ನಿಜಾಮರ ಆಳ್ವಿಕೆಯಲ್ಲಿದ್ದ ಅಂದಿನ ಹೈದರಾಬಾದ್-ಕರ್ನಾಟಕ ಭಾಗವು ಒಂದು ವರ್ಷ ಒಂದು ತಿಂಗಳು ವಿಳಂಬವಾಗಿ, ಅಂದರೆ 1948ರ ಸೆ.17ರಂದು ಸ್ವತಂತ್ರಗೊಂಡು ಭಾರತದ ಒಕ್ಕೂಟಕ್ಕೆ ವಿಲೀನವಾಯಿತು. ಇದಕ್ಕಾಗಿ ಹೋರಾಟಗಾರರು ಸರ್ವಸ್ವವನ್ನೂ ಸಮರ್ಪಿಸಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ, ಖಾತೆ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಹೇಳಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ನಿಜಾಮರ ಆಳ್ವಿಕೆಯಲ್ಲಿದ್ದ ಅಂದಿನ ಹೈದರಾಬಾದ್-ಕರ್ನಾಟಕ ಭಾಗವು ಒಂದು ವರ್ಷ ಒಂದು ತಿಂಗಳು ವಿಳಂಬವಾಗಿ, ಅಂದರೆ 1948ರ ಸೆ.17ರಂದು ಸ್ವತಂತ್ರಗೊಂಡು ಭಾರತದ ಒಕ್ಕೂಟಕ್ಕೆ ವಿಲೀನವಾಯಿತು. ಇದಕ್ಕಾಗಿ ಹೋರಾಟಗಾರರು ಸರ್ವಸ್ವವನ್ನೂ ಸಮರ್ಪಿಸಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ, ಖಾತೆ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಹೇಳಿದರು.

ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ (ಹೈದರಾಬಾದ್‌ ಕರ್ನಾಟಕ ವಿಮೋಚನೆ) ಅಂಗವಾಗಿ, ಗುರುವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗ ತನ್ನದೇ ಆದ ಇತಿಹಾಸ, ವಿಶೇಷತೆ ಹೊಂದಿದೆ. ಭಾರತವು 1947ರ ಆಗಸ್ಟ್ 15 ರಂದು ಸ್ವಾತಂತ್ರ್ಯಗೊಂಡರೆ, ನಿಜಾಮರ ಆಳ್ವಿಕೆಯಲ್ಲಿದ್ದ ಅಂದಿನ ಹೈದರಾಬಾದ್-ಕರ್ನಾಟಕ ಭಾಗವು 1948ರ ಸೆ.17ರಂದು ಸ್ವತಂತ್ರಗೊಂಡು ಭಾರತದ ಒಕ್ಕೂಟಕ್ಕೆ ವಿಲೀನವಾಯಿತು ಎಂದರು.

ಅಂದಿನ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಹಾಗೂ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪೊಲೀಸ್ ಕಾರ್ಯಾಚರಣೆಯಿಂದಾಗಿ ಈ ಭಾಗ ಭಾರತದ ಒಕ್ಕೂಟಕ್ಕೆ ಸೇರಿತು. ಕಲ್ಯಾಣ ಕರ್ನಾಟಕ ಭಾಗದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ವಾಮಿ ರಾಮಾನಂದ ತೀರ್ಥರು, ಪಂ. ತಾರಾನಾಥರು, ವಿದ್ಯಾಧರ ಗುರೂಜಿ, ಸರ್ದಾರ್ ಶರಣಗೌಡ ಇನಾಂದಾರ್, ಚಂದ್ರಶೇಖರ ಪಾಟೀಲ ಮುಂತಾದ ಹಲವಾರು ಹೋರಾಟಗಾರರು ಚಳವಳಿ ಮಾಡಿ ಈ ಭಾಗವನ್ನು ಭಾರತದ ಒಕ್ಕೂಟಕ್ಕೆ ಸೇರಿಸಲು ತಮ್ಮ ಸರ್ವಸ್ವವನ್ನೂ ಸಮರ್ಪಿಸಿದ್ದಾರೆ ಎಂದು ಸ್ಮರಿಸಿದರು.

ಇನ್ನು, ಈ ಭಾಗಕ್ಕೆ ಈ ವಿಶೇಷ ಸ್ಥಾನಮಾನ ದೊರಕಿಸಲು ಹಲವು ಹೋರಾಟಗಾರರ ಶ್ರಮವಿದೆ. ವೈಜನಾಥ ಪಾಟೀಲ, ವಿಶೇಷವಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರ ದೂರದೃಷ್ಟಿಯ ಫಲವಾಗಿ ಸಂವಿಧಾನದಲ್ಲಿ ಹಿಂದುಳಿದ ಪ್ರದೇಶಗಳಿಗಾಗಿ ಅಳವಡಿಸಿದ ಈ ಅಂಶದಿಂದಾಗಿ, ಅಂದಿನ ಕೇಂದ್ರ ಸಚಿವ ಡಾ.ಮಲ್ಲಿಕಾರ್ಜುನ್ ಖರ್ಗೆ ಅವರ ಪ್ರಯತ್ನದ ಹಾಗೂ ಇಚ್ಛಾಶಕ್ತಿಯ, ಜನರ ಕಳಕಳಿ ಫಲವಾಗಿ ಸಂವಿಧಾನ ತಿದ್ದುಪಡಿ ಕಲಂ 371(ಜೆ) ಜಾರಿಯಾಗಿದ್ದು, ಈ ಭಾಗದ ಜನತೆಗೆ, ಕಟ್ಟಕಡೆಯ ವ್ಯಕ್ತಿಗೆ ಅಪಾರ ಲಾಭ ಹಾಗೂ ಕೊಡುಗೆ ನೀಡಿದೆ ಎಂದರು.

ಈ ಕಾನೂನಿನ ನಿಯಮಗಳಿಂದಾಗಿ ಕಲ್ಯಾಣ ಕರ್ನಾಟಕ ಭಾಗದ ಪ್ರತಿ ಮಗುವಿಗೆ, ಇಲ್ಲಿ ಜನಿಸಿದವರಿಗೆ ವೃತ್ತಿಯಲ್ಲಿ ಮೀಸಲು, ರಾಜ್ಯದಲ್ಲಿ ವಿವಿಧ ಸರ್ಕಾರಿ ನೌಕರಿಯಲ್ಲಿ ಶೇ.8ರಷ್ಟು ಮೀಸಲು ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರತಿಶತ 75 ರಿಂದ 85 ರಷ್ಟು ಮೀಸಲು ಲಾಭ ದೊರಕಿದೆ. ಸುಮಾರು 11000 ಎಂ.ಬಿ.ಬಿ.ಎಸ್, ವೈದ್ಯರಾಗಿದ್ದಾರೆ. 30 ಸಾವಿರಕ್ಕೂ ಹೆಚ್ಚು ಇಂಜಿನೀಯರ್ ಆಗಿದ್ದಾರೆ. ಸುಮಾರು 1 ಲಕ್ಷ ಜನ ಸರ್ಕಾರಿ ನೌಕರಿ ಪಡೆದುಕೊಂಡಿದ್ದಾರೆ. ಈವರೆಗೆ ರಾಜ್ಯ ಸರ್ಕಾರ ತಲಾ 5 ಸಾವಿರ ರುಗಳಂತೆ ಅನುದಾನ ಒದಗಿಸಿದ್ದು, ಈ ಕಾನೂನು ಈ ಭಾಗದ ಜನರಿಗೆ, ಯುವಜನಾಂಗಕ್ಕೆ ಶ್ರೀರಕ್ಷೆಯಾಗಿ ಪರಿಣಮಿಸಿದೆ ಎಂದರು.

ಜನಹಿತಕ್ಕಾಗಿ ಗ್ಯಾರಂಟಿ ಯೋಜನೆ: ರಾಜ್ಯ ಸರ್ಕಾರವು ಪ್ರಗತಿಪರ ಕೆಲಸಗಳನ್ನು ಮಾಡುತ್ತಿದೆ. ಸಂಕುಚಿತ ಮನೋಭಾವ ಬೇಡವೆಂದ ಅವರು, ಬಡ ಜನರ ಹಾಗೂ ಸಾಮಾನ್ಯ ಜನರ ಹಿತ ಕಾಪಾಡಲು ಪಂಚಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಬಡವರಪರ ಆಡಳಿತ ನೀಡಿದೆ. ಪ್ರತಿ ವರ್ಷ ₹50 ಸಾವಿರ ಕೋಟಿ ಮನೆ ಬಾಗಿಲಿಗೆ ತಲುಪಿಸುತ್ತಿದೆ. ರಾಜ್ಯ ಸರ್ಕಾರವು 30 ಸಾವಿರ ಹುದ್ದೆಗಳ ಭರ್ತಿಗೆ ಸಂಕಲ್ಪ ಮಾಡಿದ್ದು, ಈ ಭಾಗದ ಸಮೃದ್ಧಿಗಾಗಿ ಕಳಕಳಿ ಹೊಂದಿದೆ ಎಂದರು.ರೈತರಿಗೆ ಆತಂಕ ಬೇಡ: ತೀವ್ರ ಬರದ ಹಿನ್ನೆಲೆ ರೈತರು ಆತಂಕಪಡುವ ಅವಶ್ಯಕತೆ ಇಲ್ಲ ಎಂದ ಅವರು, ಈಗಾಗಲೇ ಜಿಲ್ಲೆಯ ಶಹಾಪುರ ತಾಲೂಕನ್ನು ಬರಪೀಡಿತವೆಂದು ಘೋಷಿಸಲಾಗಿದ್ದು, ಯಾದಗಿರಿ, ಗುರುಮಠಕಲ್, ಸುರಪುರ, ವಡಗೇರಾ ತಾಲೂಕುಗಳೂ ಶೀಘ್ರ ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲು ನಿರ್ಧರಿಸಲಾಗಿದೆ. ರೈತರೊಂದಿಗೆ ಸರ್ಕಾರ ಇದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು ಮತ ಭೇದವಿಲ್ಲದೆ ಪ್ರಾಮಾಣಿಕ ಕೆಲಸ ನಿರ್ವಹಿಸಲಿದ್ದಾರೆ ಎಂದರು.

ಸಚಿವರು ಇದೇ ಸಂದರ್ಭದಲ್ಲಿ ವಿವಿಧ ಕವಾಯತು ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ಜಿಲ್ಲಾಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ, ಅಪರ ಜಿಲ್ಲಾಧಿಕಾರಿ ರಮೇಶ್ ಕೋಲಾರ, ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಧರಣೇಶ್, ಸಹಾಯಕ ಆಯುಕ್ತ ಶ್ರೀಧರ್ ಗೋಟುರ್ ಸೇರಿದಂತೆ ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.