ಸಾರಾಂಶ
ಶಿರಸಿ: ಅಖಿಲ ಹವ್ಯಕ ಮಹಾಸಭಾ ಈಗ ೮೧ ವರ್ಷಗಳನ್ನು ಪೂರೈಸಿದ್ದು, ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿರುವ ಹವ್ಯಕ ಸಮಾಜದ ಎಲ್ಲರನ್ನೂ ಒಗ್ಗೂಡಿಸುವ ಹಾಗೂ ಇತರ ಸಮಾಜವನ್ನೂ ಒಳಗೊಂಡ ಬೃಹತ್ ಸಂಘಟನೆ ಉದ್ದೇಶದೊಂದಿಗೆ ಡಿ. ೨೭, ೨೮ ಹಾಗೂ ೨೯ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ತೃತೀಯ ವಿಶ್ವ ಹವ್ಯಕ ಸಮ್ಮೇಳನ ಆಯೋಜಿಸಲಾಗುತ್ತಿದೆ ಎಂದು ಮಹಾಸಭಾ ಅಧ್ಯಕ್ಷ ಡಾ. ಗಿರಿಧರ ಕಜೆ ಹೇಳಿದರು.
ಸೋಮವಾರ ನಗರದ ಯೋಗಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಲ ವರ್ಷಗಳ ಹಿಂದೆ ನಡೆದ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳದಲ್ಲಿ ೭೫ ಸಾವಿರಕ್ಕೂ ಅಧಿಕ ಜನ ಭಾಗಿಯಾಗಿದ್ದರು. ಈ ವರ್ಷ ಆಯೋಜಿಸಿರುವ ತೃತೀಯ ಸಮ್ಮೇಳನದಲ್ಲಿ ೧.೫ ಲಕ್ಷಕ್ಕೂ ಅಧಿಕ ಜನ ಭಾಗಿಯಾಗುವ ನಿರೀಕ್ಷೆ ಇದೆ. ಸಮ್ಮೇಳದ ಎಲ್ಲ ಸಿದ್ಧತೆಗಳನ್ನೂ ನಮ್ಮ ಕಾರ್ಯಕರ್ತರೇ ಮಾಡುತ್ತಿದ್ದು, ಒಟ್ಟು ₹೪ ಕೋಟಿ ಖರ್ಚು ತಗುಲುವ ನಿರೀಕ್ಷೆ ಇದೆ. ಸಮ್ಮೇಳನದ ಬಳಿಕ ಉಳಿತಾಯವಾಗುವ ಹಣದಿಂದ ರಾಜ್ಯದ ಎಲ್ಲಾದರೂ ಹವ್ಯಕ ಮಹಾಸಭಾದಿಂದ ಜಾಗ ಖರೀದಿ ಮಾಡಿ, ಅಲ್ಲಿ ಶಿಕ್ಷಣ ಸಂಸ್ಥೆ ನಿರ್ಮಿಸುವ ಉದ್ದೇಶ ಹೊಂದಿದ್ದೇವೆ ಎಂದರು.ವಿಶ್ವ ಹವ್ಯಕ ಸಮ್ಮೇಳನ ಕೇವಲ ಹವ್ಯಕರಿಗೆ ಮಾತ್ರವಲ್ಲ. ಹವ್ಯಕರ ಜೊತೆ ಇತರರೂ ಸೇರಿ ಈ ಸಮ್ಮೇಳನ ಯಶಸ್ವಿಗೊಳಿಸಬೇಕು ಎಂಬುದು ನಮ್ಮ ಆಶಯ. ನಾಡಿನ ಹಬ್ಬ ಆಗಬೇಕು. ಕಾರ್ಯಕ್ರಮದಲ್ಲಿ ೫೫೭ ಸಾಧಕರನ್ನು ಸನ್ಮಾನಿಸಲಾಗುತ್ತಿದೆ. ಇದರ ಹೊರತಾಗಿ ೮೧ ಯೋಧರು, ೮೧ ವೈದಿಕರನ್ನು ಸನ್ಮಾನಿಸಲಾಗುತ್ತಿದೆ. ದಿಕ್ಸೂಚಿ, ಸನ್ಮಾನವನ್ನು ಹವ್ಯಕರಲ್ಲದವರೇ ನಿರ್ವಹಿಸುತ್ತಿದ್ದಾರೆ. ಎಲ್ಲ ಸಮಾಜದ ಅಧ್ಯಕ್ಷ ಮುಖ್ಯಸ್ಥರಿಗೆ ಗೌರವ ಸಮರ್ಪಿಸಿ ಎಲ್ಲರೂ ಒಟ್ಟಾಗಿರಬೇಕು ಎಂಬ ಸಂದೇಶ ನೀಡಲಿದ್ದೇವೆ ಎಂದರು.
ಇಂದು ಪ್ರತಿಭಾ ಪಲಾಯನ ಜಾಸ್ತಿಯಾಗಿದೆ. ಹಳ್ಳಿಗಳಲ್ಲಿಯ ಯುವ ಜನತೆ ಉದ್ಯೋಗಾವಕಾಶ ಅರಸಿ ಮಹಾನಗರಕ್ಕೆ ತೆರಳಿರುವುದರಿಂದ ಹಳ್ಳಿಗಳಲ್ಲಿ ವೃದ್ಧರು ಮಾತ್ರ ಎಂಬಂತಾಗಿದೆ. ಹೀಗಾಗಿ, ಹಳ್ಳಿಗಳಲ್ಲಿ ಉದ್ಯೋಗಾವಕಾಶ ಸಾಧ್ಯತೆ ಬಗ್ಗೆ, ಮನೆಗಳಲ್ಲಿಯೇ ಕುಳಿತು ತಂತ್ರಜ್ಞಾನ ಬಳಕೆ ಮಾಡಿಕೊಂಡು ಆದಾಯ ಕಂಡುಕೊಳ್ಳುವ ಬಗ್ಗೆ ಹವ್ಯಕ ಸಮ್ಮೇಳನದಲ್ಲಿ ಅನುಭವಿಗಳಿಂದ ಚರ್ಚೆ ನಡೆಯಲಿದೆ. ಹವ್ಯಕರ ಪ್ರಧಾನ ಕೃಷಿ ಕೇವಲ ಅಡಕೆ ಮಾತ್ರ ಎಂಬಂತಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅಡಕೆ ಬೆಳೆಗೆ ವಿವಿಧ ರೋಗ ಕಾಡುತ್ತಿದ್ದು, ಉಪ ಆದಾಯ ನೀಡುವ ಬೆಳೆಗಳ ಬಗ್ಗೆಯೂ ಚಿಂತಿಸಬೇಕಿದೆ. ಹೀಗಾಗಿ, ಸಾಧಕ ಕೃಷಿ ತಜ್ಞರೂ ಮಾಹಿತಿ ನೀಡಲಿದ್ದಾರೆ. ಸಮ್ಮೇಳನದಲ್ಲಿ ಕನ್ನಡದ ಪ್ರಥಮನಾಟಕ ಇಗ್ಗಪ್ಪ ಹೆಗಡೆ ವಿವಾಹ ನಾಟಕವನ್ನು ಪ್ರದರ್ಶನ ಮಾಡಲಾಗುತ್ತಿದೆ. ಹವ್ಯಕ ಆಹಾರ ಪ್ರದರ್ಶನ, ತಿಂಡಿ ತಿನಿಸು ಪ್ರದರ್ಶನ, ಅಡಕೆ ಕೃಷಿ ಕುರಿತ ವಸ್ತು ಪ್ರದರ್ಶನ, ಗಾಯತ್ರಿ ಮಂತ್ರದ ಮಹತ್ವ ತಿಳಿಸುವ ಗಾಯತ್ರಿ ದೀಪ, ಹಳೆ ವಸ್ತುಗಳ, ಪಾರಂಪರಿಕ ವಸ್ತುಗಳ ಪ್ರದರ್ಶನ ನಡೆಯಲಿದೆ ಎಂದರು.ಸುದ್ದಿಗೊಷ್ಠಿಯಲ್ಲಿ ಮಹಾಸಭಾ ಉಪಾಧ್ಯಕ್ಷ ಶ್ರೀಧರ ಭಟ್ಟ ಕೆಕ್ಕಾರ, ಆರ್.ಎಂ. ಹೆಗಡೆ ಬಾಳೇಸರ, ಪ್ರಧಾನ ಕಾರ್ಯದರ್ಶಿ ವೇಣು ವಿಘ್ನೇಶ ಸಂಪ, ಕಾರ್ಯದರ್ಶಿ ಪ್ರಶಾಂತ ಭಟ್ ಮಲವಳ್ಳಿ, ನಿರ್ದೇಶಕ ಶಶಾಂಕ ಹೆಗಡೆ ಶಿಗೇಹಳ್ಳಿ ಮತ್ತಿತರರು ಇದ್ದರು.