ರಸಗೊಬ್ಬರ ಖರೀದಿಗಾಗಿ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವುದು, ಗೊಬ್ಬರಕ್ಕಾಗಿ ಒಂದು ಅಂಗಡಿಯಿಂದ ಮತ್ತೊಂದು ಅಂಗಡಿಗೆ ಅಲೆಯುವುದು, ಬೇಡಿಕೆಯ ಸಮಯದಲ್ಲಿ ದಾಸ್ತಾನು ಇಲ್ಲದೆ ಬರಿಗೈಯಲ್ಲಿ ಮರಳುವುದು ಸೇರಿದಂತೆ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ರಸಗೊಬ್ಬರ ಡಿಜಿಟಲ್ ಬುಕ್ಕಿಂಗ್ ವ್ಯವಸ್ಥೆ ರೂಪಿಸಿದೆ.
ಸೋಮರಡ್ಡಿ ಅಳವಂಡಿ
ಕೊಪ್ಪಳ: ರಸಗೊಬ್ಬರ ಖರೀದಿಗಾಗಿ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವುದು, ಗೊಬ್ಬರಕ್ಕಾಗಿ ಒಂದು ಅಂಗಡಿಯಿಂದ ಮತ್ತೊಂದು ಅಂಗಡಿಗೆ ಅಲೆಯುವುದು, ಬೇಡಿಕೆಯ ಸಮಯದಲ್ಲಿ ದಾಸ್ತಾನು ಇಲ್ಲದೆ ಬರಿಗೈಯಲ್ಲಿ ಮರಳುವುದು ಸೇರಿದಂತೆ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ರಸಗೊಬ್ಬರ ಡಿಜಿಟಲ್ ಬುಕ್ಕಿಂಗ್ ವ್ಯವಸ್ಥೆ ರೂಪಿಸಿದೆ.ಇನ್ನು ಮುಂದೆ ರೈತರು ಆ್ಯಪ್ ಮೂಲಕ ಅರ್ಜಿ ಸಲ್ಲಿಸಿ ರಸಗೊಬ್ಬರ ಖರೀದಿಸಬಹುದು. ರಾಜ್ಯ ಸರ್ಕಾರ ಡಿಸೆಂಬರ್ ತಿಂಗಳಲ್ಲಿ ರಾಜ್ಯಾದ್ಯಂತ ಜಾರಿ ಮಾಡಲಿದೆ. ರೈತರು ತಮ್ಮ ಹತ್ತಿರದ ಅಂಗಡಿಯ ದಾಸ್ತಾನು ಪರಿಶೀಲಿಸಿ, ತಮಗೆ ಬೇಕಾದ ರಸಗೊಬ್ಬರವನ್ನು ಮೊಬೈಲ್ ಮೂಲಕವೇ ಕಾಯ್ದಿರಿಸಬಹುದು. ಮೂರು ದಿನದೊಳಗೆ ಖರೀದಿಸದಿದ್ದರೆ ಸ್ವಯಂಚಾಲಿತವಾಗಿ ರದ್ದಾಗಲಿದೆ.
ಹೀಗೆ ರಸಗೊಬ್ಬರ ಪಡೆಯಲು ಒಂದಷ್ಟು ಷರತ್ತುಗಳಿವೆ. ಎಫ್ಐಡಿ ಮೂಲಕ ತಿಂಗಳಿಗೆ ಒಂದು ಬಾರಿ ಮಾತ್ರ ಬುಕ್ಕಿಂಗ್ ಮಾಡಬಹುದು. ಎಫ್ಐಡಿಯಲ್ಲಿ ನೋಂದಣಿಯಾಗಿರುವ ಭೂಮಿಯ (ಪ್ರಮಾಣದ) ಲೆಕ್ಕಾಚಾರದಲ್ಲಿ ಮಾತ್ರ ರಸಗೊಬ್ಬರ ಪಡೆಯಲು ಅವಕಾಶವಿದೆ.ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ರಾಷ್ಟ್ರೀಯ ರಸಗೊಬ್ಬರ ಮಾರಾಟ ಚೌಕಟ್ಟು (National Fertilizer Sales Framework - NFSF) ಅಡಿಯಲ್ಲಿ ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ರಸಗೊಬ್ಬರ ಮಾರಾಟ ಮತ್ತು ವಿತರಣೆಯನ್ನು ಸಮಗ್ರ ಡಿಜಿಟಲ್ ವೇದಿಕೆಯಡಿ ಮಾರಾಟ ವ್ಯವಸ್ಥೆ ಮಾಡಲಾಗಿದೆ.
ಏನಿದು ಹೊಸ ವ್ಯವಸ್ಥೆ?: ರೈತರು ರಸಗೊಬ್ಬರಕ್ಕಾಗಿ ನೇರವಾಗಿ ಅಂಗಡಿಗಳಿಗೆ ತೆರಳಿ ವಿಚಾರಿಸುವ ಬದಲು ಆ್ಯಪ್ ಮೂಲಕ ರಸಗೊಬ್ಬರದ ಅಗತ್ಯ ಮತ್ತು ಬುಕ್ಕಿಂಗ್ ಪ್ರಕ್ರಿಯೆ ಕೈಗೊಳ್ಳುವ ವ್ಯವಸ್ಥೆ ಇದಾಗಿದೆ. ರೈತರ ರಸಗೊಬ್ಬರ ಅರ್ಜಿ, ಬುಕ್ಕಿಂಗ್ ಹಾಗೂ ಅಗತ್ಯವಿದ್ದಲ್ಲಿ ಅರ್ಜಿ ರದ್ದತಿ ಪ್ರಕ್ರಿಯೆಯನ್ನು ಡಿಜಿಟಲ್ ವೇದಿಕೆಯ ಮೂಲಕ ನಿರ್ವಹಿಸಬಹುದಾಗಿದೆ.ಈ ವ್ಯವಸ್ಥೆಯಡಿ ರಸಗೊಬ್ಬರ ಮಾರಾಟ ಅರ್ಜಿ ವ್ಯವಸ್ಥೆ (Fertilizer Sales Application System - FSAS) ಮತ್ತು ಸಮಗ್ರ ರಸಗೊಬ್ಬರ ನಿರ್ವಹಣಾ ವ್ಯವಸ್ಥೆ (Integrated Fertilizer Management System - iFMS) ಪರಸ್ಪರ ಸಂಪರ್ಕ ಹೊಂದಲಿವೆ. ಇದರಿಂದ ರಸಗೊಬ್ಬರದ ದಾಸ್ತಾನು, ಮಾರಾಟ, ಮಾರಾಟಗಾರರ ವಿವರ ಹಾಗೂ ವಿತರಣೆಯ ಮಾಹಿತಿ ರೈತರಿಗೂ ಸಿಗಲಿದೆ.
ಅಂಗಡಿಗಳ ದಾಸ್ತಾನು ಮಾಹಿತಿ ಲಭ್ಯ: ರೈತರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ರಸಗೊಬ್ಬರದ ನೈಜ ದಾಸ್ತಾನು ಮಾಹಿತಿ ಲಭ್ಯವಿಲ್ಲದಿರುವುದು ಪ್ರಮುಖವಾಗಿದೆ. ಹಲವು ಬಾರಿ ಅಂಗಡಿಗೆ ತೆರಳಿದ ಬಳಿಕ ಗೊಬ್ಬರ ಇಲ್ಲ ಎಂಬ ಉತ್ತರ ಸಿಗುತ್ತದೆ. ಇದರಿಂದ ಸಮಯ ಮತ್ತು ಹಣ ವ್ಯರ್ಥವಾಗುತ್ತದೆ. ಹೊಸ ವ್ಯವಸ್ಥೆಯಲ್ಲಿ ರಸಗೊಬ್ಬರದ ದಾಸ್ತಾನು ಮತ್ತು ಮಾರಾಟದ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ನಿರ್ವಹಿಸುವುದರಿಂದ ಈ ಸಮಸ್ಯೆ ಇರುವುದಿಲ್ಲ.ಸರ್ಕಾರದ ನೇರ ನಿಗಾ: ರಸಗೊಬ್ಬರ ವಿತರಣೆಯಲ್ಲಿ ಪಾರದರ್ಶಕತೆ ತರುವುದು ಈ ಯೋಜನೆಯ ಮತ್ತೊಂದು ಪ್ರಮುಖ ಉದ್ದೇಶ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಡ್ಯಾಶ್ಬೋರ್ಡ್ ಮೂಲಕ ರಸಗೊಬ್ಬರದ ದಾಸ್ತಾನು, ಮಾರಾಟ, ಅಸಹಜ ವಹಿವಾಟು ಹಾಗೂ ರೈತರ ದೂರುಗಳ ಮೇಲೆ ನಿಗಾ ಇಡಬಹುದಾಗಿದೆ. ಅರ್ಹ ರೈತರಿಗೆ ರಸಗೊಬ್ಬರ ತಲುಪಿಸುವುದು ಮತ್ತು ಕೃತಕ ಅಭಾವ ಸೃಷ್ಟಿಸುವುದು, ಅಕ್ರಮ ದಾಸ್ತಾನು ಹಾಗೂ ದುರುಪಯೋಗಕ್ಕೆ ಕಡಿವಾಣ ಬೀಳಲಿದೆ.
ದೂರುಗಳಿಗೂ ಪ್ರತ್ಯೇಕ ವ್ಯವಸ್ಥೆ: ರಸಗೊಬ್ಬರ ಬುಕ್ಕಿಂಗ್, ದಾಸ್ತಾನು ಅಥವಾ ಮಾರಾಟಕ್ಕೆ ಸಂಬಂಧಿಸಿದಂತೆ ರೈತರಿಗೆ ಸಮಸ್ಯೆ ಎದುರಾದರೆ ದೂರು ಸಲ್ಲಿಸಲು ಪ್ರತ್ಯೇಕ ವ್ಯವಸ್ಥೆಯನ್ನೂ ರೂಪಿಸಲಾಗಿದೆ. ರೈತರ ಅರ್ಜಿಗಳ ನಿರ್ವಹಣೆ, ದೂರುಗಳ ವಿಲೇವಾರಿ ಹಾಗೂ ಮಾರಾಟದ ಮೇಲ್ವಿಚಾರಣೆಗೆ ಡಿಜಿಟಲ್ ವೇದಿಕೆ ನೆರವಾಗಲಿದೆ.ಡಿಸೆಂಬರ್ನಿಂದ ಜಾರಿ: ರೈತರು ಇನ್ಮುಂದೆ ರಸಗೊಬ್ಬರವನ್ನು ಆ್ಯಪ್ ಮೂಲಕವೇ ಪಡೆಯಬಹುದಾಗಿದೆ. ಡಿಸೆಂಬರ್ ತಿಂಗಳಲ್ಲಿ ಇದು ಜಾರಿಯಾಗಲಿದ್ದು, ರೈತರು ತಮ್ಮ ಹತ್ತಿರದ ಅಂಗಡಿಯಲ್ಲಿ ರಸಗೊಬ್ಬರವನ್ನು ಆ್ಯಪ್ ಮೂಲಕ ಬುಕ್ ಮಾಡಿಕೊಂಡು, ಖರೀದಿ ಮಾಡಬಹುದಾಗಿದೆ ಎಂದು ಕೃಷಿ ಇಲಾಖೆ ಕೊಪ್ಪಳ ಜೆಡಿ ಕೃಷ್ಣಮೂರ್ತಿ ಹೇಳಿದರು.