ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರು
ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವವನ್ನು ಆ.18 ರಿಂದ ಆ.24ವರೆಗೆ ಆಯೋಜಿಸಲಾಗಿದ್ದು, ಆರಾಧನೆ ಹಿನ್ನೆಲೆ ಶ್ರೀಮಠದಿಂದ ಸಪ್ತರಾತ್ರೋತ್ಸವ ನಡೆಸಲಾಗುತ್ತಿದೆ ಎಂದು ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ತಿಳಿಸಿದರು.ಸುಕ್ಷೇತ್ರದ ಶ್ರೀಮಠದಲ್ಲಿ ಬುಧವಾರ ಕರೆದಿದ್ದ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶ್ರೀಗಳು, ಪ್ರಸಕ್ತ ಸಾಲಿನ ಆರಾಧನಾ ಮಹೋತ್ಸವ ಹತ್ತು ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಸಪ್ತರಾತ್ರೋತ್ಸವ ನಿಮಿತ್ತ ಏಳು ದಿನಗಳ ಕಾಲ ಶ್ರೀಮಠದಲ್ಲಿ ವಿವಿಧ ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಆ.18 ರಂದು ಧ್ವಜಾರೋಹಣ, ಪ್ರಾರ್ಥನೋತ್ಸವ, ಪ್ರಭ ಉತ್ಸವ, ಧಾನೋತ್ಸವ, 19 ಕ್ಕೆ ಶಾಖೋತ್ಸವ, ರಜತ ಮಂಟಪೋತ್ಸವ 20ಕ್ಕೆ ಶ್ರೀಗುರುರಾಯರ ಪೂರ್ವಾರಾಧನೆ ನಿಮಿತ್ತ ಮಹಾ ಪಂಚಾಮೃತಾಭಿಷೇಕ, 21ಕ್ಕೆ ಮಧ್ಯಾರಾಧನೆ ನಿಮಿತ್ತ ಜವಾಹನೋತ್ಸವ, ರಜತ, ಸುವರ್ಣೋತ್ಸವ ಹಾಗೂ 22ರಂದು ಉತ್ತರಾರಾಧನೆ ಮಹಾ ರಥೋತ್ಸವ ನಡೆಯಲಿವೆ ಎಂದರು.
ಸಿಎಂ ಸಿದ್ದರಾಮಯ್ಯ ಮಠಕ್ಕೆ ಭೇಟಿ: ಪ್ರಸಕ್ತ ಆರಾಧನಾ ಮಹೋತ್ಸವದಲ್ಲಿ ನಾನಾ ಕ್ಷೇತ್ರಗಳಲ್ಲಿ ಸಾಧನೆ ತೋರಿದ ನಾಲ್ವರಿಗೆ ಶ್ರೀರಾಘವೇಂದ್ರ ಅನುಗ್ರಹ ಪ್ರಶಸ್ತಿ ನೀಡುತ್ತಿದ್ದು, ಆ.19ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ಬಾರಿಗೆ ಶ್ರೀಮಠಕ್ಕೆ ಆಗಮಿಸುತ್ತಿದ್ದಾರೆ. ಇಷ್ಟೇ ಅಲ್ಲದೇ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ ಆಂಧ್ರ ಹಾಗೂ ತೆಲಂಗಣಾ ರಾಜ್ಯಗಳಿಂದ ಸಚಿವರು, ಶಾಸಕರು ಸೇರಿ ಹಲವಾರು ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ. ಇದರೊಂದಿಗೆ ಇನ್ಫೋಸಿಸ್‌ನ ಮುಖ್ಯಸ್ಥೆ ಹಾಗೂ ರಾಜ್ಯ ಸಭಾ ಸದಸ್ಯೆ ಸುಧಾ ನಾರಾಯಣಮೂರ್ತಿ ಅವರು ಐದು ದಿನಗಳ ಕಾಲ ಶ್ರೀಮಠದಲ್ಲಿಯೇ ಇದ್ದು ಆರಾಧನಾ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಆರಾಧನೆ ಹಿನ್ನೆಲೆಯಲ್ಲಿ ಆ.18 ಕ್ಕೆ ತಿರುಪತಿ ತಿರುಮಲ ದೇವಸ್ಥಾನದಿಂದ ಶ್ರೀನಿವಾಸ ದೇವರ ಶೇಷವಸ್ತ್ರಗಳನ್ನು ಟಿಟಿಡಿ ಹೊಸ ಸಿಇಒ ಮಂತ್ರಾಲಯದ ಸುಕ್ಷೇತ್ರಕ್ಕೆ ತೆಗೆದುಕೊಂಡು ಬರಲಿದ್ದಾರೆ. ಇಷ್ಟೇ ಅಲ್ಲದೇ ಕರ್ನಾಟಕ, ತಮಿಳುನಾಡು ಹಾಗೂ ತೆಲಂಗಾಣ ರಾಜ್ಯಗಳ ಪ್ರಮುಖ ದೇವಸ್ಥಾನಗಳಿಂದ ಶೇಷವಸ್ತ್ರಗಳು ಸಹ ಬರಲಿದ್ದು, ರಾಯರಿಗೆ ಸಮರ್ಪಿಸಲಾಗುವುದು ಎಂದರು.
ಆರಾಧನಾ ಮಹೋತ್ಸವದಲ್ಲಿ ಪ್ರತಿವರ್ಷದಂತೆ ಮಠದಿಂದ ಪ್ರದಾನ ಮಾಡುವ ಶ್ರೀರಾಘವೇಂದ್ರ ಅನುಗ್ರಹ ಪ್ರಶಸ್ತಿಯನ್ನು ಈ ಬಾರಿಯೂ ನೀಡುತ್ತಿದ್ದು, ಬೆಂಗಳೂರಿನ ಬಿಜಿಎಸ್ ಮತ್ತು ಎಸ್‌ಜೆಬಿಐಟಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಪ್ರಕಾಶನಾಥ ಸ್ವಾಮೀಜಿ, ಬೆಂಗಳೂರಿನ ವಿದ್ವಾನ್ ರಘುಪತಿ ಉಪಾಧ್ಯಾಯ, ವಾರಣಸಿಯ ಪ್ರೊ.ವರಜಾ ಭೂಷಣ ಓಝಾ ಹಾಗೂ ಆ.22 ರಂದು ಮೈಸೂರಿನ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ರಾಯರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಿ, ಸನ್ಮಾನಿಸಿ ಗೌರವಿಸಲಾಗುವುದು ಎಂದರು.ಮಹೋತ್ಸವಕ್ಕೆ ಅಪಾರಸಂಖ್ಯೆಯಲ್ಲಿ ಆಗಮಿಸುವ ಭಕ್ತರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಶ್ರೀಮಠದಿಂದ ಅಗತ್ಯ ಕ್ರಮ ವಹಿಸಲಾಗಿದೆ. ಶುದ್ಧ ಕುಡಿಯುವ ನೀರು, ತೀರ್ಥ-ಪ್ರಸಾದ, ವೈದ್ಯಕೀಯ ಸೇವೆ, ಶೌಚಾಲಯ, ವಿಶೇಷ ದರ್ಶನ, ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ಸ್ನಾನಘಟ್ಟದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿ ಭಕ್ತರಿಗೆ ಪುಣ್ಯಸ್ನಾನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಶ್ರೀಮಠದ ವ್ಯವಸ್ಥಾಪಕ ವೆಂಕಟೇಶ ಜೋಶಿ, ಅಪ್ರೆಮೇಯಾ, ಶ್ರೀನಿಧಿ ಕರ್ಣಂ ಸೇರಿ ಇತರರು ಇದ್ದರು.