ಚುನಾವಣೆ : ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ದೇವೇಗೌಡ ಹೊಸ ಮಾಹಿತಿ

| Published : Mar 31 2024, 02:06 AM IST / Updated: Mar 31 2024, 07:24 AM IST

ಸಾರಾಂಶ

ಲೋಕಸಭಾ ಚುನಾವಣೆ ಮುಗಿದ ಮೇಲೆಯೂ ಬಿಜೆಪಿ-ಜೆಡಿಎಸ್ ಸಂಬಂಧ ಮುಂದುವರೆಯುತ್ತದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸಿದ್ದಾರೆ.

  ತುಮಕೂರು :  ಲೋಕಸಭಾ ಚುನಾವಣೆ ಮುಗಿದ ಮೇಲೆಯೂ ಬಿಜೆಪಿ-ಜೆಡಿಎಸ್ ಸಂಬಂಧ ಮುಂದುವರೆಯುತ್ತದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸಿದ್ದಾರೆ. ನಗರದಲ್ಲಿ ಶನಿವಾರ ನಡೆದ ಜಿಲ್ಲಾಮಟ್ಟದ ಜೆಡಿಎಸ್ ಮುಖಂಡರ ಸಭೆಯಲ್ಲಿ ಮಾತನಾಡಿ, ನಮ್ಮ ಈ ಬಾಂಧವ್ಯ ತಾತ್ಕಾಲಿಕವಲ್ಲ ಎಂದು ಸ್ಪಷ್ಟಪಡಿಸಿದರು. 

ನಾನು ಕೈಮುಗಿದು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ, ಇದೊಂದು ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಸೋಮಣ್ಣನವರಿಗೆ ಬೆಂಬಲ ನೀಡಿ. ಈ ಚುನಾವಣೆಯಲ್ಲಿ ವಾಲ್ಮೀಕಿ ಸಮಾಜದವರು ನನ್ನ ಕೈಬಿಡಲ್ಲ ಅನ್ನೋ ನಂಬಿಕೆಯಿದೆ. ನಾನು ಒಕ್ಕಲಿಗರಿಗೆ ಮೀಸಲಾತಿ ನೀಡದಿದ್ದರೂ, ನಿಮಗೆ ಮೀಸಲಾತಿ ಕೊಟ್ಟೆ. ನಾನೊಬ್ಬ ಹಳ್ಳಿಯ ರೈತನ ಮಗ. ನಾನು ಮಲಗುವುದಿಲ್ಲ, ಇಡೀ ರಾಜ್ಯದಲ್ಲಿ ಓಡಾಡುತ್ತೇನೆ ಎಂದರು.

ಇಡೀ ಹಿಂದೂಸ್ಥಾನದಲ್ಲಿ ಕಾಂಗ್ರೆಸ್ ನಾಲ್ಕು ಕಡೆ ಇದೆ. ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ, ಕರ್ನಾಟಕದಲ್ಲಿ ಮಾತ್ರ ಇದೆ. ಕಾಂಗ್ರೆಸ್‌ನಲ್ಲಿ ಚುನಾವಣೆಗೆ ನಿಲ್ಲೋದಕ್ಕೆ ಅಭ್ಯರ್ಥಿಗಳೇ ಇಲ್ಲ. ನಿಲ್ಲೋದಕ್ಕೆ ಯಾರೂ ತಯಾರಿಲ್ಲ. ಹೀಗಾಗಿ, ಬೇರೆ ಪಕ್ಷಗಳಿಂದ ಕರೆದುಕೊಂಡು ಬಂದು ನಿಲ್ಲಿಸುತ್ತಿದ್ದಾರೆ. ಹಿಂದೆ ಈ ಕ್ಷೇತ್ರದಲ್ಲಿ ನನ್ನನ್ನು ಸೋಲಿಸೋದಕ್ಕೆ ಕಾರಣನಾದ ವ್ಯಕ್ತಿಯನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡು ಅವನಿಗೆ ಟಿಕೆಟ್ ಕೊಟ್ಟಿದ್ದಾರೆ. ಈ ಬಾರಿಯೂ ನನಗೆ ಮುಖಭಂಗ ಮಾಡುತ್ತೀರಾ ಎಂದು ಭಾವಾವೇಶದಿಂದ ಹೇಳಿದರು.

ಇದೇ ವೇಳೆ, ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ದೇವೇಗೌಡ, ಮೈಸೂರಿನಲ್ಲಿ ಮುಖ್ಯಮಂತ್ರಿಯವರು ಜೆಡಿಎಸ್ ಎಲ್ಲಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಕುಮಾರಸ್ವಾಮಿಗೆ ಅವರ ಮಗನನ್ನು ಗೆಲ್ಲಿಸುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ. ಆದರೆ, ಕುಮಾರಸ್ವಾಮಿಯವರ ತಂದೆ ತುಮಕೂರಿನಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ನಿಂತಾಗ ಗೆಲ್ಲಿಸೋಕೆ ಆಗಿಲ್ಲ ಎಂಬುದು ಅವರಿಗೆ ನೆನಪಿಲ್ಲ ಎನ್ನುವ ಮೂಲಕ 2019ರಲ್ಲಿ ತಮಗುಂಟಾದ ಸೋಲಿನ ಪರಾಮರ್ಶೆ ಮಾಡಿದರು.

ವಾಸ್ತವವಾಗಿ ಅಂದು ನಾನು ತುಮಕೂರಿನಲ್ಲಿ ನಿಲ್ಲಬೇಕು ಅಂದುಕೊಂಡಿರಲಿಲ್ಲ. ಪಾರ್ಲಿಮೆಂಟ್ ಚುನಾವಣೆಗೆ ನಿಲ್ಲುವುದಿಲ್ಲ ಅಂತ ಖಂಡತುಂಡವಾಗಿ ಹೇಳಿದ್ದೆ. ನನಗೆ ಮಂಡಿನೋವು ಇತ್ತು. ರಾಹುಲ್ ಗಾಂಧಿ, ಸೋನಿಯಾಗಾಂಧಿ, ಫಾರೂಕ್ ಅಬ್ದುಲ್ಲಾ, ಮಲ್ಲಿಕಾರ್ಜನ ಖರ್ಗೆ ಅವರ ಮುಂದೆ ಇನ್ಮುಂದೆ ಪಾರ್ಲಿಮೆಂಟ್ ಗೆ ನಿಲ್ಲಲ್ಲ ಅಂತ‌ ಹೇಳಿದ್ದೆ. ಆದರೆ, ನನ್ನನ್ನು ನಿಲ್ಲಿಸೋದಕ್ಕೆ ಏನೇನು ಆಟ ಆಡಿದರು, ಚುನಾವಣೆಗೆ ನಿಂತ ಮೇಲೆ ಏನೇನು ಆಟ ಆಡಿದರು ಎಂಬುದು ನನಗೆ ಗೊತ್ತಿದೆ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.ಗೌಡರ ಸ್ವಾಭಿಮಾನ ಗೆಲ್ಲಿಸೋ

ಚುನಾವಣೆಯಿದು: ಸೋಮಣ್ಣ

ಜೆಡಿಎಸ್‌ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖ ಇದ್ದಂತೆ. ಈ ಬಾರಿಯ ಲೋಕಸಭಾ ಚುನಾವಣಾ ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಿ ಮಾಡುವುದು ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಸ್ವಾಭಿಮಾನವನ್ನು ಗೆಲ್ಲಿಸುವ ಚುನಾವಣೆಯಾಗಿದೆ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಹೇಳಿದರು.

ಈ ಚುನಾವಣೆ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷದ ಒಗ್ಗಟ್ಟಿನ ಚುನಾವಣೆಯಾಗಿದೆ. ಚುನಾವಣೆ ಬಳಿಕವೂ ಎರಡೂ ಪಕ್ಷಗಳು ಸಮಾನ ಮನಸ್ಸಿನಿಂದ ಕೆಲಸ ಮಾಡಲಿವೆ. ನಾನು ಏ.3ರಂದು ನಾಮಪತ್ರ ಸಲ್ಲಿಸುವೆ ಎಂದರು.