9 ರಿಂದ 11ರವರೆಗೆ ಬೀರೇಶ್ವರ ಸ್ವಾಮಿ ಪುನರ್‌ ಪ್ರತಿಷ್ಠಾಪನೆ

| Published : Feb 06 2025, 11:47 PM IST

ಸಾರಾಂಶ

ಚಾಮರಾಜನಗರದಲ್ಲಿ ಕಾವುದವಾಡಿ ಗ್ರಾಮದ ಯಜಮಾನರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ತಾಲೂಕಿನ ಕಾವುದವಾಡಿ ಗ್ರಾಮದ ಬೀರೇಶ್ವರ ಸ್ವಾಮಿ ದೇವಸ್ಥಾನ ಸಂಪ್ರೋಕ್ಷಣ ಹಾಗೂ ಪುನರ್‌ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಫೆ.9ರಿಂದ 11ರವರಗೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕಿನ ಕಾವುದವಾಡಿ ಗ್ರಾಮಸ್ಥರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮದಲ್ಲಿರುವ ಪುರಾತನ ದೇವಾಲಯ ಬೀರೇಶ್ವರ ಸ್ವಾಮಿ ದೇವಸ್ಥಾನವನ್ನು ಗ್ರಾಮಸ್ಥರು ಹಾಗೂ ಭಕ್ತರ ಸಹಕಾರದೊಂದಿಗೆ ₹5 ಕೋಟಿ ವೆಚ್ಚದಲ್ಲಿ ಬೀರೇಶ್ವರ ಸ್ವಾಮಿ ದೇವಸ್ಥಾನ ಸಂಪ್ರೋಕ್ಷಣ ಹಾಗೂ ಪುನರ್‌ ಪ್ರತಿಷ್ಠಾಪನೆ ಮಾಡಲಾಗುತ್ತಿದೆ ಎಂದರು. ಫೆ.9ರಂದು ಭಾನುವಾರ ಗ್ರಾಮದ ಪಟ್ಟಲದಮ್ಮನ ದೇವಸ್ಥಾನದ ಬಳಿ ದೇವಿಯವರಿಗೆ ಪ್ರಾಥನೆ ನಂತರ ಕುಮಾರಿ ಹಾಗೂ ಮುತ್ತೈದೆಯರಿಂದ ಗಂಗಾ ಕಲಶಪೂಜೆ ಮತ್ತು ಪುರಪ್ರದಕ್ಷಿಣಿ ನಡೆಯಲಿದೆ. ನಂತರ ಬೆಳಗ್ಗೆ 8.30ಕ್ಕೆ ದೇವಸ್ಥಾನದ ಪ್ರವೇಶ, ಗೋಪೂಜೆಯೊಂದಿಗೆ ಬಸವಧ್ವಜ ಸ್ಥಾಪನೆ ನಡೆಯಲಿದೆ ಎಂದರು. ಸಂಜೆ 6.25ಕ್ಕೆ ಯೋಗಶಾಲೆ ಪ್ರವೇಶ, ಕಳಸ ಸ್ಥಾಪನೆ ಹಾಗೂ ರುದ್ರಪಠಣ, ರಾತ್ರಿ 8.30ಕ್ಕೆ ರಾಕ್ಷೋಧನ ಹೋಮ, ವಾಸ್ತು ಪುರುಷ ಹೋಮ, ರಾತ್ರಿ 9ಕ್ಕೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ ಎಂದರು.

ಫೆ.10ರಂದು ಸೋಮವಾರ ಬೆಳಗ್ಗೆ 6.30ರಿಂದ 7.25ರವರೆಗೆ ಪ್ರಾಣ ಪ್ರತಿಷ್ಠಾಪನೆ ಮತ್ತು ನೇತ್ರೋನ್ಮಿಲನ, ಬೆಳಗ್ಗೆ 9.30ಕ್ಕೆ ರುದ್ರಹೋಮ, ಗಣ ಹೋಮ, ನವಗ್ರಹ ಹೋಮ, ಪಾರ್ವತಿ ಹೋಮ, ಕಲಾವೃದ್ಧಿ ಹೋಮ, ಪೂರ್ಣಾಹುತಿ ಗೋಪುರಕ್ಕೆ ಕಲಶ ಸ್ಥಾಪನೆ. ಬೆಳಗ್ಗೆ 9.45ಕ್ಕೆ ಮಜ್ಜನ ಸೇವೆ ನಂದಿ ಧ್ವಜಪೂಜೆ, ಬಸವನ ಮೆರವಣಿಗೆ ಹಾಗೂ ಪೂಜಾ ಕುಣಿತದೊಂದಿಗೆ ಬೀರೇಶ್ವರಸ್ವಾಮಿ ಕಲ್ಯಾಣ ಮಂಟಪ ಪ್ರಾರಂಭೋತ್ಸವವನ್ನು ನೆರವೇರಿಸಲಾಗುವುದು. ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ, ಸಂಜೆ 7.30ಕ್ಕೆ ನವಚಂಡಿ ಹೋಮ, ಪಾರಾಯಣ, ಅಷ್ಟಾವಧಾನ ಸೇವೆಯೊಂದಿಗೆ ಮಹಾಮಂಗಳಾರತಿ ನಡೆಯಲಿದೆ ಎಂದರು.

ಫೆ.11ರಂದು ಮಂಗಳವಾರ ಬೆಳಗ್ಗೆ 7.20ಕ್ಕೆ ಸ್ವಾಮಿಗೆ ಪುನರ್‌ಪೂಜೆ, ಪಂಚಗಾವ್ಯ, ರುದ್ರಭಿಷೇಕ, ಬೆಳಗ್ಗೆ 9ಕ್ಕೆ ನವಚಂಡಿ ಗೋಮಲಕ್ಷ್ಮಿ ನಾರಾಯಣ ಹೋಮ, ಮಧ್ಯಾಹ್ನ 12ಕ್ಕೆ ಪುರ್ಣಾಹುತಿ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ ಎಂದರು. ಗ್ರಾಮಸ್ಥರು, ಕುಲಬಾಂಧವರು, ಪುರೋಹಿತರು, ಭಕ್ತಾದಿಗಳು, ಅಕ್ಕಪಕ್ಕದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಲಿದ್ದು, 60 ಸಾವಿರಕ್ಕೂ ಹೆಚ್ಚಿನ ಜನರಿಗೆ 3 ದಿನಗಳು ಪ್ರಸಾದ ವಿನಿಯೋಗ ಮಾಡಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಕಾವುದವಾಡಿ ಗ್ರಾಮದ ಯಜಮಾನರಾದ ಮಹದೇವಸ್ವಾಮಿ, ಬೀರೇಗೌಡ, ಶಿವಮೂರ್ತಿ, ಶ್ರೀಕಂಠಮೂರ್ತಿ, ಕುಮಾರಸ್ವಾಮಿ, ಕುಮಾರ, ಬಸವರಾಜು ಇದ್ದರು.