ಕೇಂದ್ರ ಸರ್ಕಾರದಿಂದ ಸ್ವದೇಶಿ ಕೃಷಿ ವ್ಯವಸ್ಥೆಗೆ ಇತಿಶ್ರೀ: ಕೆ.ಟಿ.ಗಂಗಾಧರ್

| Published : Sep 21 2024, 01:57 AM IST

ಕೇಂದ್ರ ಸರ್ಕಾರದಿಂದ ಸ್ವದೇಶಿ ಕೃಷಿ ವ್ಯವಸ್ಥೆಗೆ ಇತಿಶ್ರೀ: ಕೆ.ಟಿ.ಗಂಗಾಧರ್
Share this Article
  • FB
  • TW
  • Linkdin
  • Email

ಸಾರಾಂಶ

ಬಹುರಾಷ್ಟ್ರೀಯ ಕಂಪನಿಗಳನ್ನು ಬಹಿಷ್ಕರಿಸಲು ಆಗ್ರಹಿಸಿ ರಾಜ್ಯ ರೈತ ಸಂಘದ ವತಿಯಿಂದ ಸೆ.26ರಂದು ಪ್ರತಿಭಟನೆ ನಡೆಸಲಾಗುವುದೆಂದು ರಾಜ್ಯ ರೈತ ಸಂಘದ ಮುಖಂಡ ಕೆ.ಟಿ.ಗಂಗಾಧರ್ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸ್ವದೇಶಿ ಕೃಷಿ ವ್ಯವಸ್ಥೆಯನ್ನು ಹಾಳುಗೆಡವಿ, ಬಹುರಾಷ್ಟ್ರೀಯ ಕಂಪನಿಗಳಿಗೆ ಕುಲಾಂತರಿ ತಳಿ ಬೀಜಗಳು ಮತ್ತು ಆಹಾರೋತ್ಪಾದನೆಗಳ ಮೂಲಕ ಭಾರತದಲ್ಲಿ ವಸಾಹತು ಸ್ಥಾಪನೆ ಮಾಡಲು ಅವಕಾಶ ಮಾಡಿಕೊಡುತ್ತಿರುವ ಕೇಂದ್ರ ಸರ್ಕಾರದ ನಿರ್ಧಾರ ಖಂಡನೀಯ ರಾಜ್ಯ ರೈತ ಸಂಘದ ಮುಖಂಡ ಕೆ.ಟಿ.ಗಂಗಾಧರ್ ಅಸಮಾಧಾನ ವ್ಯಕ್ತಪಡಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕುಲಾಂತರಿ ಬೆಳೆಗಳ ಕುರಿತಾಗಿ ರಾಷ್ಟ್ರೀಯ ನೀತಿಯನ್ನು ರೂಪಿಸಲು ಸುಪ್ರೀಂ ಕೋರ್ಟ್ ಆದೇಶಿಸಿದ್ದು, ನ್ಯಾಯಾಲಯವು ಸಾರ್ವಜನಿಕ ಸಮಾಲೋಚನೆಯ ಮೂಲಕ ಕುಲಾಂತರಿ ಬೆಳೆಗಳ ಕುರಿತಾಗಿ ರಾಷ್ಟ್ರೀಯ ನೀತಿ ರೂಪಿಸಲು ಪರಿಸರ, ಅರಣ್ಯ ಮತ್ತು ಹವಾ ಮಾನ ಬದಲಾವಣೆ ಸಚಿವಾಲಯಕ್ಕೆ ಆದೇಶ ನೀಡಿದೆ ಎಂದರು.

ದೇಶದಲ್ಲಿನ ರೈತ ಪ್ರತಿನಿಧಿಗಳು ಮತ್ತು ಎಲ್ಲಾ ರಾಜ್ಯ ಸರ್ಕಾರಗಳು ಸೇರಿದಂತೆ ಸಂಬಂಧಿಸಿದ ಎಲ್ಲಾ ಭಾಗಿದಾರರನ್ನು ಒಳಗೊಳ್ಳುವ ಮೂಲಕ ಸಮಾಲೋಚನೆ ನಡೆಸಬೇಕು ಎಂದು ಆದೇಶದಲ್ಲಿ ತಿಳಿಸಿದೆ. ಈಗಾಗಿ ಸಾರ್ವಜನಿಕ ಸಮಾಲೋಚನ ಪ್ರಕ್ರಿಯೆಯನ್ನು ಸರಿಯಾಗಿ ಆಯೋಜಿಸುವಂತೆ ಸರ್ಕಾರ ಸಮಗ್ರವಾದ ನೀತಿ ರೂಪಿಸುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಹೇಳಿದರು.

ರೈತರ ಸಮಸ್ಯೆಗಳಿಗೆ ಪರಿಹಾರವಾಗಿ ಕುಲಾಂತರಿ ಬೆಳೆಗಳನ್ನು ತರುವ ಅಗತ್ಯವಿಲ್ಲ. ಆದ್ದರಿಂದ ನಮ್ಮ ಆಹಾರ ಮತ್ತು ಕೃಷಿ ವ್ಯವಸ್ಥೆಗಳು ಪರಿಸರದಲ್ಲಿ ಜೀನ್ ಎಡಿಟಿಂಗ್ ಸೇರಿದಂತೆ ಯಾವುದೇ ಜಿಎಂ ತಂತ್ರಜ್ಞಾವನ್ನು ಹೊಂದಿರಬಾರದು ಎನ್ನುವ ತತ್ವವನ್ನು ನಾವು ಸರಿಯಾಗಿ ಪ್ರಯೋಗಿಸಬೇಕಾಗಿದೆ ಎಂದರು.

ಕುಲಾಂತರಿ ಆಹಾರ ಮತ್ತು ಬಹುರಾಷ್ಟ್ರೀಯ ಕಂಪನಿಗಳನ್ನು ನಮ್ಮ ಕೃಷಿ ಕ್ಷೇತ್ರದಿಂದ ಬಹಿಷ್ಕರಿಸಬೇಕು ಎಂದು ಆಗ್ರಹಿಸಿ ಸೆ.26 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಕೇಂದ್ರದ ಕೃಷಿ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಯಶವಂತ ರಾವ್ ಘೋರ್ಪಡೆ, ಮಾನೇನಳ್ಳಿ ಗಿರೀಶ್, ಜಗದೀಶ್ ನಾಯಕ್, ಮಂಜುನಾಥ್ ಇನ್ನಿತರರು ಉಪಸ್ಥಿತರಿದ್ದರು.ಜೈವಿಕ ಭದ್ರತೆಗೆ ಆದ್ಯತೆ ನೀಡಿರಾಜ್ಯ ಸರ್ಕಾರಗಳು ತಮ್ಮ ಕೃಷಿ ಮತ್ತು ಆರೋಗ್ಯ ಸಂಬಂಧಿತ ನೀತಿಗಳ ಮೇಲೆ ಸಂಪೂರ್ಣ ಸಂವಿಧಾನಿಕ ಅಧಿಕಾರ ಹೊಂದಿವೆ. ಕುಲಾಂತರಿಗಳಿಗೆ ರಾಷ್ಟ್ರೀಯ ಒಮ್ಮತ ಅಗತ್ಯವಿದೆ. ನೀತಿಯ ವ್ಯಾಪಾರ ಭದ್ರತೆಯನ್ನು ಒಳಗೊಂಡಿರಬೇಕು. ನೀತಿಯಲ್ಲಿ ಸ್ಪಷ್ಟವಾದ ಪರಿಹಾರ ಮತ್ತು ಹೊಣೆಗಾರಿಕೆ ನಿಗದಿಪಡಿಸುವ ವ್ಯವಸ್ಥೆ ಇರಬೇಕು. ಜೈವಿಕ ಭದ್ರತೆಗೆ ಆದ್ಯತೆ ನೀಡಬೇಕು ಎಂದು ರಾಜ್ಯ ರೈತ ಸಂಘದ ಮುಖಂಡ ಕೆ.ಟಿ.ಗಂಗಾಧರ್ ಒತ್ತಾಯಿಸಿದರು.