ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಪಿಡಿಒಗಳು ಜಿಲ್ಲಾ ಮಟ್ಟದಲ್ಲಿ ವಾಸಿಸುವ ಬಗ್ಗೆ ದೂರುಗಳು ಬಂದಿವೆ. ಪಿಡಿಒಗಳು ಈ ಭಾಗದ ಗ್ರಾಪಂ ಸಮೀಪವೇ ಕಾಯಂ ಆಗಿ ವಾಸಿಸಬೇಕು. ಕಾನೂನು ಉಲ್ಲಂಘಿಸಿದವರಿಗೆ ಪಿಡಿಒಗಳು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಗ್ರಾಮಗಳ ಅಭಿವೃದ್ಧಿಗೆ ಪಂಚಾಯಿತಿಗಳನ್ನು ಮಾಡಲಾಗಿದೆ. ಅವುಗಳನ್ನು ಈಗ ಪಿಡಿಒಗಳು ಅಧೋಗತಿ ತಂದಿದ್ದಾರೆ ಎಂದು ಕರ್ನಾಟಕ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಪಿಡಿಒಗಳ ಕಾರ್ಯವೈಖರಿ ವಿರುದ್ಧ ಗರಂ ಆದರು.ಕರ್ನಾಟಕ ಕೋ-ಆಪರೇಟಿವ್ ಬ್ಯಾಂಕ್ ಸಭಾಭವನದಲ್ಲಿ ಸಾರ್ವಜನಿಕರು ಇಲಾಖೆಗಳ ವಿರುದ್ಧ ದೂರು ನೀಡಿದ ಹಿನ್ನೆಲೆಯಲ್ಲಿ ಸೋಮವಾರ ಅವರು ಅಹವಾಲು ಸ್ವೀಕರಿಸಿದರು. ರಸ್ತೆಗಳಲ್ಲಿ ಅಕ್ರಮವಾಗಿ ಕಟ್ಟಿದ ಕಟ್ಟಡವನ್ನು ತೆರವುಗೊಳಿಸಬೇಕು. ನೀವು ಯಾವುದೇ ಕ್ರಮಕೈಗೊಳ್ಳದಿದ್ದರೆ ನೀವು ಕೂಡ ಅಕ್ರಮದಲ್ಲಿ ಭಾಗಿಯಾದಂತೆಯೇ. ಹಳ್ಳಿಗಳಲ್ಲಿ ಪಿಡಿಒಗಳು ಚರಂಡಿ ನಿರ್ಮಾಣ ಮಾಡಿಕೊಡಲ್ಲ. ಇದರಿಂದ ರೋಗಗಳು ಬರದೇ ಇರುತ್ತಾವಾ?. ಜಿಲ್ಲೆಯಲ್ಲಿಯೇ ಮುದ್ದೇಬಿಹಾಳ ಹಿಂದುಳಿದ ತಾಲೂಕಾಗಿದೆ. ಹಿಂದೆ ಕೆಲ ಹಳ್ಳಿಗಳಿಗೆ ಸರಿಯಾದ ಬಸ್, ವಿದ್ಯುತ್ ಸೌಕರ್ಯ ಇರಲಿಲ್ಲ. ಆಗ ನಾಲ್ಕೈದು ಕಿಲೋ ಮೀಟರ್ ನಡೆದುಕೊಂಡು ಶಾಲೆಗೆ ಹೋಗುತ್ತಿದ್ದೆವು. ಈಗ ಸೌಕರ್ಯಗಳಿಗೆ ಸರ್ಕಾರ ಕೋಟ್ಯಂತರ ರೂಪಾಯಿ ಶಿಕ್ಷಣ, ಆರೋಗ್ಯ, ಮೂಲಸೌಕರ್ಯಕ್ಕೆ ಖರ್ಚು ಮಾಡುತ್ತಿದೆ. ಅಧಿಕಾರಿಗಳು ಅನುದಾನವನ್ನು ಸರಿಯಾಗಿ ಬಳಸಬೇಕು ಎಂಬ ಪರಿಕಲ್ಪನೆ ಇರಬೇಕು ಎಂದರು.
ಎಲ್ಲ ಮಾಹಿತಿ ನೀಡಲು ಸಿದ್ಧರಿರಿ:ಗ್ರಾಪಂ ಸದಸ್ಯರಿಗೆ, ಅಧ್ಯಕ್ಷರಿಗೆ ಪಿಡಿಒಗಳು ಹೆದರುವ ಅವಶ್ಯಕತೆ ಇಲ್ಲ. ನೀವು ಯಾವುದೇ ಬಿಲ್‌ನ್ನು ತಪ್ಪು ಬರಿಯದೇ ಖಂಡಿಸುವ ಗುಣ ಹೊಂದಿರಬೇಕು. ಈ ವೇಳೆ ಇಒ ಎನ್.ಎಸ್ ಮಸಳಿ ಮಾತನಾಡಿ, ಶೇ.50ಕ್ಕಿಂತ ಹೆಚ್ಚಿಗೆ ಸಂಗ್ರಹಿಸಲಾಗಿದೆ. ಆರ್‌ಒ (ಕುಡಿಯುವ ನೀರಿನ) ಘಟಕಗಳು ಹಾಳಾಗಿದ್ದರಿಂದ ಅದಕ್ಕೆ ಬಳಸಬೇಕು ಯೋಜನೆ ಇದೆ ಎಂದು ಸಿಇಒ ಹೇಳಿದರು.
ಜಿಲ್ಲಾಧಿಕಾರಿಗಳು, ಸಿಇಒ ಹಾಗೂ ಅಧಿಕಾರಿಗಳು ಪಟ್ಟಣ ಸರಿ ಮಾಡಿದ್ರೆ ಸಾಲದು ಹಳ್ಳಿಗಳಲ್ಲಿ ಚರಂಡಿ, ರಸ್ತೆ, ಆರೋಗ್ಯಕ್ಕೆ ಬೇಕಾದ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಬೇಕು ಎಂದು ಲೋಕಾಯುಕ್ತರು ಹೇಳಿದರು. ಈ ವೇಳೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದು ಸಿಇಒ ಉತ್ತರಿಸಿದರು. ಖಾಸಗಿ ಆಸ್ಪತ್ರೆಗಳಲ್ಲಿ ಅಧಿಕ ಹಣ ಪಡೆಯುತ್ತಾರೆಂದು ಸರ್ಕಾರಿ ಆಸ್ಪತ್ರೆಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದರೆ ಬಡ ಜನರಿಗೆ ಅನುಕೂಲ ವಾಗುತ್ತದೆ. ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ ಯಾವುದೇ ಅರ್ಜಿಯ ಮಾಹಿತಿ ಕೇಳಿದರೂ ಕೊಡಲು ಸಿದ್ಧ ಇರಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.ಕಳಪೆ ಗುಣಮಟ್ಟದ ಶಾಲೆಗಳ ನಿರ್ಮಾಣ
ಮನೆ, ನೀರು, ಆಸ್ತಿ ತೆರಿಗೆ ಹೀಗೆ ಯಾವ ಅನುದಾನಲ್ಲಿ ತೆರಿಗೆ ಎಷ್ಟು ಬಂದಿದೆ ಎಂಬುದನ್ನು ಸರಿಯಾಗಿ ಹಾಜರಾತಿ ಪುಸ್ತಕ ಮಾಡಬೇಕು. ಇದ್ಯಾವುದನ್ನು ಅಧಿಕಾರಿಗಳು ಪಾಲಿಸದಿದ್ದರೆ ನಿಮ್ಮ ವಿರುದ್ಧ ಕೇಸ್ ದಾಖಲಿಸವುದಲ್ಲದೇ, ಲೋಕಾಯುಕ್ತ ಅಧಿಕಾರಿಗಳು ನಿಮ್ಮ ಹಿಂದೆ ಬೀಳುತ್ತಾರೆ. ಸರಿಯಾಗಿ ಕಸ ವಿಲೇವಾರಿ ಘಟಕ ಸ್ಥಾಪನೆ ಮಾಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಹಳ್ಳಿ ಜನರಿಗೆ ಸರಿಯಾದ ಶಿಕ್ಷಣ ನೀಡುವಲ್ಲಿ ಡಿಡಿಪಿಐ, ಬಿಇಒ ಪಾತ್ರ ಬಹಳವಿದೆ. ಶಾಲೆಗಳಲ್ಲಿ ಸ್ವಚ್ಛತೆಗೆ ಬಹಳ ಮಹತ್ವ ಕೊಡಿ, ತಾಲೂಕಿನಲ್ಲಿ 66 ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಪ್ರತಿ ಹಳ್ಳಿಗಳಲ್ಲಿ ಪ್ರಾಥಮಿಕ ಶಾಲೆಗಳಿವೆ. ಕಳಪೆ ಗುಣಮಟ್ಟದ ಶಾಲೆಗಳು ನಿರ್ಮಾಣವಾದ ದೂರುಗಳು ಬಂದಿವೆ ಎಂದರು.ಈ ವೇಳೆ ಬಿಇಒ ಬಸವರಾಜ ಸಾವಳಗಿ ಉತ್ತರಿಸಿ 97 ಶಾಲೆಗಳಲ್ಲಿ 225 ಶಾಲೆಗಳು ಕೊಠಡಿಗಳು ಶೀಥಲಗೊಂಡಿವೆ. ಇದಕ್ಕೆ ಈಗಾಗಲೇ ವರದಿ ನೀಡಲಾಗಿದೆ ಎಂದರು. ಆಗ ಲೋಕಾಯುಕ್ತರು ವರದಿಯನ್ನು ಮೇಲಿನ ಅಧಿಕಾರಿಗಳಿಗೆ ಪ್ರಸ್ತಾಪಿಸಬೇಕು. ಆಗಲೂ ಆಗದಿದ್ದಾಗ ಲೋಕಾಯುಕ್ತ ಅಧಿಕಾರಿಗಳು ಬಿಡುವುದಿಲ್ಲ ಎಂದು ಸ್ಪಷ್ಟನೆ ನೀಡಿದರು. ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ವಸತಿ ನಿಲಯದ ಕೋಣೆಗಳಲ್ಲಿ 20 ಜನ ವಿದ್ಯಾರ್ಥಿಗಳನ್ನು ಹಾಕಲಾಗುತ್ತದೆ. ಇದು ದೌರ್ಭಾಗ್ಯ ಈ ಬಗ್ಗೆ ಕೇಸ್ ದಾಖಲಿಸಲಾಗುತ್ತದೆ ಎಂದರು.
ತೊಗರಿ ಬೆಳೆ ನಕಲಿ ಬಂದಿರುವುದಕ್ಕೆ ಏನು ಕ್ರಮ ಕೈಗೊಂಡಿದ್ದೀರಿ ಎಂಬುದಕ್ಕೆ ಹವಾಮಾನ ವೈಪರಿತ್ಯ, ಮಂಜು ಬಿದ್ದಿರುವುದರಿಂದ ಇಳುವರಿ ಕಡಿಮೆಯಾಗಿದೆ. ಬೀಜೋಪಚಾರ ಸರಿಯಾಗಿ ಮಾಡದ್ದರಿಂದ ಇಳುವರಿ ಕಡಿಮೆಯಾಗಿದೆ ಎಂದು ಧಾರವಾಡ ಹಾಗೂ ರಾಯಚೂರು ಕೃಷಿ ವಿಜ್ಞಾನಿಗಳು ವರದಿ ನೀಡಿದ್ದಾರೆ. ಈ ಬಗ್ಗೆ ವರದಿ ಕೂಡ ನೀಡಲಾಗಿದೆ ಎಂದು ತಾಲೂಕು ಕೃಷಿ ಅಧಿಕಾರಿ ಸುರೇಶ್ ಭಾವಿಕಟ್ಟಿ ಹೇಳಿದರು. ಅಲ್ಲಲ್ಲಿ ರೈತರ ಬೆಳೆಗಳನ್ನು ಪರಿಶೀಲನೆ ಮಾಡಲಾಗಿದ್ದು, ವಿಮೆ ಕಟ್ಟಿದ್ದರೆ ಅವರಿಗೆ ಖಂಡಿತವಾಗಿ ಬೆಳೆವಿಮೆ ಜಮೆ ಮಾಡುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.ಮುದ್ದೇಬಿಹಾಳದಲ್ಲಿ 42 ಸಾವಿರ ಜನಸಂಖ್ಯೆಯಿದ್ದು, ರಸ್ತೆಗಳಲ್ಲಿ ಫ್ಲೆಕ್ಸ್‌ಗಳನ್ನು ಹಾಕಲಾಗಿದೆ. ಕೂಡಲೇ ತೆರವುಗೊಳಿಸಬೇಕು. ಸುಪ್ರೀಂ ಆದೇಶವಿದೆ. ಮುಂದೆ ಫ್ಲೆಕ್ಸ್‌ಗಳು ಕಂಡರೆ ಕೇಸ್ ದಾಖಲಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಮಲ್ಲಿಕಾರ್ಜುನ ಬಿರಾದಾರಗೆ ಎಚ್ಚರಿಸಿದರು. ಈ ವೇಳೆ ಮಾತನಾಡಿದ ಮುಖ್ಯಾಧಿಕಾರಿ, ಒಟ್ಟು 18 ಕಸದ ವಾಹನಗಳಿದ್ದು, ಪ್ರತಿ ದಿನ 12 ಟನ್ ಕಸ ಸಂಗ್ರಹಿಸಲಾಗುತ್ತಿದೆ. ಮುಂದೆ ಟಿಪ್ಪರ್ ಮೂಲಕ ಕಸ ಸಂಗ್ರಹ ಮಾಡುವ ಚಿಂತನೆ ಇದೆ ಎಂದು ತಿಳಿಸಿದರು..
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್, ಸಿಇಒ ರಿಷಿ ಆನಂದ, ಲೋಕಾಯುಕ್ತ ಎಸ್ಪಿ ಟಿ.ಮಲ್ಲೇಶ್ ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.---------------
ಬಾಕ್ಸ್ಏನೇನು ದೂರುಗಳು..?
ಪಟ್ಟಣದಲ್ಲಿ ಮನೆ ಕಟ್ಟಲು ಅನುಮತಿಗಾಗಿ ಮುಖ್ಯಾಧಿಕಾರಿ ಲಂಚ ತೆಗೆದುಕೊಂಡಿದ್ದಾರೆ ಎಂದು ಪರಶುರಾಮ ಎಂಬುವರು ದೂರು ನೀಡಿದ್ದಾರೆ. ಎಸ್ಸಿ, ಎಸ್ಟಿ, ಟಿಎಸ್‌ಪಿ ಹಣ ದುರುಪಯೋಗ, ಜಲ ಜೀವನ ಮಿಶನ್, ಹೊಲದ ದಾರಿಗಳ ಸಮಸ್ಯೆ, ಆಸ್ತಿ ಬೇರೆವರಿಗೆ ವರ್ಗಾವಣೆ, ಮುದ್ದೇಬಿಹಾಳದ ಅಂಬೇಡ್ಕರ್ ವೃತ್ತ ಅರ್ಧ ಕಾಮಗಾರಿ, ಅನಧಿಕೃತ ಕಟ್ಟಡಕ್ಕೆ ಅನುಮತಿ ನೀಡಿದ ಪುರಸಭೆ ಹಾಗೂ ತಾಪಂಗಳ ವಿರುದ್ಧ ಸಾರ್ವಜನಿಕರಿಂದ ದೂರುಗಳು ಕೇಳಿಬಂದವು.------------ಕೋಟ್
ಪಿಡಿಒಗಳು ಪ್ರತಿದಿನ ಒಂದೊಂದು ಬಡವಾಣೆ ಆಯ್ದುಕೊಂಡು ಸ್ವಚ್ಛತೆ ಮಾಡಬೇಕು. ಪ್ರತಿ ಜಿಲ್ಲೆಯಲ್ಲಿ ಎಸ್ಪಿಗಳಿದ್ದಾರೆ. ಎರಡು ವಾರಕ್ಕೊಮ್ಮೆ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಾರೆ. ಉನ್ನತವಾದ ಅಭಿವೃದ್ಧಿ ಮಾಡಿದ ಪಿಡಿಒಗಳನ್ನು ಗುರುತಿಸಿ ಪ್ರಶಂಸೆಯ ಪತ್ರ ನೀಡಲಾಗುತ್ತದೆ. ಪಂಚಾಯತಿ ಅಧಿಕಾರಿಗಳು ಟ್ಯಾಕ್ಸ್ ಮೆಂಟೆನೆನ್ಸ್ ಪುಸ್ತಕ ಮಾಡದಿದ್ದರೆ ನೀವು ಈ ಹುದ್ದೆಗೆ ಯೋಗ್ಯರಲ್ಲವೆಂದು ಅರ್ಥ. ಅತಿ ಶೀಘ್ರದಲ್ಲಿ ನಮ್ಮ ಇಲಾಖೆ ನಿಮ್ಮ ವಿರುದ್ಧ ಕ್ರಮ ಕ್ರಗೊಳ್ಳುತ್ತದೆ.- ನ್ಯಾ.ಬಿ.ಎಸ್. ಪಾಟೀಲ್, ಕರ್ನಾಟಕ ಲೋಕಾಯುಕ್ತ