ಸಾರಾಂಶ
ಬೆಂಗಳೂರು : ಭಾರತ ಮತ್ತು ಪಾಕ್ ನಡುವಿನ ಯುದ್ಧ ಕಾರ್ಮೋಡದಿಂದಾಗಿ ಜಮ್ಮು ಕಾಶ್ಮೀರದ ಶ್ರೀನಗರದ ಶೇರ್-ಇ -ಕಾಶ್ಮೀರ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಕರ್ನಾಟಕದ 13 ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ರಾಜ್ಯಕ್ಕೆ ವಾಪಸ್ ಕರೆತರಲಾಗುತ್ತಿದೆ.
ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ನಿರ್ದೇಶನದ ಮೇರೆಗೆ ಅಧಿಕಾರಿಗಳು ರಾಜ್ಯದ ವಿದ್ಯಾರ್ಥಿಗಳನ್ನು ಈಗಾಗಲೇ ದೆಹಲಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಸೋಮವಾರ ಸಂಜೆ ವೇಳೆಗೆ ಎಲ್ಲರನ್ನೂ ಬೆಂಗಳೂರಿಗೆ ಕಳುಹಿಸಲಾಗುತ್ತದೆ. ದೆಹಲಿ ತಲುಪಿರುವ ವಿದ್ಯಾರ್ಥಿಗಳು ಕೇಂದ್ರ ಸರ್ಕಾರ ಹಾಗೂ ಸಚಿವರಿಗೆ ಧನ್ಯವಾದ ತಿಳಿಸಿದ್ದಾರೆ.
ಭದ್ರತೆಯ ನಡುವೆ ಶನಿವಾರ ಶ್ರೀನಗರದಿಂದ ಬಸ್ ಮೂಲಕ ಜಮ್ಮುವಿಗೆ ಪ್ರಯಾಣಿಸಿದ್ದ ವಿದ್ಯಾರ್ಥಿಗಳು ಭಾನುವಾರ ಮಧ್ಯಾಹ್ನದ ಹೊತ್ತಿಗೆ ರೈಲಿನಲ್ಲಿ ದೆಹಲಿ ತಲುಪಿದರು. ವಿದ್ಯಾರ್ಥಿಗಳ ಸ್ಥಳಾಂತರ ಮತ್ತು ಪ್ರಯಾಣದ ಎಲ್ಲಾ ಪ್ರಕ್ರಿಯೆಗಳ ಉಸ್ತುವಾರಿಯನ್ನು ಸ್ವತಃ ಕೇಂದ್ರ ಸಚಿವರು ವಹಿಸಿದ್ದರು. ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದರು.
ಈ ಸಂಬಂಧ ಪಕಟಣೆ ನೀಡಿರುವ ಕುಮಾರಸ್ವಾಮಿ ಅವರು, ಕೇಂದ್ರ ಸರ್ಕಾರದ ಅಧಿಕಾರಿಗಳು, ರೈಲ್ವೆ ಸಿಬ್ಬಂದಿ, ಸಚಿವಾಲಯದ ಅಧಿಕಾರಿಗಳ ಸಹಕಾರದೊಂದಿಗೆ ರಾಜ್ಯದ ವಿದ್ಯಾರ್ಥಿಗಳನ್ನು ಕರೆತರಲು ಕ್ರಮ ವಹಿಸಲಾಗಿದೆ. ಈ ಕಾರ್ಯಾಚರಣೆಗೆ ನೆರವಾದ ಎಲ್ಲವರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.