ಕನ್ನಡಪ್ರಭ ವಾರ್ತೆ ಬೆಂಗಳೂರು

ಬನ್ನೇರುಘಟ್ಟ ಮೃಗಾಲಯಕ್ಕೆ ದಕ್ಷಿಣ ಆಫ್ರಿಕಾದಿಂದ ಕರೆತರಲಾಗುತ್ತಿರುವ ನಾಲ್ಕು ಚೀತಾಗಳು ಶುಕ್ರವಾರ ಮಧ್ಯರಾತ್ರಿ 1 ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನಕ್ಕೆ ಆಗಮಿಸಿದ್ದು, ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವುಗಳನ್ನು ಸ್ವೀಕರಿಸಿ ಬನ್ನೇರಘಟ್ಟ ಮೃಗಾಲಯದ ಅಧಿಕಾರಿಗಳಿಗೆ ಹಸ್ತಾಂತರಿಸಿದರು.

ತನ್ಮೂಲಕ ಬನ್ನೇರುಘಟ್ಟ ಮೃಗಾಲಯ ತನ್ನ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಚೀತಾಗಳಿಗೆ ಆಶ್ರಯ ನೀಡುತ್ತಿದೆ. ವನ್ಯಜೀವಿ (ರಕ್ಷಣೆ) ಕಾಯ್ದೆ ಅಡಿ ನಿಯಂತ್ರಕ ಅನುಮತಿ ಮತ್ತು ಪ್ರಾಣಿ ಕ್ವಾರಂಟೈನ್‌ ಅಧಿಕಾರಿಗಳ ಅನುಮೋದನೆ ನಂತರ ನಾಲ್ಕು ಆಫ್ರಿಕನ್‌ ಚೀತಾಗಳನ್ನು ಅರಣ್ಯ ಇಲಾಖೆ ತರಿಸಿಕೊಂಡಿದೆ. ಅವುಗಳನ್ನು ಬನ್ನೇರುಘಟ್ಟ ಮೃಗಾಲಯದಲ್ಲಿರಿಸಿ ಚೀತಾ ಪ್ರಭೇದವನ್ನು ಜನರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತಿದೆ.

ಕೆಲದಿನ ಕ್ವಾರಂಟೈನ್‌ನಲ್ಲಿಡಲು ವ್ಯವಸ್ಥೆ:

ಚೀತಾಗಳು ದಕ್ಷಿಣ ಆಫ್ರಿಕಾದಿಂದ ಬಂದಿರುವ ಕಾರಣದಿಂದಾಗಿ ಅವುಗಳ ಆರೋಗ್ಯ ತಪಾಸಣೆ ನಡೆಸಿ ಬನ್ನೇರುಘಟ್ಟದ ಮೃಗಾಲಯದಲ್ಲಿ ಕ್ವಾರಂಟೈನ್‌ನಲ್ಲಿ ಇಡಲಾಗುತ್ತದೆ. ಈ ವೇಳೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮತ್ತು ನಿಗದಿತ ಆಹಾರ ನೀಡಲಾಗುತ್ತದೆ. ಕ್ವಾರಂಟೈನ್‌ ಅವಧಿ ಮುಗಿದ ನಂತರ ಚೀತಾಗಳ ಆರೋಗ್ಯ ಆಧರಿಸಿ ಸಾರ್ವಜನಿಕ ವೀಕ್ಷಣೆಗೆ ಅನುವು ಮಾಡಿಕೊಡಲಾಗುತ್ತದೆ. ಚೀತಾಗಳ ಆಗಮನದ ಕುರಿತು ಪ್ರತಿಕ್ರಿಯಿಸಿರುವ ಈಶ್ವರ್‌ ಖಂಡ್ರೆ, ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಆಗಮಿಸಿರುವ ಚೀತಾಗಳು ಇಲ್ಲಿನ ವಾತಾವರಣ, ಹವಾಮಾನಕ್ಕೆ ಹೊಂದಿಕೊಳ್ಳುವಂತೆ ಕ್ವಾರಂಟೈನ್‌ಗೆ ಸೂಚಿಸಲಾಗಿದೆ. ಆರೋಗ್ಯ ಸಮಸ್ಯೆ ಎದುರಾಗದಂತೆ ಸೂಕ್ತ ನಿಗಾವಹಿಸುವಂತೆ ನಿರ್ದೇಶಿಸಲಾಗಿದೆ.


ಕರ್ನಾಟಕದಲ್ಲಿದ್ದವು ಚೀತಾಗಳು:

ಒಂದು ಕಾಲದಲ್ಲಿ ಕರ್ನಾಟಕದ ಕಾಡಿನಲ್ಲೇ ಸಿವಂಗಿ ಎಂದು ಕರೆಸಿಕೊಳ್ಳುವ ಚೀತಾಗಳಿದ್ದವು. ಹಿಂದೆ ಸಿವಂಗಿ ಎಂದು ಕರೆಯಲ್ಪಡುತ್ತಿದ್ದ ಚೀತಾಗಳು (ಏಷ್ಯಾಟಿಕ್ ಚೀತಾ) ಕರ್ನಾಟಕದ ಅರಣ್ಯ ಪ್ರದೇಶದಲ್ಲೇ ಕಾಣಿಸಿಕೊಳ್ಳುತ್ತಿದ್ದವು. ಆದರೆ, ಬೇಟೆ, ಆವಾಸ ಸ್ಥಾನಗಳ ಅವನತಿಯಿಂದಾಗಿ ಅವು ಕಣ್ಮರೆಯಾದವು. ಸಿವಂಗಿಗಳಲ್ಲಿ ಎರಡು ಪ್ರಬೇಧಗಳಿದ್ದು, ಭಾರತದಲ್ಲಿದ್ದ ಸಿವಂಗಿಯನ್ನು ಏಷ್ಯಾಟಿಕ್ ಚೀತಾಗಳೆಂದು ಹಾಗೂ ಆಫ್ರಿಕಾದಲ್ಲಿ ಆಫ್ರಿಕನ್ ಚೀತಾ ಎಂದು ಗುರುತಿಸಲಾಗುತ್ತಿದೆ.

ಅವುಗಳನ್ನು ಈಗ ಸಾರ್ವಜನಿಕರಿಗೆ ಪರಿಚಯಿಸುವ ದೃಷ್ಟಿಯಿಂದ ಬನ್ನೇರುಘಟ್ಟ ಮೃಗಾಲಯಕ್ಕೆ ತರಿಸಲಾಗಿದೆ. ಇಲ್ಲಿಗೆ ತರಲಾಗಿರುವ ಚೀತಾಗಳ ಸುರಕ್ಷತೆಗೆ ಆದ್ಯ ಗಮನ ನೀಡುವಂತೆ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.