ಅಮೆರಿಕದ ಟೆಕ್ನಾಸ್‌ನಿಂದ ದಾವಣಗೆರೆಗೆ ಬಂದು ರಾಘವೇಂದ್ರ ಶೇಟ್ ಮತದಾನ

| Published : May 08 2024, 01:04 AM IST

ಅಮೆರಿಕದ ಟೆಕ್ನಾಸ್‌ನಿಂದ ದಾವಣಗೆರೆಗೆ ಬಂದು ರಾಘವೇಂದ್ರ ಶೇಟ್ ಮತದಾನ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಲೆಂದೇ ಈ ಸಲ ಅಮೆರಿಕಾದಿಂದ ಬಂದು, ನನ್ನ ಹಕ್ಕು ಚಲಾಯಿಸಿದ್ದೇನೆ. ಕಳೆದ ಚುನಾವಣೆಯಲ್ಲಿ ಮತ ಚಲಾಯಿಸಲೆಂದೇ ಬಂದರೂ ಮತದಾರರ ಪಟ್ಟಿಯಲ್ಲಿ ಹೆಸರು ಕೈ ಬಿಟ್ಟಿದ್ದರಿಂದ ಮತದಾನ ಅವಕಾಶ ತಪ್ಪಿತ್ತು. ಈಗ ಆ ಕೊರಗು ಕಡಿಮೆಯಾಗಿದೆ ಎಂದು ಅಮೆರಿಕದ ಟೆಕ್ಸಾಸ್‌ ವಾಸಿ, ದಾವಣಗೆರೆ ಮೂಲದ ರಾಘವೇಂದ್ರ ಕಮಲಾಕರ ಶೇಟ್ ಹೇಳಿದ್ದಾರೆ.

- ಸುಮಾರು 1.5 ಲಕ್ಷ ಖರ್ಚು । ಎಲ್ಲರಿಗೂ ಮಾದರಿಯಾದ ಮತಕಾಳಜಿ ।

- ಎಂಸಿಸಿ ಎ ಬ್ಲಾಕ್‌ ಶ್ರೀ ಬಕ್ಕೇಶ್ವರ ಶಾಲೆ ಮತಗಟ್ಟೆಯಲ್ಲಿ ಹಕ್ಕು ಚಲಾವಣೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಲೆಂದೇ ಈ ಸಲ ಅಮೆರಿಕಾದಿಂದ ಬಂದು, ನನ್ನ ಹಕ್ಕು ಚಲಾಯಿಸಿದ್ದೇನೆ. ಕಳೆದ ಚುನಾವಣೆಯಲ್ಲಿ ಮತ ಚಲಾಯಿಸಲೆಂದೇ ಬಂದರೂ ಮತದಾರರ ಪಟ್ಟಿಯಲ್ಲಿ ಹೆಸರು ಕೈ ಬಿಟ್ಟಿದ್ದರಿಂದ ಮತದಾನ ಅವಕಾಶ ತಪ್ಪಿತ್ತು. ಈಗ ಆ ಕೊರಗು ಕಡಿಮೆಯಾಗಿದೆ ಎಂದು ಅಮೆರಿಕದ ಟೆಕ್ಸಾಸ್‌ ವಾಸಿ, ದಾವಣಗೆರೆ ಮೂಲದ ರಾಘವೇಂದ್ರ ಕಮಲಾಕರ ಶೇಟ್ ಹೇಳಿದರು.

ನಗರದ ಉತ್ತರ ವಿಧಾನಸಭಾ ಕ್ಷೇತ್ರದ ಎಂಸಿಸಿ ಎ ಬ್ಲಾಕ್‌ನ ಶ್ರೀ ಬಕ್ಕೇಶ್ವರ ಶಾಲೆಯ ಮತಗಟ್ಟೆಯಲ್ಲಿ ಮಂಗಳವಾರ ಮತ ಚಲಾಯಿಸಿ ಮಾತನಾಡಿದ ಅವರು, ಹಿಂದಿನ ಸಲ ಮತದಾರರ ಪಟ್ಟಿಯಿಂದ ನನ್ನ ಹೆಸರು ಕೈಬಿಟ್ಟಿದ್ದರು. ತುಂಬಾ ಬೇಸರವೂ ಆಗಿತ್ತು. ಮಾಧ್ಯಮಗಳೂ ಈ ವಿಚಾರ ಸಾಕಷ್ಟು ಹೈಲೈಟ್ ಮಾಡಿದ್ದವು ಎಂದರು.

ಅಮೆರಿಕದಿಂದ ಬರುವ ಮುಂಚೆ ನನಗೆ ಯಾವಾಗ ಭಾರತಕ್ಕೆ ಬರುತ್ತೀಯಾ ಎಂಬುದಾಗಿ ಸಾಕಷ್ಟು ಕರೆಗಳು ಬಂದವು. ಆಗ ನನಗೆ ಗೊತ್ತಾಯಿತು. ಕಳೆದ ಸಲ ಆಗಿದ್ದ ಘಟನೆ ಪರಿಣಾಮ ಬೀರಿದೆಯೆಂದು. ಹಾಗಾಗಿ, ಮತದಾನ ಮಾಡಲೆಂದೇ ಈ ಸಲ ಮತ್ತೊಮ್ಮೆ ಬಂದು ಮತಹಕ್ಕು ಚಲಾಯಿಸಿದ್ದೇನೆ. ಇಲ್ಲಿಗೆ ಬಂದು ಹೋಗಲು ಸುಮಾರು ₹1.5 ಲಕ್ಷ ಖರ್ಚಾಗುತ್ತದೆ. ಆದರೆ, ನನ್ನ ಕರ್ತವ್ಯ ನಿರ್ವಹಿಸಲು ಬಂದಿದ್ದು, ಮತ ಚಲಾಯಿಸಿದ ನಂತರ ಮನಸ್ಸಿಗೆ ಸಂತೋಷವಾಗಿದೆ ಎಂದು ತಿಳಿಸಿದರು.

ಮತದಾನ ನನ್ನ ಹಕ್ಕು, ನನ್ನ ಕರ್ತವ್ಯ, ನನ್ನ ಜವಾಬ್ದಾರಿ ಸಹ ಆಗಿದೆ. ನಾವು ಅನಿವಾಸಿ ಭಾರತೀಯರು. ಮತದಾನ ಮಾಡಬೇಕೆಂಬ ಆಸೆ ಎಲ್ಲರಿಗೆ ಇದ್ದಂತೆ, ನಮಗೂ ಇರುತ್ತದೆ. ಆದರೆ, ನಮ್ಮ ಆಸೆಗೆ ಸಾಕಷ್ಟು ಅಡೆತಡೆಗಳಿವೆ. ನಾವು ಒಬ್ಬರು ಬಂದು ಹೋಗಲು ಸುಮಾರು ₹1.5 ಲಕ್ಷ ಖರ್ಚಾಗುತ್ತದೆ. ಕಡಿಮೆಯೆಂದರೂ ಒಂದು ವಾರ ರಜೆ ಮಾಡಬೇಕು. ಅಲ್ಲದೇ, ವಿದೇಶದಲ್ಲಿ ಓದುವ ನಮ್ಮ ಮಕ್ಕಳ ಶಾಲೆ ಇರುತ್ತದೆ. ಹಾಗಾಗಿ, ಬಿಟ್ಟು ಬರುವುದಕ್ಕೂ ಕಷ್ಟವಾಗುತ್ತದೆ ಎಂದರು.

- - - ಬಾಕ್ಸ್‌ ವೀಸಾ ಕೊಡುವ ವಿಚಾರದಲ್ಲಿ ತೊಂದರೆ ಪ್ರಮುಖವಾಗಿ ವೀಸಾ ಕೊಡುವ ವಿಚಾರದಲ್ಲಿ ತೊಂದರೆಯಾಗುತ್ತದೆ. ಅನಿವಾಸಿ ಭಾರತೀಯರು ಇಲ್ಲಿಗೆ ಬಂದು ಹೋಗುವುದೆಂದರೆ ಅಷ್ಟು ಸುಲಭವೂ ಅಲ್ಲ. ಗ್ರೀನ್ ಕಾರ್ಡ್ ಇರುವವರು ಬಂದು ಹೋಗಬಹುದು. ವೀಸಾ ಇರುವವರಿಗೆ ಇ-ಸ್ಟ್ಯಾಂಪಿಂಗ್‌ ಸೇರಿದಂತೆ ಇತರೆ ಕಿರಿಕಿರಿ ಇರುತ್ತವೆ. ಆದರೂ, ಇಲ್ಲಿಗೆ ಬರಲು ಕಷ್ಟವಾಗುತ್ತದೆ. ಈ ಎಲ್ಲ ಅನಿವಾಸಿ ಭಾರತೀಯರ ಪ್ರತಿನಿಧಿಯಾಗಿ ಈ ಸಲ ಮತದಾನ ಮಾಡಲು ಭಾರತಕ್ಕೆ ನಮ್ಮ ದಾವಣಗೆರೆಗೆ ಬಂದಿದ್ದೇನೆ ಎಂದು ರಾಘವೇಂದ್ರ ಕಮಲಾಕರ ಶೇಟ್ ಪ್ರತಿಕ್ರಿಯಿಸಿದರು.

- - - -7ಕೆಡಿವಿಜಿ1:

ರಾಘವೇಂದ್ರ ಕಮಲಾಕರ ಶೇಟ್, ಟೆಕ್ನಾಸ್‌, ಅಮೆರಿಕ