ಸಾರಾಂಶ
ಜಿಲ್ಲಾ ಆಟದ ಮೈದಾನದಲ್ಲಿ ಗಣ ರಾಜ್ಯೋತ್ಸವ । ಸಚಿವರಿಂದ ಧ್ವಜಾರೋಹಣ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುನಮ್ಮ ದೇಶ ಸ್ವಾತಂತ್ರ್ಯ ಭಾರತ ಎಂದು ಹೆಮ್ಮೆ ಪಡಲು ಹಾಗೂ ಗಣ ರಾಜ್ಯವಾಗಿ ರೂಪುಗೊಳ್ಳಲು ಆಗಿರುವ ತ್ಯಾಗ, ಬಲಿದಾನ ಗಳಿಗೆ ಲೆಕ್ಕವೇ ಇಲ್ಲ. ನಮ್ಮ ಪೂರ್ವಜರು ನಮ್ಮ ಭವಿಷ್ಯಕ್ಕಾಗಿ ತಮ್ಮ ರಕ್ತ, ಬೆವರುಗಳನ್ನು ಹರಿಸಿ ಸ್ಥಾಪಿಸಿದ ನಮ್ಮ ನೆಲದಲ್ಲಿ ಭಾರತೀಯ ಪ್ರಜೆಗಳಾದ ನಾವು ಸ್ವಾತಂತ್ರ್ಯದ ಉಸಿರಿನೊಂದಿಗೆ ಶಾಂತಿ ಹಾಗೂ ಸೌಹಾರ್ದಯುತ ಬದುಕಿನ ಅನುಭವವನ್ನು ಪಡೆಯುತ್ತಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತ ಭಾನುವಾರ ಏರ್ಪಡಿಸಿದ್ದ ಗಣ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾ ರೋಹಣ ನೆರವೇರಿಸಿ ಮಾತನಾಡಿದ ಅವರು, ವಿವಿಧತೆಯಲ್ಲಿ ಏಕತೆ ಸಾರುವ ನಮ್ಮ ದೇಶದ ಸಂಸ್ಕೃತಿಯನ್ನು ಕಾಪಾಡು ವುದು ಮತ್ತು ಈ ದೇಶದ ನೆಲ, ಜಲ, ಹಾಗೂ ನೈಸರ್ಗಿಕ ಸಂಪತ್ತನ್ನು ಕಾಪಾಡುವ ನಿಟ್ಟಿನಲ್ಲಿ ನಮ್ಮ ರಾಷ್ಟ್ರಕ್ಕೆ ಪ್ರಬಲವಾದ ಕಾನೂನು ವ್ಯವಸ್ಥೆ ಅಗತ್ಯತೆ ಸ್ವಾತಂತ್ರ್ಯ ನಂತರದಲ್ಲಿ ಸೃಷ್ಟಿಯಾಗಿತ್ತು ಎಂದರು.ನಮ್ಮ ದೇಶದ ನಾಗರಿಕರಿಗೆ "ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು " ಕಲ್ಪಿಸಲು ಪ್ರಬಲವಾದ ಲಿಖಿತ ಸಂವಿಧಾನದ ಅವಶ್ಯಕತೆ ಮನಗಂಡು ಸ್ವಾತಂತ್ರ್ಯ ನಂತರದಲ್ಲಿ ದೇಶದ ಮೊದಲ ಪ್ರಧಾನಿಯಾಗಿದ್ದ ಪಂಡಿತ್ ಜವಾಹರಲಾಲ್ ನೆಹರು ಅವರು, ಡಾ. ಬಿ.ಆರ್. ಅಂಬೇಡ್ಕರ್ ರವರನ್ನು ಮುಖ್ಯಸ್ಥರನ್ನಾಗಿ ಮಾಡಿ ಸಂವಿಧಾನ ಕರಡು ರಚನಾ ಸಮಿತಿ ರಚಿಸಿದರು.
ನಮ್ಮ ಸಂವಿಧಾನ ರಚನೆಯಾದ ಸಂದರ್ಭದಲ್ಲಿದ್ದ ನಮ್ಮ ದೇಶದ ಸ್ಥಿತಿ ಅವಲೊಕಿಸಿದರೆ ನೂರಾರು ವರ್ಷಗಳ ಪರಕೀಯರ ಆಡಳಿತದಿಂದ ನಲುಗಿ ಹೋಗಿ ಆಗಷ್ಟೆ ಸ್ವಾತಂತ್ರ್ಯ ಭಾರತದ ಉದಯವಾಗಿತ್ತು, ಆ ಸಂದರ್ಭದಲ್ಲಿ ದೇಶದಲ್ಲಿ ತೀವ್ರ ರೀತಿಯ ಧಾರ್ಮಿಕ ಸಂಘರ್ಷ ಮನೆ ಮಾಡಿತ್ತು. ದೇಶದ ನಾಗರಿಕರ ಸಾಕ್ಷರತಾ ಪ್ರಮಾಣ ಕೇವಲ ಶೇ.16ರಷ್ಟಿತ್ತು. ದೇಶದ ಬಹುಭಾಗ ಜನರು ತೀವ್ರ ಆಹಾರ ಕೊರತೆ ಎದುರಿಸುತ್ತಿದ್ದರು.ಉತ್ತರದ ಕಾಶ್ಮೀರದಿಂದ ದಕ್ಷಿಣದ ತಮಿಳುನಾಡುವರೆಗೂ ಹಾಗೂ ಪಶ್ಚಿಮದ ಗುಜರಾತ್ ನಿಂದ ಪೂರ್ವದ ಅಸ್ಸಾಂ ವರೆಗೂ ವಿವಿಧ ಧಾರ್ಮಿಕ ಆಚರಣೆಯುಳ್ಳ ದೊಡ್ಡ ಭೂಭಾಗಗಳು, ವಿಭಿನ್ನ ಆಹಾರ ಪದ್ಧತಿ ಮತ್ತು ಸಾಂಸ್ಕೃತಿಕ ಹಿನ್ನೆಲೆ ಯುಳ್ಳ ಹಲವು ಬುಡಕಟ್ಟು ಪ್ರದೇಶಗಳನ್ನೂ ಒಳಗೊಂಡ ನಮ್ಮ ದೇಶಕ್ಕೆ ಸರಿಹೊಂದುವ ಸಂವಿಧಾನದ ಅವಶ್ಯಕತೆ ಇದ್ದ ಕಾಲಘಟ್ಟದಲ್ಲಿ ವಿಶ್ವದ ಅತಿದೊಡ್ಡ ಲಿಖಿತ ಸಂವಿಧಾನವನ್ನು ಅತ್ಯಂತ ಸಮರ್ಪಕವಾಗಿ ರಚನೆ ಮಾಡಿದ್ದು ಡಾ. ಬಿ.ಆರ್. ಅಂಬೇಡ್ಕರ್ ನೇತೃತ್ವದ ಸಮಿತಿಯ ಅತಿ ದೊಡ್ಡ ಸಾಧನೆ. ಹಲವು ದೇಶಗಳ ಸಂವಿಧಾನ ಅಧ್ಯಯನ ಮಾಡಿ ಅವುಗಳ ಉತ್ತಮ ಅಂಶಗಳನ್ನು ನಮ್ಮ ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಭಾರತವನ್ನು ಒಂದು ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರ ವಾಗಿಸಲು ಮತ್ತು ಎಲ್ಲಾ ನಾಗರಿಕರಿಗೆ ಸಮಾನ ಹಕ್ಕುಗಳು ಮತ್ತು ಅವಕಾಶ ಒದಗಿಸಲು ಸಂವಿಧಾನ ಸಹಾಯ ಮಾಡಿದೆ.
ನಮ್ಮ ಸಂವಿಧಾನದ ಪೀಠಿಕೆಯಲ್ಲಿ ಹೇಳಿರುವಂತೆ ಭಾರತ ಸಾರ್ವಭೌಮ, ಸಮಾಜವಾದಿ ಹಾಗೂ ಜಾತ್ಯತೀತ ತತ್ವ ಗಳನ್ನು ಒಳಗೊಂಡ ಗಣರಾಜ್ಯವಾಗಿದೆ. ನಮ್ಮ ದೇಶದ ಹಾಗೂ ಯಾವುದೇ ಚುನಾಯಿತ ರಾಜ್ಯದ ಬಹುದೊಡ್ಡ ಜವಾಬ್ದಾರಿ ತನ್ನ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ನ್ಯಾಯ ನೀಡುವುದು. ಒಂದು ಧರ್ಮವನ್ನು ಪ್ರತಿಪಾದಿಸದೇ ಎಲ್ಲರ ನಂಬಿಕೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡುವುದು, ಸ್ಥಾನಮಾನ ಹಾಗೂ ಅವಕಾಶಗಳ ಸಮಾನತೆ ದೊರೆಯುವಂತೆ ಮಾಡು ವುದು ದೇಶದ ಏಕತೆ ಹಾಗೂ ಸಮಗ್ರತೆ ದೃಷ್ಠಿಯಿಂದ ಸಹೋದರತೆ ಮೂಡಿಸುವುದೇ ಆಗಿದೆ ಎಂದರು.ಸಂವಿಧಾನದ ಬಹಳ ಮುಖ್ಯ ಅಂಶವಾದ ಸಾಮಾಜಿಕ-ಆರ್ಥಿಕ ಸಮಾನತೆಯನ್ನು ತನ್ನ ಎಲ್ಲಾ ಪ್ರಜೆಗಳಿಗೆ ನೀಡುವ ದೃಷ್ಟಿ ಯಿಂದ ನಮ್ಮ ಸರ್ಕಾರ ಸಿದ್ದರಾಮಯ್ಯಅವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ನಂತರ ಸಮಾನತೆ ಆಶಯವನ್ನು ಸಾರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಸಮರ್ಪಕವಾಗಿ ಅನುಷ್ಠಾನ ಮಾಡಲಾಗುತ್ತಿದೆ. ಜಾತ್ಯತೀತ ಆಶಯಗಳನ್ನು ನಮ್ಮ ಜಿಲ್ಲೆಯ ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಶಾಂತಿಯುತವಾಗಿ ದತ್ತ ಜಯಂತಿ, ಉರುಸ್ ಆಚರಣೆ, ಸಾರ್ವಜನಿಕ ಗಣಪತಿ ಉತ್ಸವ, ಹಾಗೂ ಕ್ರಿಸ್‌ಮಸ್ ಆಚರಣೆಯಂತಹ ಧಾರ್ಮಿಕ ಕಾರ್ಯ ಕ್ರಮಗಳು ಸಂಪನ್ನಗೊಳಿಸಿರುವುದು ಹಾಗೂ ಸಮಾಜದಲ್ಲಿ ಸಹೋದರತೆ ಭಾವನೆ ಗಟ್ಟಿಗೊಳಿಸುವ ಪ್ರಕ್ರಿಯೆಯಾಗಿದೆ ಎಂದು ಹೇಳಿದರು.
ಗಣರಾಜ್ಯೋತ್ಸವ ಕೇವಲ ಸಂಭ್ರಮದ ದಿನ ಮಾತ್ರವಲ್ಲ, ಪ್ರತಿ ಭಾರತೀಯರ ಪಾಲಿಗೂ ಆತ್ಮಾವಲೋಕನದ ದಿನ ಹಾಗೂ ಸಂಕಲ್ಪದ ಸುದಿನವೂ ಹೌದು. ಭೂತಕಾಲದ ಪರಂಪರೆ, ವರ್ತಮಾನದ ಸಮಸ್ಯೆ- ಸಂಕಟ ಮತ್ತು ಭವಿಷ್ಯತ್ತಿನ ಕನಸು - ಈ ತ್ರಿಕಾಲದ ಅರಿವು, ಸ್ಪಷ್ಟತೆ ಪ್ರತಿ ಪ್ರಜೆಗೂ ಮುಖ್ಯ. ಆ ತ್ರಿಕಾಲ ಜ್ಞಾನವೇ ಬದುಕಿನ ಯಶಸ್ಸು, ದೇಶದ ಸುಭಿಕ್ಷೆ- ಸಮೃದ್ಧಿಗೆ ದಾರಿ ದೀಪ. ಪರಂಪರೆ ಹೆಜ್ಜೆಗಳನ್ನು ಅನುಸರಿಸಿ ನಡೆಯುವುದು ನಾಗರಿಕರ ಆದ್ಯ ಕರ್ತವ್ಯ. ದೇಶದ ಘನತೆ, ಸಾರ್ವಭೌಮತೆ ಎತ್ತಿ ಹಿಡಿಯುವುದು ಸರ್ವರ ಹೊಣೆಗಾರಿಕೆ.. ಅದನ್ನು ನಾವು ಮೊದಲು ಮನಗಾಣಬೇಕು ಎಂದು ಕರೆ ನೀಡಿದರು.ಭಾರತದ ವೈಶಿಷ್ಟ್ಯಗಳು ನೂರಾರು. ಶಾಂತಿ ನಮ್ಮ ಮಂತ್ರ, ಸಹನೆ ನಮ್ಮ ಶಕ್ತಿ, ಸೌಹಾರ್ದತೆ ನಮ್ಮ ಹುಟ್ಟುಗುಣ, ಕೂಡಿ ಬಾಳುವುದು ನಮ್ಮ ಪರಂಪರೆ, ಅನೇಕತೆಯಲ್ಲಿ ಏಕತೆ ನಮ್ಮ ವಿಶೇಷ, ಸಮನ್ವಯತೆ ನಮ್ಮ ಸಹಜತೆ, ಸರ್ವಧರ್ಮ ಸಮ ಭಾವ ನಮ್ಮ ಶ್ರೇಷ್ಠತೆ, ಎಲ್ಲರ ಒಳಗೆ ಒಂದಾಗುವುದು. ನಮ್ಮತನ, ಸಕಲ ಜೀವಾತ್ಮಗಳನ್ನು ಪ್ರೀತಿಸುವುದು ನಮ್ಮ ಔದಾರ್ಯ. ಈ ಎಲ್ಲಾ ಅಂಶಗಳು ನಮ್ಮ ಸಂವಿಧಾನದಲ್ಲಿ ಅಳವಡಿಸಿರುವುದು "ನಮ್ಮ ಹೆಮ್ಮೆ. ನಮ್ಮ ಸಂವಿಧಾನ " ಹಾಗಾಗಿಯೇ ಇಂದಿನ ಗಣರಾಜ್ಯೋತ್ಸವ ಆಚರಣಾ ಕಾರ್ಯಕ್ರಮ ಎಂದರು.
ಶಾಸಕ ಎಚ್.ಡಿ. ತಮ್ಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್, ಸದಸ್ಯರಾದ ಎಸ್.ಎಲ್. ಭೋಜೇಗೌಡ, ಸಿ.ಟಿ. ರವಿ, ಭದ್ರಾ ಕಾಡಾ ಅಧ್ಯಕ್ಷ ಡಾ. ಅಂಶುಮಂತ್, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಬಿ.ಎಚ್. ಹರೀಶ್, ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್ ಅಹಮದ್, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ಜಿಪಂ ಸಿಇಒ ಕೀರ್ತನಾ ಉಪಸ್ಥಿತರಿದ್ದರು. 26 ಕೆಸಿಕೆಎಂ 1ಚಿಕ್ಕಮಗಳೂರಿನ ಜಿಲ್ಲಾ ಆಟದ ಮೈದಾನದಲ್ಲಿ ಭಾನುವಾರ ನಡೆದ ಗಣ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತು ವಾರಿ ಸಚಿವ ಕೆ.ಜೆ. ಜಾರ್ಜ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ತುಕಡಿಗಳಿಂದ ಗೌರವ ಸ್ವೀಕರಿಸಿದರು.