ಚಿಪ್‌ನಿಂದ ಶಿಪ್‌ವರೆಗೆ ಎಐನಿಂದ ಕ್ವಾಂಟಮ್ ಕಂಪ್ಯೂಟಿಂಗ್‌ ವರೆಗೆ ದೇಶ ಮುಂದಿದೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು:

ಚಿಪ್‌ನಿಂದ ಶಿಪ್‌ವರೆಗೆ ಎಐನಿಂದ ಕ್ವಾಂಟಮ್ ಕಂಪ್ಯೂಟಿಂಗ್‌ ವರೆಗೆ ದೇಶ ಮುಂದಿದೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.

ನಗರದಲ್ಲಿ ಶುಕ್ರವಾರ ಮೆಟ್ರೋ ಉದ್ಘಾಟನೆ ನಂತರ ಮಾತನಾಡಿದ ಅವರು, ದೇಶ ಅಭಿವೃದ್ಧಿ ಹೊಂದುವುದರ ಜೊತೆಗೆ ಬಡತನದ ವಿರುದ್ಧದ ಹೋರಾಟವೂ ಬಲಗೊಳ್ಳುತ್ತಿದೆ. ಕಳೆದ ಒಂದು ದಶಕದಲ್ಲಿ ದೇಶದ ಸುಮಾರು 50 ಕೋಟಿ ನಾಗರಿಕರು ಬಡತನ ರೇಖೆಯಿಂದ ಹೊರ ಬಂದಿರುವುದು ಇದಕ್ಕೆ ಸಾಕ್ಷಿ ಎಂದರು.

ಇಂದು ಚಾಲನೆ ನೀಡಲಾಗುತ್ತಿರುವ ಯೋಜನೆಗಳು ದೇಶದ ಅಭಿವೃದ್ಧಿಯನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯಲಿವೆ. ಈ ಯೋಜನೆಗಳು ವಿಕಸಿತ ಕರ್ನಾಟಕದೊಂದಿಗೆ ವಿಕಸಿತ ಭಾರತದ ಅಭಿವೃದ್ಧಿಗೆ ಹೊಸ ವೇಗ ನೀಡಲಿದೆ ಎಂದು ತಿಳಿಸಿದರು.

ಪ್ರಸ್ತುತ ರಾಷ್ಟ್ರದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿದ್ದೇವೆ. ತೈಲ ಉತ್ಪಾದನಾ ವ್ಯವಸ್ಥೆ ಅಭಿವೃದ್ಧಿಪಡಿಸಲಾಗಿದೆ. ಸೌರ, ಜಲ ಮತ್ತು ಪವನ ಶಕ್ತಿಯನ್ನು ಮತ್ತಷ್ಟು ವಿಸ್ತರಿಸಲಾಗಿದೆ. ರೈಲ್ವೆ ವಿದ್ಯುತ್ ಬಳಕೆ ಶೇ.100ರಷ್ಟು ಹೆಚ್ಚಿಸಲಾಗಿದೆ. ಇದರಿಂದಾಗಿ ಭಾರತದ ಇಂಧನ ಭದ್ರತೆಗೆ ಹೊಸ ಬಲ ಸಿಗಲಿದೆ ಎಂದರು.

ಬೆಂಗಳೂರಿನ ಎಲ್‌ಪಿಜಿ ಯೋಜನೆ ದೇಶದಲ್ಲಿ ಎಲ್‌ಪಿಜಿ ಸಾಮರ್ಥ್ಯವನ್ನು 80,000 ಮೆಟ್ರಿಕ್ ಟನ್‌ಗಳಷ್ಟು ಹೆಚ್ಚಿಸಲಿದೆ. ದೇವನಗೊಂದಿ ಮಾರುಕಟ್ಟೆ ಟರ್ಮಿನಲ್ ಪೆಟ್ರೋಲ್, ಡೀಸೆಲ್ ಮತ್ತು ವಿಮಾನಯಾನ ಇಂಧನ ಪೂರೈಕೆ ಹೆಚ್ಚಿಸಲಿದೆ. ಬೆಂಗಳೂರಿನ ಸಿಬಿಜಿ ಸ್ಥಾವರ ಪ್ರತಿದಿನ 13 ಟನ್ ಜೈವಿಕ ಅನಿಲ ಉತ್ಪಾದಿಸಲಿದೆ. ಇದರಿಂದ ತ್ಯಾಜ್ಯ ನಿರ್ವಹಣೆ ಉತ್ತಮಗೊಳ್ಳುವ ಜೊತೆಗೆ ನೈಸರ್ಗಿಕ ಅನಿಲದ ಆಮದು ಮೇಲಿನ ವೆಚ್ಚ ಕಡಿಮೆಯಾಗಲಿದೆ ಎಂದರು.

ಇಂದು ಭಾರತದ ನವೀಕರಿಸಬಹುದಾದ ಇಂಧನ ಸಾಮರ್ಥ್ಯ 300 ಗಿಗಾವ್ಯಾಟ್‌ಗಿಂತ ಹೆಚ್ಚಾಗಿದೆ. ಸ್ವಚ್ಛ ಇಂಧನ ಪಡೆಯಲು ಭಾರತ ತನ್ನ ಪರಮಾಣು ಇಂಧನ ಸ್ಥಾವರ ವಿಸ್ತರಿಸಿದೆ. ಕೇಂದ್ರ ಸರ್ಕಾರದ ಯೋಜನೆಗಳಿಂದಾಗಿ ಇಂದು ಭಾರತೀಯ ನಾಗರಿಕರು ವಿದ್ಯುತ್ ಗ್ರಾಹಕರಾಗುವ ಜೊತೆಗೆ ವಿದ್ಯುತ್ ಉತ್ಪಾದಕರೂ ಆಗುತ್ತಿದ್ದಾರೆ ಎಂದರು.

ಭಾರತ ಆಟೋಮೊಬೈಲ್‌ನಿಂದ ಎಲೆಕ್ಟ್ರಾನಿಕ್ಸ್‌ವರೆಗೆ, ಪ್ರವಾಸೋದ್ಯಮದಿಂದ ಸೇವಾ ಕ್ಷೇತ್ರದವರೆಗೆ, ಹೊಸ ವ್ಯಾಪಾರಗಳು, ಕಾರ್ಖಾನೆಗಳು ಮತ್ತು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ಇದರರ್ಥ ಈ ಹೊಸ ಮಧ್ಯಮ ವರ್ಗ ಭಾರತದ ಆರ್ಥಿಕ ಬೆಳವಣಿಗೆಯ ಒಂದು ದೊಡ್ಡ ಎಂಜಿನ್ ಆಗುತ್ತಿದೆ ಎಂದರು.

ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳ ಮೂಲಕ ದಿನನಿತ್ಯದ ವಸ್ತುಗಳ ಬೆಲೆ ಅಗ್ಗವಾಗಿಸಿದ್ದೇವೆ. ವೈಯಕ್ತಿಕ ಆರೋಗ್ಯ ಮತ್ತು ಜೀವ ವಿಮೆ ಮೇಲಿನ ಜಿಎಸ್‌ಟಿ ರದ್ದುಗೊಳಿಸುವ ಮೂಲಕ ಅದನ್ನು ಇನ್ನಷ್ಟು ಕೈಗೆಟುಕುವಂತೆ ಮಾಡಲಾಗಿದೆ ಎಂದ ಅವರು, ಮಧ್ಯಮ ವರ್ಗದ ಉಳಿತಾಯ ಹೆಚ್ಚಿಸಲು, ಅವರ ಖರೀದಿ ಸಾಮರ್ಥ್ಯ ಬಲಪಡಿಸಲು ಮತ್ತು ತಮ್ಮ ಕುಟುಂಬಗಳ ಕನಸುಗಳನ್ನು ನನಸಾಗಿಸುವುದರ ಜೊತೆಗೆ ದೇಶದ ಆರ್ಥಿಕ ಅಭಿವೃದ್ಧಿಗೂ ಕೊಡುಗೆ ನೀಡಲು ನಾವು ಪ್ರಯತ್ನಿಸಿರುವುದಾಗಿ ಹೇಳಿದರು.