ಸಾರಾಂಶ
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಪ್ರಸಕ್ತ ಸಾಲಿನ ಕಬ್ಬಿಗೆ 4,500 ರು. ದರ ನಿಗದಿ, ಎಂ. ಎಸ್. ಸ್ವಾಮಿನಾಥನ್ ವರದಿ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ನಗರದಲ್ಲಿ ರಸ್ತೆ ತಡೆ ಚಳುವಳಿ ನಡೆಸಲಾಯಿತು.ಸಂತೇಮರಹಳ್ಳಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಬಳಿಯ ದೊಡ್ಡರಾಯ ಪೇಟೆ ಗೇಟ್ ಹತ್ತಿರ ಜಮಾಯಿಸಿದ ಪ್ರತಿಭಟನಾಕಾರರು ಕೆಲ ಕಾಲ ರಸ್ತೆ ತಡೆ ಚಳುವಳಿ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಧಿಕ್ಕಾರ ಕೂಗುತ್ರಾ ಪ್ರತಿಭಟನೆ ನಡೆದಸಿದರು.
ಈ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಆ. 15 ರಂದು ದೇಶಕ್ಕೆ ಸ್ವತಂತ್ರ ಬಂದಿದ್ದರೂ ರೈತರ ಪಾಲಿಗೆ ವೈಜ್ಞಾನಿಕ ಬೆಲೆ ನಿಗದಿಗೆ ಯಾವುದೇ ಸ್ವಾತಂತ್ರ‍್ಯಇಲ್ಲ ಎಂದು ಆರೋಪಿಸಿದರು.ಪ್ರಸಕ್ತ ಸಾಲಿನ ಪ್ರತಿ ಟನ್ ಕಬ್ಬಿಗೆ ₹4500 ನಿಗದಿ ಮಾಡಬೇಕು... ಕಟಾವು ಮತ್ತು ಸಾಗಾಣಿಕೆಯನ್ನು ಸಕ್ಕರೆ ಕಾರ್ಖಾನೆಗಳು ಬರಿಸಬೇಕು... ದ್ವಿಪಕ್ಷೀಯ ಒಪ್ಪಂದ ಪತ್ರವನ್ನು ಜಾರಿ ಮಾಡಬೇಕು... ಸಕ್ಕರೆ ಕಾರ್ಖಾನೆಗಳಲ್ಲಿ ಇಳುವರಿಯ ಮೋಸ ತಪ್ಪಿಸಲು ರೈತರು ಹಾಗೂ ತಜ್ಞರ ಸಮಿತಿ ರಚಿಸಬೇಕು... ತೂಕದಲ್ಲಿ ಮೋಸ ತಪ್ಪಿಸಲು ಸಕ್ಕರೆ ಕಾರ್ಖಾನೆಗಳ ಮುಂದೆ ತೂಕದ ಯಂತ್ರ ಅಳವಡಿಸಬೇಕು.. ಎಂದು ಆಗ್ರಹಿಸಿದರು.
ಕಳೆದ ಸಾಲಿನ ₹950 ಕೋಟಿ ಕಬ್ಬಿನ ಉಪ ಉತ್ಪನ್ನಗಳ ಬಾಕಿಯನ್ನು ಸರ್ಕಾರ ತಕ್ಷಣ ನೀಡಬೇಕು... ಒಂದು ಗಂಟೆ ಪಾರ್ಲಿಮೆಂಟಿನ ಅಧಿವೇಶ ನಡೆದರೆ ಎರಡುವರೆ ಕೋಟಿ ರು. ಖರ್ಚಾಗುತ್ತದೆ. ಶಾಸಕರಿಗೆ 400 ರು. ರಿಚಾರ್ಜ್ ಮಾಡಿದರೆ ಒಂದು ತಿಂಗಳು ಫೋನಿನಲ್ಲಿ ಮಾತನಾಡಬಹುದು. ಆದರೆ 20 ಸಾವಿರ ಟೆಲಿಫೋನ್ ಬಿಲ್ ಎಂದು ನೀಡಲಾಗುತ್ತಿದೆ ಎಂದರು.ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡದ ಕೇಂದ್ರ ಮತ್ತು ರಾಜ್ಯ ಸರ್ಕಾರ ಮನಸೋ ಇಚ್ಚೆ ತಮಗೆ ಬೇಕಾದ ರೀತಿ ಸಂಬಳ ಸಾರಿಗೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ರಾಜ್ಯದಲ್ಲಿ ರಸಗೊಬ್ಬರದ ಪೂರೈಕೆ ರಾಜಕಾರಣವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಹೆಸರಲ್ಲಿ ರಾಜಕೀಯ ಮಾಡುತ್ತೇವೆ. ರಸ ಗೊಬ್ಬರದ ಸಮರ್ಪಕ ಪೂರೈಕೆಯು ಸರ್ಕಾರಗಳ ಜವಾಬ್ದಾರಿಯಾಗಿದ್ದು ಯಾವುದೇ ಗೊಂದಲವಿಲ್ಲದೆ ರಸಗೊಬ್ಬರ ಪೂರೈಕೆಯ ಕ್ರಮ ಕೈಗೊಳ್ಳಬೇಕು... ಕೃತಕ ಆಭಾವ ಸೃಷ್ಟಿಸುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು... ಹೆಚ್ಚಿನ ಬೆಲೆಗೆ ಮಾರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು.. ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ವಿದ್ಯುತ್ ಖಾಸಗಿಕರಣ ಮಾಡಲು ಹುನ್ನಾರ ನಡೆಯುತ್ತಿದ್ದು, ಸ್ಮಾರ್ಟ್ ಮೀಟರ್ ಹಾಕುವ ಮೂಲಕ ವಿದ್ಯುತ್ ಖಾಸಗಿಕರಣ ಮಾಡಿ ಹಣ ವಸೂಲಿಗೆ ಸರ್ಕಾರಗಳು ಮುಂದಾಗುತ್ತಿವೆ ಅಕ್ರಮ ಸಕ್ರಮ ಯೋಜನೆಯನ್ನು ತಕ್ಷಣ ಜಾರಿಗೆ ತರಬೇಕು.. ವಿದ್ಯುತ್ ಪರಿವರ್ತಕಗಳು ಸುಟ್ಟರೆ 24 ಗಂಟೆಯಲ್ಲಿ ಬದಲಾಯಿಸಲು ಕ್ರಮ ಕೈಗೊಳ್ಳಬೇಕು.. ಎಂದರು.ಜಿಲ್ಲಾ ಹಾಲು ಉತ್ಪಾದಕರ ಚಾಮುಲ್‌ನಲ್ಲಿ ಐಸ್ ಕ್ರೀಮ್ ಘಟಕ ಸ್ಥಾಪನೆಗೆ ಜಿಲ್ಲಾಡಳಿತ ಹಾಗೂ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು.. ಜಿಲ್ಲೆ ಅಭಿವೃದ್ಧಿ ಹಾಗೂ ಹಾಲು ಉತ್ಪಾದಕರ ಹಿತ ರಕ್ಷಣೆಗೆ ಇದು ಪೂರಕವಾಗಿರುತ್ತದೆ ಎಂದರು.
ಬ್ಯಾಂಕುಗಳಲ್ಲಿ ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ಕೇಳಬಾರದು, ಚಿನ್ನದ ಅಡಮಾನ ಸಾಲಕ್ಕೆ ಅಸಲು ಮತ್ತು ಬಡ್ಡಿ ಎರಡನ್ನು ಕೇಳುವುದನ್ನು ಕೈ ಬಿಟ್ಟು ಬಡ್ಡಿ ಸಂಗ್ರಹಿಸಿಕೊಂಡು ಸಾಲವನ್ನು ರಿನುವಲ್ ಮಾಡಬೇಕು... ರೈತನ ಹೊಲದಲ್ಲಿನ ಬೆಳೆ ವಿಮೆ ನಿಗದಿ ಆಗಬೇಕು.. ವೈಯಕ್ತಿಕ ಬೆಳೆ ವಿಮೆ ಜಾರಿ ಆಗಬೇಕು.. ಎಂದು ಒತ್ತಾಯಿಸಿದರು.ಜಿಲ್ಲೆಯ ಎಲ್ಲಾ ಕೆರೆಕಟ್ಟೆಗಳಿಗೆ ನದಿ ಮೂಲದಿಂದ ನೀರು ತುಂಬಿಸುವ ವಿಶೇಷ ಡಿಪಿಆರ್ ತಯಾರಿಸಿ ಕ್ರಮ ಕೈಗೊಳ್ಳಬೇಕು. ಅಭಿವೃದ್ಧಿಯ ಹೆಸರಲ್ಲಿ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುವ ಸರ್ಕಾರ ರೈತರನ್ನು ಪಾಲುದಾರರಾಗಿ ಮಾಡಿ ಅಭಿವೃದ್ಧಿಯಲ್ಲಿ ಬರುವ ಲಾಭವನ್ನು ರೈತರಿಗೆ ಹಂಚಬೇಕು ಎಂದರು.
ಅರಣ್ಯಗಳಿಗೆ ರೈತರ ಜಾನುವಾರುಗಳನ್ನು ಮೇಯಿಸುವುದಕ್ಕೆ ನಿರ್ಬಂಧ ಏರುವ ಸರ್ಕಾರದ ಕ್ರಮವನ್ನು ತಕ್ಷಣ ವಾಪಸ್ ಪಡೆಯಬೇಕು. ಕಾಡು ಪ್ರಾಣಿಗಳಿಂದ ಆಗುವ ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು. ಮಾನವ ಮತ್ತು ಪ್ರಾಣಿ ಸಂಘರ್ಷಕ್ಕೆ ಮಾನವ ಪ್ರಾಣ ಹಾನಿಯಾದರೆ ಕನಿಷ್ಟ 25 ಲಕ್ಷ ಪರಿಹಾರ ನೀಡಬೇಕು ಎಂದರು.ರೈತರ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ಖಾತ್ರಿ ಕಾಯ್ದೆ ಜಾರಿಗೆ ತರಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಸ್ತೆ ತಡೆ ಹಿನ್ನಲೆ ಕೆಲಹೊತ್ತು ವಾಹನ ಸಂಚಾರದಲ್ಲಿ ಅಸ್ತವ್ಯಸ್ತವಾಗಿ ವಾಹನಗಳು ಸಾಲುಗಟ್ಟಿ ನಿಂತವು.ಪತ್ರಿಭಟನೆಯಲ್ಲಿ ಜಿ ಲ್ಲಾಧ್ಯಕ್ಷ ಹಾಲಿನ ನಾಗರಾಜ್ ಜಿಲ್ಲಾ ಕಾರ್ಯದರ್ಶಿ ಮಲಿಯೂರು ಮಹೇಂದ್ರ ತಾಲೂಕು ಅಧ್ಯಕ್ಷ ಸತೀಶ್ ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಗಾಂಧಿ. ಸ್ಯಾನ್ಡ್ರಳ್ಳಿ ಬಸವರಾಜು ಅರಳಿಕಟ್ಟೆ ಪ್ರಭುಸ್ವಾಮಿ ನರಸಮಂಗಲ ನಾಗಮಲ್ಲಪ್ಪ ಗುರುವಿನಪುರ ಮೋಹನ್ ಚಂದ್ರು ಮುಕಡಳ್ಳಿ ರಾಜು ಪುಟಮಲ್ಲೇ್ಪಗೌಡ ಕಿಳ್ಳಿಪುರ ಶ್ರೀಕಂಠ ಇತರರು ಭಾಗವಹಿಸಿದ್ದರು.