ಸಾರಾಂಶ
ಸಿಪಿಐಎಂ ಪಕ್ಷದಿಂದ ನೆಲ್ಯಹುದಿಕೇರಿಯಲ್ಲಿ ಭಾನುವಾರ ಪ್ರತಿಭಟನೆ ನಡೆಯಿತು. ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ಬಿ. ರಮೇಶ್ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಸಿದ್ದಾಪುರ
ಇತ್ತೀಚೆಗೆ ವಿರಾಜಪೇಟೆ ತಾಲೂಕಿನ ಚೆಂಬೆಬೆಳ್ಳೂರಿನ ಬೆಳೆಗಾರ ಪೊರ್ಕಂಡ ಚಿಣ್ಣಪ್ಪ ಅವರಿಂದ ಗುಂಡಿಕ್ಕಿ ಹತ್ಯೆಯಾದ ಅದಿವಾಸಿ ಯುವಕನ ಪೊನ್ನು ಆಲಿಯಾಸ್ ಪೊನ್ನಪ್ಪ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಸಿಪಿಐಎಂ ಪಕ್ಷದಿಂದ ನೆಲ್ಯಹುದಿಕೇರಿಯಲ್ಲಿ ಭಾನುವಾರ ಪ್ರತಿಭಟನೆ ನಡೆಯಿತು.ಈ ಸಂಧರ್ಭ ಮಾತನಾಡಿದ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್ ಬಿ ರಮೇಶ್ ತನ್ನ ಹಸಿವನ್ನು ನೀಗಿಸಲು ಹಲಸಿನ ಕಾಯಿ ಕೊಯ್ಯಲು ಮರ ಹತ್ತಿದ ಪನಿ ಎರವ ಪೊನ್ನು ಎಂಬ ಕಾರ್ಮಿಕನನ್ನು ತೋಟದ ಮಾಲೀಕ ಗುಂಡು ಹಾರಿಸಿ ಕೊಂದಿರುವುದನ್ನು ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಜಿಲ್ಲೆಯಲ್ಲಿ ನಿರಂತರವಾಗಿ ಆದಿವಾಸಿಗಳ ಮೇಲೆ ಹಲ್ಲೆ ಮಾಡುವುದು ದಾಳಿ ನಡೆಸುವುದು ಸಾಮಾನ್ಯವಾಗಿದೆ. ಜಿಲ್ಲಾಡಳಿತ ಇದಕ್ಕೆ ತಕ್ಷಣ ಕಡಿವಾಣ ಹಾಕಬೇಕು. ಈ ಕೃತ್ಯ ಎಸಗಿರುವ ಪೋರ್ಕಂಡ ಚಿಣ್ಣಪ್ಪನಿಗೆ ಕಠಿಣ ಶಿಕ್ಷೆಯಾಗಬೇಕು ಎಂದರು. ಮೃತ ಪೊನ್ನು ಕುಟುಂಬಕ್ಕೆ ಸರ್ಕಾರ ಮನೆ ನಿರ್ಮಾಣ ಮಾಡಿ ಕೊಡಬೇಕು. ಜೊತೆಗೆ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳನ್ನು ಸರ್ಕಾರ ಒದಗಿಸಿಕೊಡಬೇಕು ಮತ್ತು ಪೊನ್ನುವಿನ ಪತ್ನಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭ ಪಕ್ಷದ ಪ್ರಮುಖರಾದ ಪಿ ಆರ್ ಭರತ್, ಮಣಿ , ಶಿವರಾಮ, ಉದಯ ಕುಮಾರ್, ಕಾವೇರಿ ಸೇರಿದಂತೆ ಕಾರ್ಯಕರ್ತರು ಇದ್ದರು.