ಕಾಲಕ್ಕೆ ತಕ್ಕಂತೆ ಕಲೆಯ ಸ್ವರೂಪವೂ ಬದಲು: ತೋಪಣ್ಣ

| Published : Aug 15 2024, 02:01 AM IST

ಸಾರಾಂಶ

ನನ್ನಿಂದ ಕಲಿತವರೀಗ ಸ್ವಂತ ತಂಡ ಕಟ್ಟಿಕೊಂಡು ಪ್ರದರ್ಶನ ನೀಡುತ್ತಿದ್ದಾರೆ. ಅವರನ್ನು ಕಂಡರೆ ಹೆಮ್ಮೆ ಎನಿಸುತ್ತದೆ ಎಂದು ಕೋಲಾರ ಜಿಲ್ಲೆ ವೇಮಗಲ್ ಹೋಬಳಿ ಮಂಚಂಡಹಳ್ಳಿಯ ಕೀಲು ಕುದುರೆ ಕುಣಿತ ಕಲಾವಿದ ತೋಪಣ್ಣ ಸಂತಸ ವ್ಯಕ್ತಪಡಿಸಿದರು. ರಾಮನಗರದ ಜಾನಪದ ಲೋಕದಲ್ಲಿ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದರು.

-ಸಂವಾದ ಕಾರ್ಯಕ್ರಮ

-‘ಲೋಕಸಿರಿ-97’ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಕೀಲು ಕುದುರೆ ಕಲಾವಿದ ತೋಪಣ್ಣನವರಿಗೆ ಸನ್ಮಾನಕನ್ನಡಪ್ರಭ ವಾರ್ತೆ ರಾಮನಗರ

ಹಳ್ಳಿಯಿಂದ ದಿಲ್ಲಿವರೆಗೆ ಸುತ್ತಾಡಿ ಕಲೆಯನ್ನು ಪ್ರದರ್ಶಿಸಿದ್ದೇನೆ. ಆಸಕ್ತರಿಗೆ ಉಚಿತವಾಗಿ ಹೇಳಿಕೊಡುತ್ತೇನೆ. ನಮ್ಮೂರಿನಲ್ಲಿ ಚಿಕ್ಕ ಹುಡುಗರು ಬಂದು ಕಲಿಯುತ್ತಾರೆ. ಒಂದು ಹಂತಕ್ಕೆ ಕಲಿತ ಬಳಿಕ ಪ್ರದರ್ಶನಗಳಿಗೆ ಕರೆದೊಯ್ಯುತ್ತೇವೆ. ನನ್ನಿಂದ ಕಲಿತವರೀಗ ಸ್ವಂತ ತಂಡ ಕಟ್ಟಿಕೊಂಡು ಪ್ರದರ್ಶನ ನೀಡುತ್ತಿದ್ದಾರೆ. ಅವರನ್ನು ಕಂಡರೆ ಹೆಮ್ಮೆ ಎನಿಸುತ್ತದೆ ಎಂದು ಕೋಲಾರ ಜಿಲ್ಲೆ ವೇಮಗಲ್ ಹೋಬಳಿ ಮಂಚಂಡಹಳ್ಳಿಯ ಕೀಲು ಕುದುರೆ ಕುಣಿತ ಕಲಾವಿದ ತೋಪಣ್ಣ ಸಂತಸ ವ್ಯಕ್ತಪಡಿಸಿದರು.

ನಗರದ ಜಾನಪದ ಲೋಕದಲ್ಲಿ ನಡೆದ ‘ಲೋಕಸಿರಿ-97’ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಪ್ರೇಕ್ಷಕರೊಂದಿಗೆ ಸಂವಾದ ನಡೆಸಿದ ಅವರು, ನಮ್ಮ ತಾತ- ಮುತ್ತಾತ, ಮಾವ ಸಹ ಕೀಲು ಕುದುರೆ ಕಲಾವಿದರಾಗಿದ್ದರು. ನನಗೂ ಅವರಿಂದಲೇ ಈ ಕಲೆ ಬಳುವಳಿಯಾಗಿ ಬಂದಿದೆ. ಅದರಿಂದಲೇ ನಾನು ಮತ್ತು ನನ್ನ ಬಳಗ ಬದುಕು ಕಟ್ಟಿಕೊಂಡಿದ್ದೇವೆ ಎಂದರು.

ನನಗೆ ನನ್ನ ಮಾವ ಮುನಿಯಪ್ಪ ಅವರೇ ಗುರುಗಳು. ಅವರ ಕಲಾಸೇವೆ ಗುರುತಿಸಿ ಜಾನಪದ ಲೋಕದ ನಿರ್ಮಾತೃ ಎಚ್.ಎಲ್.ನಾಗೇಗೌಡರು ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದ್ದರು. ನಾನಾಗ ಗೌಡರನ್ನು ಬೆರಗುಗಣ್ಣುಗಳಿಂದ ನೋಡಿದ್ದೆ. ಇಂದು ಅವರು ಕಟ್ಟಿದ ಲೋಕಕ್ಕೆ ಬಂದು ಸನ್ಮಾನ ಸ್ವೀಕರಿಸಿ, ಕಲೆ ಪ್ರದರ್ಶಿಸಿದ್ದಕ್ಕೆ ಮನತುಂಬಿ ಬಂದಿದೆ. ನನಗಿಂದು ಬಹುದೊಡ್ಡ ಪ್ರಶಸ್ತಿ ಸಿಕ್ಕಷ್ಟು ಸಂತಸವಾಗಿದೆ ಎಂದು ಹೇಳಿದರು.

ಕಾಲಕ್ಕೆ ತಕ್ಕಂತೆ ಕಲೆಯ ಸ್ವರೂಪವೂ ಬದಲಾಗುತ್ತಾ ಬಂದಿದೆ. ಹಿಂದೆ ಬಿದಿರು ಮತ್ತು ಮಣ್ಣಿನಿಂದ ಬೊಂಬೆಗಳನ್ನು ತಯಾರಿಸುತ್ತಿದ್ದೆವು. ಈಗ ಕಬ್ಬಿಣದ ಕಂಬಿಗಳಿಂದ ತಯಾರಿಸುತ್ತೇವೆ. ಒಂದೊಂದು ಕನಿಷ್ಠ 15 ಕೆ.ಜಿ. ತೂಗುತ್ತವೆ. ಹಿಂದೆ ದೂರ ಹೋಗಲಾಗದೆ ಸುತ್ತಮುತ್ತಲಿನ ಊರುಗಳಲ್ಲಷ್ಟೇ ಪ್ರದರ್ಶನ ನೀಡುತ್ತಿದ್ದೆವು. ಈಗ ಎಲ್ಲಿಗೆ ಕರೆದರೂ ಹೋಗಿ ಪ್ರದರ್ಶನ ನೀಡುತ್ತೇವೆ ಎಂದು ತಿಳಿಸಿದರು.

ಹಿಂದೆ ಚರ್ಮದ ತಮಟೆ ವಾದ್ಯಗಳು ಇರುತ್ತಿದ್ದವು. ಅವುಗಳಿಂದ ಹೆಚ್ಚು ಶಬ್ದ ಬರುವುದಿಲ್ಲ ಎಂಬ ಕಾರಣಕ್ಕೆ ಪ್ಲಾಸ್ಟಿಕ್ ತಮಟೆ ಬಂದವು. ಚರ್ಮದ ವಾದ್ಯಗಳ ನಿರ್ವಹಣೆಯೂ ಕಷ್ಟ. ಆಗಾಗ ಬೆಂಕಿಯಲ್ಲಿ ಕಾಯಿಸಬೇಕು. ಈಗ ಅದ್ಯಾವುದೂ ಇಲ್ಲ. ಆದರೂ, ದೇವರ ಕಾರ್ಯಕ್ಕೆ ಚರ್ಮದ ತಮಟೆಯನ್ನೇ ಈಗಲೂ ಕೇಳುವವರಿದ್ದಾರೆ ಎಂದು ತೋಪಣ್ಣ ಹೇಳಿದರು.

ಕರ್ನಾಟಕ ಜಾನಪದ ಪರಿಷತ್ತಿನ ಆಡಳಿತ ಮಂಡಳಿ ಸದಸ್ಯರಾಗಿರುವ ಅನ್ನದಾನೇಶ್ವರನಾಥ ಸ್ವಾಮೀಜಿ, ಉದಾತ್ತ ಆಶಯದೊಂದಿಗೆ ನಾಗೇಗೌಡರು ಕಟ್ಟಿದ ಲೋಕ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಲೋಕಸಿರಿ ಕಾರ್ಯಕ್ರಮ ನೂರರ ಸನಿಹ ಬಂದಿರುವ ಹಿನ್ನೆಲೆಯಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದರು.

ಕಲೆ ಪ್ರದರ್ಶನದ ಗಾರುಡಿ ಗೊಂಬೆಯಲ್ಲಿ ನಾಗಪ್ಪ ಮತ್ತು ಹರೀಶ್, ಕೀಲು ಕುದುರೆಯಲ್ಲಿ ದ್ಯಾವಕೃಷ್ಣ ಮತ್ತು ಮಹೇಶ್, ಮರಗಾಲು ಕುಣಿತದಲ್ಲಿ ಸುನೀಲ್‌ ಮತ್ತು ಗಂಗ, ತಮಟೆಯಲ್ಲಿ ನಾಗರಾಜು, ನಾರಾಯಣಸ್ವಾಮಿ, ಸೋಮಪ್ಪ, ದುರ್ಗಪ್ಪ, ವೆಂಕಟೇಶ್ ಸಾಥ್ ನೀಡಿದರು.

ಜಾನಪದ ಲೋಕದ ಕ್ಯುರೇಟರ್ ಡಾ. ಯು.ಎಂ.ರವಿ ಕಾರ್ಯಕ್ರಮ ನಿರೂಪಿಸಿದರು. ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸು.ತ. ರಾಮೇಗೌಡ, ಕಸಬಾ ಹೋಬಳಿ ರಾಜಸ್ವ ನಿರೀಕ್ಷಕ ಕೆ. ನಾಗರಾಜ್, ಸಾಹಿತಿ ವಿಜಯ್ ರಾಂಪುರ, ಜಾನಪದ ಲೋಕದ ಕಾರ್ಯನಿರ್ವಹಣಾಧಿಕಾರಿ ಸರಸವಾಣಿ, ಸಂಶೋಧನಾ ಸಂಚಾಲಕ ಸಂದೀಪ್, ರಂಗ ಸಹಾಯಕ ಪ್ರದೀಪ್, ಸಾಹಿತಿ ವಿಜಯ್ ರಾಂಪುರ ಉಪಸ್ಥಿತರಿದ್ದರು.