ಮಗುವಿಗೆ ಜನ್ಮ ನೀಡಿದ ನಂತರ ಅನ್ನ, ಮಾಂಸ ಮತ್ತು ಫ್ರೆಂಚ್ ಫ್ರೈಸ್ ಸೇವಿಸಲು ನಿರ್ಬಂಧಿಸಿದ ಆರೋಪದ ಮೇಲೆ ಪತಿ ಮತ್ತು ಆತನ ಕುಟುಂಬ ಸದಸ್ಯರ ವಿರುದ್ಧ ಪತ್ನಿ ದಾಖಲಿಸಿದ್ದ ಕ್ರೌರ್ಯ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಗುವಿಗೆ ಜನ್ಮ ನೀಡಿದ ನಂತರ ಅನ್ನ, ಮಾಂಸ ಮತ್ತು ಫ್ರೆಂಚ್ ಫ್ರೈಸ್ ಸೇವಿಸಲು ನಿರ್ಬಂಧಿಸಿದ ಆರೋಪದ ಮೇಲೆ ಪತಿ ಮತ್ತು ಆತನ ಕುಟುಂಬ ಸದಸ್ಯರ ವಿರುದ್ಧ ಪತ್ನಿ ದಾಖಲಿಸಿದ್ದ ಕ್ರೌರ್ಯ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 498ಎ ಅಡಿ ಕ್ರೌರ್ಯ (ಪತಿ ಮತ್ತು ಸಂಬಂಧಿಕರಿಂದ ಮಹಿಳೆಗೆ ಹಿಂಸೆ) ಅಪರಾಧ ಸಂಬಂಧ ಪತ್ನಿ ತನ್ನ ವಿರುದ್ಧ ದಾಖಲಿಸಿರುವ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿ ಬೆಂಗಳೂರಿನ ನಿವಾಸಿ ಅಬುಜರ್ ಅಹ್ಮದ್, ತಾಯಿ-ತಂದೆ ಹಾಗೂ ಸಹೋದರ ಜೊತೆ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.
ಅಲ್ಲದೆ, ಇಂಥ ದೂರುಗಳ ಸಂಬಂಧ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಅನ್ವಯ ಪ್ರಾಥಮಿಕ ತನಿಖೆ ನಡೆಸದೆ ಪೊಲೀಸರು ಹೇಗೆ ಎಫ್‌ಐಆರ್ ದಾಖಲಿಸುತ್ತಾರೆ? ಮತ್ತು ಅಬುಜರ್ ಅಮೆರಿಕಕ್ಕೆ ಹಿಂತಿರುಗಿ ತನ್ನ ಉದ್ಯೋಗಕ್ಕೆ ಸೇರಿಕೊಳ್ಳುವುದನ್ನು ತಡೆಯಲು ಹೀಗೆ ಲುಕ್ಔಟ್ ಸುತ್ತೋಲೆ ಹೊರಡಿಸುವ ಹಂತಕ್ಕೆ ಹೋಗುತ್ತಾರೆಯೇ ಎಂದು ಹೈಕೋರ್ಟ್ ಅಚ್ಚರಿ ವ್ಯಕ್ತಪಡಿಸಿದೆ.ಇದು ಕ್ರೌರ್ಯ ಅಪರಾಧ ಅಲ್ಲ:
ದೂರುದಾರೆ ತನಗಿರುವ ಆಹಾರದ ನಿರ್ಬಂಧಗಳು, ಉಡುಪಿನ ಬಗೆಗಿನ ನಿರೀಕ್ಷೆಗಳು, ಮನೆಯ ಜವಾಬ್ದಾರಿಗಳ ಹಂಚಿಕೆ ಕುರಿತ ಭಿನ್ನಾಭಿಪ್ರಾಯಗಳನ್ನು ದೂರಿನಲ್ಲಿ ತಿಳಿಸಿದ್ದಾರೆ. ಹಾಗೆಯೇ, ಪತಿ ತನ್ನನ್ನು ಸೇವಕಿಯಂತೆ ನಡೆಸಿಕೊಂಡಿರುವುದಾಗಿ ಹೇಳಿಕೆ ನೀಡಿದ್ದಾರೆ. ಈ ಆರೋಪಗಳನ್ನು ಮೇಲ್ನೋಟಕ್ಕೆ ಒಪ್ಪಿಕೊಂಡರೂ, ಅವು ವೈವಾಹಿಕ ಕಲಹವನ್ನು ಬಿಂಬಿಸುತ್ತವೆ. ಆದರೆ, ಕ್ರೌರ್ಯ ಅಪರಾಧ ಎಂದು ಬಿಂಬಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.ಪತಿ ಮತ್ತು ದೂರುದಾರ ಪತ್ನಿ ಭಾರತದಲ್ಲಿ ವಾಸಿಸುತ್ತಿದ್ದರೂ ಅವರು ದಾಂಪತ್ಯ ಜೀವನ ಹೆಚ್ಚಾಗಿ ವಿದೇಶದಲ್ಲಿಯೇ ನಡೆಸಿದ್ದಾರೆ. ಪ್ರಕರಣದಲ್ಲಿ ದೂರುದಾರೆ ಅತ್ತೆ-ಮಾವ ಮತ್ತು ಭಾವವನ್ನು ವಿವೇಚನಾ ರಹಿತವಾಗಿ ಎಳೆದು ತಂದಿದ್ದಾರೆ. ಆದ್ದರಿಂದ ಪ್ರಸ್ತುತ ಪ್ರಕರಣದ ತನಿಖೆ/ವಿಚಾರಣೆ ಮುಂದುವರಿಯಲು ಅವಕಾಶ ಕಲ್ಪಿಸಿದರೆ, ಅದು ಕಾನೂನು ಪರಿಹಾರವಾಗುವ ಬದಲು ಆಯುಧವಾಗಲು ಅನುಮತಿಸಿದಂತಾಗುತ್ತದೆ. ಪ್ರಕರಣದ ತನಿಖೆ ಅರ್ಜಿದಾರರಿಗೆ ಕಿರುಕುಳ ಹೆಚ್ಚಿಸುವ ಜೊತೆಗೆ ಕಳಂಕ ತರುತ್ತದೆ. ಮತ್ತೊಂದೆಡೆ ನ್ಯಾಯಾಲಯಗಳ ಅಮೂಲ್ಯ ಸಮಯ ವ್ಯರ್ಥ ಮಾಡುತ್ತದೆ. ಆದ್ದರಿಂದ ಅರ್ಜಿದಾರರ ವಿರುದ್ಧದ ಎಫ್‌ಐಆರ್ ಮತ್ತು ಅಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲಾಗುತ್ತಿದೆ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ವಿವರ: ದೂರುದಾರೆ ಮತ್ತು ಅಬುಜರ್ 2017ರಲ್ಲಿ ಮದುವೆಯಾದ ನಂತರ ಅಮೆರಿಕಗೆ ಹೋಗಿ ನೆಲೆಸಿದ್ದರು. ಅಲ್ಲಿ ಆರು ವರ್ಷ ಚೆನ್ನಾಗಿದ್ದ ವೈವಾಹಿಕ ಜೀವನ ಮಗುವಿನ ಜನನದೊಂದಿಗೆ ಕೆಟ್ಟಿತ್ತು. 2023ರ ಜನವರಿಯಲ್ಲಿ ಭಾರತಕ್ಕೆ ಬಂದಿದ್ದ ದೂರುದಾರೆ, 2024ರಲ್ಲಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ತನ್ನ ಪತಿ, ಅತ್ತೆ-ಮಾವ ಮತ್ತು ಭಾವ ವಿರುದ್ಧ ದೂರು ದಾಖಲಿಸಿದ್ದರು.ಫ್ರೆಂಚ್ ಫ್ರೈಸ್ ತಿಂದರೆ ತೂಕ ಹೆಚ್ಚಾಗುತ್ತೆಂದು ನಿರ್ಬಂಧ!
ಅಮೆರಿಕದಲ್ಲಿ ಮಗು ಜನಿಸಿದ ನಂತರ ಫ್ರೆಂಚ್ ಫ್ರೈಸ್, ಅನ್ನ ಮತ್ತು ಮಾಂಸ ತಿಂದರೆ ತೂಕ ಹೆಚ್ಚಾಗುತ್ತದೆ ಎಂದು ಪತಿ ನನಗೆ ನಿರ್ಬಂಧ ಹೇರುತ್ತಿದ್ದರು. ಹೆರಿಗೆಯಾದ ಸ್ವಲ್ಪ ಸಮಯದ ನಂತರ ತನಗಾಗಿ ಬಟ್ಟೆ ಖರೀದಿಸುವುದನ್ನು ಕೈಬಿಟ್ಟರು. ಮನೆಯ ಎಲ್ಲ ಕೆಲಸ ನಿರ್ವಹಿಸುವಂತೆ ಒತ್ತಾಯಿಸುವ ಮೂಲಕ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು.ಈ ದೂರು ಆಧರಿಸಿ ಅಬುಜರ್, ಆತನ ತಾಯಿ, ತಂದೆ ಮತ್ತು ಸಹೋದರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ನಂತರ ಅಬುಜರ್ ಅಮೆರಿಕಕ್ಕೆ ತೆರಳದಂತೆ ಲುಕ್ ಔಟ್ ನೋಟಿಸ್ ನೀಡಿದ್ದರು. ಇದರಿಂದ ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಅಬುಜರ್ ಕುಟುಂಬ ಸದಸ್ಯರೊಂದಿಗೆ 2024ರಲ್ಲಿ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. 2024ರ ಆಗಸ್ಟ್‌ನಲ್ಲಿ ಪ್ರಕರಣದ ತನಿಖೆಗೆ ತಡೆಯಾಜ್ಞೆ ನೀಡಿದ್ದ ಹೈಕೋರ್ಟ್, ಅಮೆರಿಕಗೆ ತೆರಳಲು ಅಬುಜರ್‌ಗೆ ಅನುಮತಿಸಿತ್ತು. ಇದೀಗ ಅಬುಜರ್ ಮತ್ತವರ ಕುಟುಂಬ ಸದಸ್ಯರ ವಿರುದ್ಧದ ಎಫ್‌ಐಆರ್ ಹಾಗೂ ಅಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸಿದೆ.
