬ್ಬಂದಿಯ ಸಂಖ್ಯೆ ಸುಮಾರು 1 ಲಕ್ಷ ಸಮೀಪಿಸಿದೆ. ಈ ವೈದ್ಯರು ತಮ್ಮ ತಮ್ಮ ಆಸ್ಪತ್ರೆ ಅಥವಾ ಬೇರೆ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದು, ಕೆಲವರು ತಿಂಗಳಿಗೆ 2 ದಿನ, 5 ದಿನ, 10 ದಿನ ಉಚಿತವಾಗಿ ಆರೋಗ್ಯ ಸೇವಾ ಸಂಸ್ಥೆಯಲ್ಲಿ ಚಿಕಿತ್ಸೆ ನೀಡುತ್ತಾರೆ. ಹೀಗಾಗಿ ಆರೋಗ್ಯ ಸೇವಾ ವರ್ಷವಿಡಿ ಉಚಿತ ಚಿಕಿತ್ಸೆ ನೀಡಲು ಸಾಧ್ಯವಾಗಿದೆ.

ಭಾರತ, ಪೋಲೆಂಡ್, ನೇಪಾಳ, ಫಿಜಿ, ಮೆಕ್ಸಿಕೋ, ಹೈಟಿ, ರವಾಂಡಾ, ಕಾಂಗೋ, ನೈಜೀರಿಯಾ ಸೇರಿದಂತೆ 20 ದೇಶಗಳಲ್ಲಿ ಉಚಿತ ಆಸ್ಪತ್ರೆ ನಡೆಸುತ್ತಿದೆ. ವಿವಿಧ ದೇಶಗಳಲ್ಲಿ ಮೆಡಿಕಲ್ ಕ್ಯಾಂಪ್ ಸಂಘಟಿಸುವ ಮೂಲಕ ಇದುವರೆಗೆ 1 ಕೋಟಿಗೂ ಹೆಚ್ಚು ಜನರಿಗೆ ಉಚಿತ ಚಿಕಿತ್ಸೆ ನೀಡಿದೆ. ಅಮೆರಿಕ, ಇಂಗ್ಲೆಂಡ್, ಭಾರತ ಹಾಗೂ ವಿವಿಧ ದೇಶಗಳ 1 ಲಕ್ಷ ವೈದ್ಯರು, ವೈದ್ಯಕೀಯ ಸಿಬ್ಬಂದಿ ಉಚಿತ ಚಿಕಿತ್ಸೆ ನೀಡುವ ಆರೋಗ್ಯ ಸೇವಾ ತಂಡದಲ್ಲಿದ್ದಾರೆ. ಭಾರತದ ಅಸ್ಸಾಂ, ಮಣಿಪುರ, ನಾಗಾಲ್ಯಾಂಡ್, ಮಿಜೋರಾಂ ಮತ್ತಿತರ ರಾಜ್ಯಗಳಲ್ಲಿ ಆರೋಗ್ಯ ಸೇವಾ ನಿರಂತರವಾಗಿ ಉಚಿತ ಚಿಕಿತ್ಸೆ ನೀಡುತ್ತಿದೆ. ಮೆಡಿಕಲ್ ಯಾತ್ರಾ ಮೂಲಕ ತಜ್ಞ ವೈದ್ಯರು ಬೇರೆ ಬೇರೆ ದೇಶಗಳಿಗೆ ಹೋಗಿ ಚಿಕಿತ್ಸೆ ನೀಡುತ್ತಾರೆ.

ಜಗತ್ತಿನ ವಿವಿಧೆಡೆ ಆರೋಗ್ಯ ಸೇವಾ ಚಿಕ್ಕಪುಟ್ಟ ರೋಗಗಳಲ್ಲದೆ ಹೃದಯರೋಗ, ಶ್ವಾಸಕೋಶ ಕಾಯಿಲೆ, ಕ್ಯಾನ್ಸರ್, ಕಿಡ್ನಿ, ನರರೋಗಗಳಿಗೂ ಉಚಿತವಾಗಿ ಚಿಕಿತ್ಸೆ ನೀಡುತ್ತಿದೆ. ಬೆಂಗಳೂರಿನಲ್ಲಿ ಕಣ್ಣಿನ ಆಸ್ಪತ್ರೆ ತೆರೆದು ಉಚಿತ ಚಿಕಿತ್ಸೆ ನೀಡಲಾಗುತ್ತಿದೆ.

ಆರೋಗ್ಯ ಸೇವಾ ಈಗ ಆರೋಗ್ಯಸೇವೆಯ ಜತೆಗೆ ಶಿಕ್ಷಣ, ಸಾಮಾಜಿಕ ಅಭಿವೃದ್ಧಿ, ಕೌಶಲ್ಯಾಭಿವೃದ್ಧಿ, ಮಹಿಳೆಯರಿಗೆ ಉದ್ಯೋಗ ಮತ್ತಿತರ ಕ್ಷೇತ್ರಗಳಿಗೂ ತೆರೆದುಕೊಂಡಿದೆ. ಎಲ್ಲ ಸೇರಿಸಿ ಬಿಲಿಯನ್ ಹೋಪ್ಸ್ ಹೆಸರಿನಲ್ಲಿ ಸಂಸ್ಥೆ ರೂಪಿಸಿದ್ದಾರೆ. ರೈತರಿಗೆ ಕರಕುಶಲ ಕಲೆ ತರಬೇತಿ ನೀಡಿ, ಕೃಷಿ ಉತ್ಪನ್ನ ಹಾಗೂ ಕರಕುಶಲ ಉತ್ಪನ್ನಗಳನ್ನು ನೇರವಾಗಿ ಖರೀದಿಸಿ ಮಾರಾಟ ಮಾಡುವ ಯೋಜನೆ ರೂಪಿಸಲಾಗಿದೆ. ಇದರಿಂದ ರೈತರಿಗೆ ಅಧಿಕ ಲಾಭ ದೊರೆಯುವ ಜತೆಗೆ ಆ ಕಲೆಗಳು ಉಳಿದಂತಾಗುತ್ತದೆ. ಈ ವಸ್ತುಗಳ ಮಾರಾಟಕ್ಕಾಗಿಯೇ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಒಂದು ಮಳಿಗೆಯನ್ನೂ ಟೆಂಡರ್ ಮೂಲಕ ಪಡೆದಿದ್ದಾರೆ.

ಅತ್ಯುತ್ತಮ ವಾಗ್ಮಿಯಾಗಿರುವ ಡಾ. ದಯಾಪ್ರಸಾದ ಕುಲಕರ್ಣಿ ಹಲವಾರು ಅಂತಾರಾಷ್ಟ್ರೀಯ ಸಮ್ಮೇಳನ ಸಂಘಟಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ, ಭಾರತೀಯ ಮತ್ತು ಅಮೇರಿಕನ್ ವಿಶ್ವವಿದ್ಯಾಲಯಗಳಾದ್ಯಂತ 300 ವಿದ್ಯಾರ್ಥಿಗಳು, ನಾವೀನ್ಯಕಾರರು ಮತ್ತು ಉದ್ಯಮಿಗಳು ಮಾನವೀಯ ಆರೋಗ್ಯ ರಕ್ಷಣಾ ತಂತ್ರಜ್ಞಾನಗಳನ್ನು ವಿನ್ಯಾಸಗೊಳಿಸಿದ್ದಾರೆ ಮತ್ತು ಅಭಿವೃದ್ಧಿಪಡಿಸಿದ್ದಾರೆ.ನನ್ನ ಚಿಕಿತ್ಸೆ ಮಾರಾಟಕ್ಕಿಲ್ಲ ಎಂಬ ಧ್ಯೇಯದೊಂದಿಗೆ ಉಚಿತ ಚಿಕಿತ್ಸೆ ನೀಡಲು ಆರಂಭಿಸಿದ ನನಗೆ ನನ್ನ ಇಡಿ ಕುಟುಂಬ, ಮಿತ್ರರು, ಆಪ್ತರು, ದೇಶ ವಿದೇಶಗಳ ವೈದ್ಯರು ಬೆಂಬಲವಾಗಿ ನಿಂತಿರುವುದರಿಂದ ಆರೋಗ್ಯ ಸೇವಾ ಯಶಸ್ಸು ಗಳಿಸಿದೆ. ಕೋಟಿಗೂ ಹೆಚ್ಚು ಜನರಿಗೆ ಉಚಿತ ಆರೋಗ್ಯ ಸೇವೆ ನೀಡಿದ ಸಾರ್ಥಕ ಭಾವ ನಮಗಿದೆ ಎಂದು ಆರೋಗ್ಯ ಸೇವಾ ಸಂಸ್ಥೆ ಸಂಸ್ಥಾಪಕ, ನಿರ್ದೇಶಕ ಡಾ. ದಯಾಪ್ರಸಾದ್ ಕುಲಕರ್ಣಿ ತಿಳಿಸಿದ್ದಾರೆ.ಸಾರ್ವತ್ರಿಕ ಶ್ಲಾಘನೆ

ರೆಕ್ಸ್ ಕರ್ಮವೀರ್ ಪ್ರಶಸ್ತಿ, ಬೆಂಗಳೂರು ಹೀರೋಸ್, ದಿ ಬರ್ನಾರ್ಡ್ ಬಿ. ಬ್ರೆಗ್ಮನ್ ಜೀವಮಾನ ಸಾಧನೆ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗೆ ಪಾತ್ರರಾಗಿರುವ ಡಾ. ದಯಾಪ್ರಸಾದ ಕುಲಕರ್ಣಿ ಈಗ ಹುಟ್ಟೂರಿನಲ್ಲಿ ತಮ್ಮ ಸಂಸ್ಥೆಯ ಮೂಲಕ ಉಚಿತ ವೈದ್ಯಕೀಯ ಸೇವೆ ನೀಡಲು ಮುಂದಾಗಿದ್ದಾರೆ. ಡಾ. ದಯಾಪ್ರಸಾದ್ ಕಾರ್ಯಕ್ಕೆ ಸಾರ್ವತ್ರಿಕ ಶ್ಲಾಘನೆ ವ್ಯಕ್ತವಾಗಿದೆ.ಸ್ವಯಂಸ್ಫೂರ್ತಿಯಿಂದ ನೆರವು:

ದೇಶದ ಬೇರೆ ಬೇರೆ ಎನ್‌ಜಿಒಗಳು ತಾವು ಮಾಡುವ ಕೆಲಸಕ್ಕೆ ವಿದೇಶದಿಂದ ಹಣ ಪಡೆದರೆ, ಆರೋಗ್ಯ ಸೇವಾ ಭಾರತದಿಂದ ಆಫ್ರಿಕಾದಲ್ಲಿ ನಡೆಸುವ ಉಚಿತ ಚಿಕಿತ್ಸೆಗೆ ಆರ್ಥಿಕ ನೆರವು ನೀಡಲಾಗುತ್ತದೆ. ಆರೋಗ್ಯ ಸೇವಾ ಸಂಸ್ಥೆ ನಡೆಸುತ್ತಿರುವ ಸಮಾಜಮುಖಿ ಕಾರ್ಯ ನೋಡಿ ರೋಟರಿ ಕ್ಲಬ್, ದಾನಿಗಳು ಸ್ವಯಂಸ್ಫೂರ್ತಿಯಿಂದ ನೆರವು ನೀಡುತ್ತಿರುವುದು ವಿಶೇಷವಾಗಿದೆ.