ಸಾರಾಂಶ
ಧಾರವಾಡ: ಇಲ್ಲಿಯ ಮಾಳಮಡ್ಡಿ ಕೆನರಾ ಬ್ಯಾಂಕ್ ಹಿಂಭಾಗದಲ್ಲಿರುವ ಮನೆಯಲ್ಲಿ ಶವವೊಂದು ಅಸ್ತಿ ಪಂಜರವಾದ ಪ್ರಕರಣ ಇದೀಗ ಬಯಲಾಗಿದ್ದು, ಬರೋಬ್ಬರಿ ಮೂರು ವರ್ಷಗಳಿಂದ ಮನೆಯಲ್ಲಿಯೇ ಶವ ಇದ್ದರೂ ಅಕ್ಕಪಕ್ಕದವರಿಗೂ ಗೊತ್ತಾಗದೇ ಇರುವುದು ವಿಚಿತ್ರವಾದರೂ ಸತ್ಯ.
ಈ ಮನೆಯಲ್ಲಿ 2021ರಲ್ಲೇ ಓರ್ವ ವ್ಯಕ್ತಿ ಮಲಗಿದ ಜಾಗದಲ್ಲೇ ಜೀವ ಬಿಟ್ಟಿದ್ದನು. ಆತ ಸತ್ತು ಮೂರು ವರ್ಷವಾದರೂ ಅಕ್ಕಪಕ್ಕದವರಿಗೆ ಮೃತ ದೇಹದ ವಾಸನೆಯೇ ಬಂದಿರಲಿಲ್ಲ. ಮೂರು ವರ್ಷದ ನಂತರ ಆ ವ್ಯಕ್ತಿಯ ಕಳೆಬರಹ ಪತ್ತೆಯಾಗಿದೆ. 48 ವರ್ಷದ ಚಂದ್ರಶೇಖರ ಕೊಲ್ಲಾಪುರ ಮಲಗಿದ ಜಾಗದಲ್ಲೇ ಮೃತನಾಗಿ ಇದೀಗ ಅಸ್ಥಿ ಪಂಜರವಾಗಿ ಮಂಗಳವಾರವಷ್ಟೇ ಪತ್ತೆಯಾಗಿದ್ದು, ಸ್ಥಳೀಯ ಜನರಿಗೆ ಅಚ್ಚರಿ ಉಂಟು ಮಾಡಿತ್ತು.
ಸಂಬಂಧಿಕರು ಇರಲಿಲ್ಲ:
ಧಾರವಾಡದ ಸುರೇಖಾ ಎಂಬುವವರನ್ನು ಚಂದ್ರಶೇಖರ ಮದುವೆಯಾಗಿದ್ದರು. ಇವರಿಗೆ ಮಕ್ಕಳು ಇರಲಿಲ್ಲ. 2015ರಲ್ಲಿ ಸುರೇಖಾ ಹೃದಯಾಘಾತದಿಂದ ನಿಧನರಾದ ನಂತರ ಚಂದ್ರಶೇಖರ ಒಬ್ಬರೇ ವಾಸ ಮಾಡುತ್ತಿದ್ದರು. ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದನು. ಹತ್ತಿರದ ಸಂಬಂಧಿಗಳೂ ಇರಲಿಲ್ಲ. ಚಂದ್ರಶೇಖರ ಪತ್ನಿ ಸುರೇಖಾ ಅವರ ಅಕ್ಕನ ಮಗ ಯಶವಂತ ಎಂಬಾತ ಆಗಾಗ ಚಂದ್ರಶೇಖರನ ಮನೆಗೆ ಬಂದು ಹೋಗುತ್ತಿದ್ದನು. ಮೂಲತಃ ರಾಣಿಬೆನ್ನೂರಿನವರಾದ ಯಶವಂತ, ಕಳೆದ ಮೂರು ವರ್ಷಗಳಿಂದ ಚಂದ್ರಶೇಖರನ ಮನೆಗೆ ಬಂದಿರಲಿಲ್ಲ. ಅಪಘಾತದಲ್ಲಿ ಗಾಯಗೊಂಡು ಯಶವಂತ ಮನೆಯಲ್ಲೇ ಇದ್ದರು. ಕಳೆದ ಮೂರು ತಿಂಗಳ ಹಿಂದೆ ಮನೆಗೆ ಬಂದು ನೋಡಿದಾಗ ಮನೆ ಬಾಗಿಲು ಹಾಕಿತ್ತು. ಚಂದ್ರಶೇಖರ್ ಎಲ್ಲೂ ಪತ್ತೆಯಾಗದೇ ಇದ್ದಿದ್ದರಿಂದ ಯಶವಂತ ವಿದ್ಯಾಗಿರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಮಂಗಳವಾರ ಪೊಲೀಸರ ಸಮ್ಮುಖದಲ್ಲಿ ಮನೆಯ ಬಾಗಿಲು ಮುರಿದು ಒಳ ಹೋಗಿ ಪರಿಶೀಲಿಸಿದಾಗ ಮನೆಯ ಬೆಡ್ ಮೇಲೆ ಚಂದ್ರಶೇಖರ್ ಸಲಾಯನ್ ಹಚ್ಚಿಕೊಂಡ ಸ್ಥಿತಿಯಲ್ಲಿ ಕಳೆಬರಹ ಪತ್ತೆಯಾಗಿದೆ. ಮೂರು ವರ್ಷಗಳ ಹಿಂದೆ ಈ ವ್ಯಕ್ತಿ ಮೃತಪಟ್ಟಿದ್ದು, ಆಗಿನಿಂದ ಇಲ್ಲಿಯವರೆಗೂ ಆ ಮನೆಯತ್ತ ಯಾರೂ ಸುಳಿದಿರಲಿಲ್ಲ.
ಅಸ್ಥಿಪಂಜರ ಪತ್ತೆಯಾದ ಮನೆಗೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಡಿಸಿಪಿ ರವೀಶ್, ಎಸಿಪಿ ಪ್ರಶಾಂತ ಸಿದ್ಧನಗೌಡರ, ಇನ್‌ಸ್ಪೆಕ್ಟರ್ ಸಂಗಮೇಶ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸದ್ಯ ಅಸ್ಥಿ ಪಂಜರವನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ತಪಾಸಣೆಗೆ ಕಳುಹಿಸಲಾಗಿದೆ. ಅಲ್ಲದೇ ಫೋರೆನ್ಸಿಕ್ ತಪಾಸಣೆಗೂ ಕಳುಹಿಸಲಾಗಿದ್ದು, ವರದಿ ಬಂದ ನಂತರವೇ ಇದರ ಸತ್ಯಾಸತ್ಯತೆ ಗೊತ್ತಾಗಲಿದೆ. ಈಗ ವಿದ್ಯಾಗಿರಿ ಠಾಣೆ ಪೊಲೀಸರು ಇದೊಂದು ಸಹಜ ಸಾವು ಎಂದು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.